ತೆಲಂಗಾಣ: ಒಂದೆಡೆ ಆಟವಾಡುತ್ತಾ ಹೋಗಿ ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ಮೃತಪಟ್ಟರೆ, ಮತ್ತೊಂದೆಡೆ ಕಣ್ಣಿನ ರೆಪ್ಪೆಯಂತೆ ಸಾಕಿದ ಮೊಮ್ಮಗನ ಸಾವಿನ ಸುದ್ದಿ ಕೇಳಿ ಆಘಾತ ತಡೆಯಲಾಗದೆ ಅಜ್ಜಿಯೂ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆಯೊಂದು(Tragedy) ತೆಲಂಗಾಣದ (Telangana) ಅಂಬೇಡ್ಕರ್ ನಗರದಲ್ಲಿ ನಡೆದಿದೆ . ಒಂದೇ ಕುಟುಂಬದ ಇಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ಸಾವನ್ನಪ್ಪಿರುವುದು ಇಡೀ ಗ್ರಾಮವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.
ಸ್ಥಳೀಯರು ಹಾಗೂ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಅಂಬೇಡ್ಕರ್ ನಗರದ ನಿವಾಸದಲ್ಲಿ ಕುಟುಂಬದವರೆಲ್ಲರೂ ಎಂದಿನಂತೆ ತಮ್ಮ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು. ಈ ಸಮಯದಲ್ಲಿ ಮನೆಯಲ್ಲಿದ್ದ ಒಂದೂವರೆ ವರ್ಷದ ಪುಟ್ಟ ಬಾಲಕ ರಿಯಾನ್ಸ್ ಆಟವಾಡುತ್ತಾ ಒಂಟಿಯಾಗಿ ಹೊರಗಡೆ ಬಂದಿದ್ದಾನೆ. ಈ ವೇಳೆ ಆವರಣದಲ್ಲಿದ್ದ ನೀರಿನ ಸಂಪಿನ ಬಳಿ ತೆರಳಿದ ಮಗು, ಆಕಸ್ಮಿಕವಾಗಿ ಕಾಲು ಜಾರಿ ಒಳಗೆ ಬಿದ್ದಿದೆ. ಸ್ವಲ್ಪ ಸಮಯದ ನಂತರ ಮಗು ಕಾಣದಿದ್ದಾಗ ಆತಂಕಗೊಂಡ ಪೋಷಕರು ಸುತ್ತಮುತ್ತ ಹುಡುಕಾಡಿದ್ದಾರೆ. ಕಡೆಗೆ ನೀರಿನ ಸಂಪಿನಲ್ಲಿ ಮಗು ಬಿದ್ದಿರುವುದನ್ನು ಗಮನಿಸಿ ತಕ್ಷಣವೇ ಹೊರಕ್ಕೆ ತೆಗೆದಿದ್ದಾರೆ. ಆದರೆ ಅಷ್ಟರಲ್ಲೇ ಮಗು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಕೊನೆಯುಸಿರೆಳೆದಿತ್ತು. ಕಣ್ಣೆದುರೇ ಆಟವಾಡುತ್ತಇದ್ದ ಮಗು ಶವವಾಗಿ ಬಿದ್ದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇತ್ತ ಮಗುವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ 65 ವರ್ಷದ ಅಜ್ಜಿ ನಾಗಮ್ಮ ಮೊಮ್ಮಗನ ಮೃತದೇಹವನ್ನು ನೋಡಿ ತೀವ್ರ ಮಾನಸಿಕ ಆಘಾತಕ್ಕೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ನಾಗಮ್ಮ ಅವರನ್ನು ಬದುಕಿಸಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಒಂದೇ ಮನೆಯಲ್ಲಿ ಕೆಲವೇ ಹೊತ್ತಿನ ಅಂತರದಲ್ಲಿ ಮಗು ಹಾಗೂ ವೃದ್ಧೆ ಸಾವಿಗೀಡಾದ ಕರುಣಾಜನಕ ದೃಶ್ಯವನ್ನು ಕಂಡು ಸ್ಥಳೀಯ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ. ಘಟನೆಯ ಕುರಿತು ಮಾಹಿತಿ ಪಡೆದ ಜನಗಾಮ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಆಕಸ್ಮಿಕ ಸಾವು ಹಾಗೂ ವೃದ್ಧೆಯ ಹೃದಯಾಘಾತದ ಕುರಿತು ಅಗತ್ಯ ಮಾಹಿತಿ ಕಲೆಹಾಕಿರುವ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

