ಬೆಂಗಳೂರು: ದೇಶದಲ್ಲಿ ರೈಲು ಅಪಘಾತಗಳನ್ನು(Train accident) ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ(Indian Railway Department) ಮಹತ್ವದ ಹೆಜ್ಜೆ ಇಟ್ಟಿದೆ. ಬಹುನಿರೀಕ್ಷಿತ 'ಕವಚ'(Kavacha) ರಕ್ಷಣಾ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆ ರಾಜ್ಯದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆದಿದ್ದು, ಶೀಘ್ರದಲ್ಲೇ ಎಲ್ಲಾ ಪ್ರಮುಖ ರೈಲು ಮಾರ್ಗಗಳಲ್ಲಿ ಈ ವ್ಯವಸ್ಥೆಯನ್ನು ಹಂತಹಂತವಾಗಿ ಅಳವಡಿಸಲು ನೈಋತ್ಯ ರೈಲ್ವೆ ಸಜ್ಜಾಗಿದೆ.
ಬೆಂಗಳೂರು ವಿಭಾಗದ ವಿವಿಧ ಮಾರ್ಗಗಳಲ್ಲಿ ಇತ್ತೀಚೆಗೆ ಈ ಫೀಲ್ಡ್ ಟ್ರಯಲ್ ನಡೆಸಲಾಗಿದ್ದು, ತಂತ್ರಜ್ಞಾನದ ಕಾರ್ಯಕ್ಷಮತೆಯನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ. ಎಲ್ಲೆಲ್ಲಿ ಪರೀಕ್ಷೆ ಯಶಸ್ವಿ? ಆಗಸ್ಟ್ ಒಳಗಾಗಿ ಪ್ರಮುಖ ಮಾರ್ಗಗಳಿಗೆ ಕನೆಕ್ಟ್ ಇಂಜಿನ್‌ಗಳಿಗೆ ರಕ್ಷಣಾ ಕವಚ ಜೋಡಣೆ ಚುರುಕು ಏನಿದು 'ಕವಚ' ವ್ಯವಸ್ಥೆ? ಇದು ಹೇಗೆ ಕೆಲಸ ಮಾಡುತ್ತದೆ? ಒಂದೇ ಟ್ರ್ಯಾಕ್‌ನಲ್ಲಿ ಎದುರು-ಬದುರಾಗಿ ಅಥವಾ ಹಿಂಬದಿಯಿಂದ ಮತ್ತೊಂದು ರೈಲು ಬರುತ್ತಿದ್ದರೆ ಇದು ತಕ್ಷಣವೇ ಪತ್ತೆ ಹಚ್ಚುತ್ತದೆ. ಹಳಿ ಬದಲಾಯಿಸುವ ಜಾಗದಲ್ಲಿ ಅಪಘಾತದ ಮುನ್ಸೂಚನೆ ಸಿಕ್ಕರೆ ತಕ್ಷಣವೇ ಚಾಲಕರ ಕ್ಯಾಬಿನ್‌ನಲ್ಲಿ ಅಲರ್ಟ್ ಸಂದೇಶ ರವಾನೆಯಾಗುತ್ತದೆ. ಒಂದು ವೇಳೆ ಚಾಲಕರು ಈ ಎಚ್ಚರಿಕೆಯನ್ನು ಗಮನಿಸದೆ ಬ್ರೇಕ್ ಹಾಕದಿದ್ದರೆ, 'ಕವಚ' ತಂತ್ರಜ್ಞಾನವೇ ತಾನಾಗಿಯೇ (ಸ್ವಯಂಚಾಲಿತವಾಗಿ) ಬ್ರೇಕ್ ಹಾಕಿ, ಸಿಗ್ನಲ್ ದಾಟುವ ಮುನ್ನವೇ ರೈಲನ್ನು ಸುರಕ್ಷಿತವಾಗಿ ನಿಲ್ಲಿಸುತ್ತದೆ. ನೆಟ್‌ವರ್ಕ್ ಇಲ್ಲದ ಅಥವಾ ಸಂವಹನ ಸಂಪೂರ್ಣ ವೈಫಲ್ಯವಾಗಿರುವ ಸಂದರ್ಭದಲ್ಲೂ ಈ ತಂತ್ರಜ್ಞಾನ ರೈಲನ್ನು ಸುರಕ್ಷಿತವಾಗಿ ರಕ್ಷಿಸುತ್ತದೆ. ದೇಶದಲ್ಲಿ 2016ರಲ್ಲಿ ಮೊದಲ ಬಾರಿಗೆ ಪ್ರಯಾಣಿಕ ರೈಲಿಗೆ ಈ 'ಕವಚ' ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಇದೀಗ ರಾಜ್ಯದಲ್ಲೂ ಇದರ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೊಸ ಭರವಸೆ ಸಿಕ್ಕಂತಾಗಿದೆ.
ಬೆಂಗಳೂರು ವಿಭಾಗದ ವ್ಯಾಪ್ತಿಯ ವೈಟ್‌ಫೀಲ್ಡ್-ಜೋಲಾರ್‌ಪೇಟೆ ಮಾರ್ಗದ ಮುಲಾನುರ ಮತ್ತು ಕುಪ್ಪಂ ನಡುವಿನ 12 ಕಿ.ಮೀ, ಮಾಲೂರು-ದೇವನಕುಂದಿ ಬ್ಲಾಕ್‌ನ 8 ಕಿ.ಮೀ ಹಾಗೂ ತುಮಕೂರು-ಅರಸೀಕೆರೆ ನಡುವಿನ 98 ಕಿ.ಮೀ ವ್ಯಾಪ್ತಿಯಲ್ಲಿ 'ಕವಚ'ದ ಪರೀಕ್ಷಾರ್ಥ ಚಾಲನೆ ಮತ್ತು ಕಮಿಷನಿಂಗ್ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ಈಗಾಗಲೇ ಯಶಸ್ವಿ ಪರೀಕ್ಷೆ ನಡೆಸಿರುವ ರೈಲ್ವೆ ಇಲಾಖೆ, ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ನಗರಗಳ ಸಂಪರ್ಕ ರಸ್ತೆಗಳಿಗೆ ಈ ಕವಚ ತೊಡಿಸಲು ಯೋಜನೆ ರೂಪಿಸಿದೆ. ಯಲಹಂಕ-ಧರ್ಮಾವರಂ (159 ಕಿ.ಮೀ) ಮತ್ತು ಬೆಂಗಳೂರು-ಮೈಸೂರು (137 ಕಿ.ಮೀ) ಮಾರ್ಗದಲ್ಲಿ ಜುಲೈ ಅಂತ್ಯದೊಳಗೆ ಈ ತಂತ್ರಜ್ಞಾನ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿದೆ. ಇನ್ನು ಬೆಂಗಳೂರು-ಧರ್ಮಪುರಿ ಜಂಕ್ಷನ್ (163 ಕಿ.ಮೀ) ಸೆಕ್ಷನ್‌ನಲ್ಲಿ ಆಗಸ್ಟ್ ಕೊನೆಯೊಳಗೆ 'ಕವಚ' ವ್ಯವಸ್ಥೆ ಅಳವಡಿಸಲು ಭರದಿಂದ ಸಿದ್ಧತೆಗಳು ನಡೆದಿವೆ.
ನೈಋತ್ಯ ರೈಲ್ವೆ ವಲಯದ ಪ್ರಮುಖ ಲೋಕೊ ಶೆಡ್‌ಗಳಲ್ಲಿ ರೈಲ್ವೆ ಎಂಜಿನ್‌ಗಳಿಗೆ 'ಕವಚ' ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ ಅತ್ಯಂತ ವೇಗವಾಗಿ ಸಾಗುತ್ತಿದೆ. ಬೆಂಗಳೂರಿನ ಕೃಷ್ಣರಾಜಪುರಂ ಶೆಡ್‌ನಲ್ಲಿರುವ ಒಟ್ಟು ಎಂಜಿನ್‌ಗಳ ಪೈಕಿ 133 ಡೀಸೆಲ್ ಮತ್ತು 100 ಎಲೆಕ್ಟ್ರಿಕ್ ಎಂಜಿನ್ ಸೆಟ್‌ಗಳಿಗೆ ಇದನ್ನು ಅಳವಡಿಸಲಾಗುತ್ತಿದೆ. ಹಾಗೆಯೇ ಹುಬ್ಬಳ್ಳಿ ಶೆಡ್‌ನಲ್ಲಿ 177 ಡೀಸೆಲ್ ಮತ್ತು 68 ಎಲೆಕ್ಟ್ರಿಕ್ ಎಂಜಿನ್ ಸೆಟ್‌ಗಳಿಗೆ ಕವಚ ಸುರಕ್ಷತೆ ಸಿಗಲಿದೆ.
ಇದು ಭಾರತೀಯ ರೈಲ್ವೆಯು ಸ್ವದೇಶಿ ತಂತ್ರಜ್ಞಾನದಡಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯಾಗಿದೆ (ATP).

