ಕಲಬುರಗಿ: ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jevargi) ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಬಳಿ ಎದೆ ನಡುಗಿಸುವ ದಾರುಣ ಘಟನೆಯೊಂದು (Tragedy) ನಡೆದಿದೆ. ನೋಡುನೋಡುತ್ತಿದ್ದಂತೆಯೇ ಹೆತ್ತ ತಂದೆಯೊಬ್ಬರು ಮಗನ ಕಣ್ಣೆದುರೇ ಭೀಮಾ ನದಿಯ (Bhima River) ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತ ದುರ್ದೈವಿಯನ್ನು ವಿಜಯ್ ರಾಜು ಎಂದು ಗುರುತಿಸಲಾಗಿದೆ. ನದಿಯ ಆಚೆ ದಡದಲ್ಲಿದ್ದ ತಮ್ಮ ಎಮ್ಮೆಯನ್ನು ವಾಪಸ್ ಕರೆತರಲು ವಿಜಯ್ ಅವರು ನದಿಗೆ ಇಳಿದಿದ್ದರು. ಆದರೆ ಅವರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನೀರಿನ ಆಳ ಮತ್ತು ಹರಿವಿನ ವೇಗ ತಿಳಿಯದೆ ಅವರು ನದಿಯ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿ ನಿಯಂತ್ರಣ ತಪ್ಪಿ ಮುಳುಗಲಾರಂಭಿಸಿದರು. ತಂದೆ ನದಿ ದಾಟುತ್ತಿದ್ದ ಸಂದರ್ಭದಲ್ಲಿ ದಡದ ಮೇಲಿದ್ದ ಮಗ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ. ತಂದೆ ನೀರಿನಲ್ಲಿ ಮುಳುಗುತ್ತಾ "ಕಾಪಾಡಿ, ಕಾಪಾಡಿ" ಎಂದು ಕೈಕಾಲು ಬಡಿಯುತ್ತಿದ್ದರೂ, ಅತ್ತ ದಡದಲ್ಲಿದ್ದ ಮಗನಿಗೆ ಏನು ಮಾಡಬೇಕೆಂದು ತೋಚದೆ ಅಸಹಾಯಕನಾಗಿ ನಿಂತಿದ್ದನು. ದುರದೃಷ್ಟವಶಾತ್, ತಂದೆಯ ಕೊನೆಯ ಕ್ಷಣದ ಭೀಕರ ದೃಶ್ಯಗಳು ಮಗನ ಮೊಬೈಲ್ ಕ್ಯಾಮೆರಾದಲ್ಲೇ ಸೆರೆಯಾಗಿದ್ದು, ನೋಡುವವರ ಕಣ್ಣಾಲಿಗಳು ತುಂಬಿ ಬರುವಂತಿವೆ. ಕಣ್ಣೆದುರೇ ತಂದೆಯನ್ನು ಕಳೆದುಕೊಂಡ ಮಗನ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಸ್ಥಳಕ್ಕೆ ಗ್ರಾಮಸ್ಥರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

