Dailyhunt Logo
  • Light mode
    Follow system
    Dark mode
    • Play Story
    • App Story
TUMAKUR: ಕುರಿ ಬೇಟೆಗೆ ಬಂದು ಮನೆಯೊಳಗೆ ಎಂಟ್ರಿ ಕೊಟ್ಟ ಚಿರತೆ! -VIDEO

TUMAKUR: ಕುರಿ ಬೇಟೆಗೆ ಬಂದು ಮನೆಯೊಳಗೆ ಎಂಟ್ರಿ ಕೊಟ್ಟ ಚಿರತೆ! -VIDEO

Navasamaja.com 8 hrs ago

ತುಮಕೂರು: ಕುಣಿಗಲ್ (Tumakur) ತಾಲ್ಲೂಕಿನ ಬಂಡಿಗೌಡನಪಾಳ್ಯ ಗ್ರಾಮದಲ್ಲಿ ಮನೆಯೊಳಗೆ ನುಗ್ಗಿದ ಚಿರತೆಯೊಂದು (Leopard Attack) ದಂಪತಿಯನ್ನು ಕೆಲಕಾಲ ಆತಂಕಕ್ಕೀಡುಮಾಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಾಣಿಯನ್ನು (Wildlife Rescue) ಸೆರೆಹಿಡಿದಿರುವ ರೋಚಕ ಘಟನೆ ನಡೆದಿದೆ.

ಮನೆಯೊಳಗೆ ನುಗ್ಗಿದ ಚಿರತೆ; ದಂಪತಿ ಪಾರು
ಗ್ರಾಮದ ಚಿಕ್ಕಮರಿಯಪ್ಪ ಹಾಗೂ ನರಸಮ್ಮ ದಂಪತಿ ತಮ್ಮ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ ವೇಳೆ, ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಚಿರತೆಯೊಂದು ನೇರವಾಗಿ ಮನೆಯೊಳಗೆ ಪ್ರವೇಶಿಸಿದೆ. ಅದಕ್ಕೂ ಮುನ್ನ ಗ್ರಾಮದಲ್ಲಿ ಓಡಾಡುತ್ತಿದ್ದ ಈ ಚಿರತೆ, ಮನೆಯ ಹೊರಗೆ ಕಟ್ಟಿದ್ದ ಮೇಕೆ ಮರಿಯನ್ನು ಬೇಟೆಯಾಡಿ ಕೊಂಡೊಯ್ದಿತ್ತು.

ಮನೆಯೊಳಗೆ ಚಿರತೆ ದಿಢೀರನೆ ನುಗ್ಗುವುದನ್ನು ಕಂಡು ಬೆಚ್ಚಿಬಿದ್ದ ನರಸಮ್ಮ, ತಕ್ಷಣವೇ ಚಾಣಕ್ಷತನ ಪ್ರದರ್ಶಿಸಿ ಧೈರ್ಯದಿಂದ ಹೊರಗೆ ಓಡಿ ಬಂದು ಹೊರಗಿನಿಂದ ಬಾಗಿಲು ಹಾಕಿದ್ದಾರೆ. ಇದರಿಂದಾಗಿ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ. ಮನೆಯೊಳಗೆ ಸಿಲುಕಿಕೊಂಡ ಚಿರತೆ ಮಂಚದ ಅಡಿಯಲ್ಲಿ ಅಡಗಿಕೊಂಡಿತ್ತು.

ಆರು ಗಂಟೆಗಳ ರೋಚಕ ಕಾರ್ಯಾಚರಣೆ
ಘಟನೆ ಕುರಿತು ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದರು. ಬನ್ನೇರುಘಟ್ಟದಿಂದ ಆಗಮಿಸಿದ ಅರವಳಿಕೆ ತಜ್ಞ ಕಿರಣ್ ನೇತೃತ್ವದ ತಜ್ಞರ ತಂಡವು ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಸಾಥ್ ನೀಡಿತು. ಸತತ ಆರು ಗಂಟೆಗಳಿಗೂ ಅಧಿಕ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಚಿರತೆಗೆ ಅರವಳಿಕೆ ಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿಯಲಾಯಿತು.

ಕಳೆದ ಒಂದು ತಿಂಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಸಂಚರಿಸುತ್ತಿದ್ದುದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಚಿರತೆ ಸೆರೆಯಾಗಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ವಸತಿ ಪ್ರದೇಶಗಳಲ್ಲಿ ಪದೇಪದೆ ಪ್ರಾಣಿಗಳು ಪ್ರವೇಶಿಸುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja