Dailyhunt Logo
  • Light mode
    Follow system
    Dark mode
    • Play Story
    • App Story
TUMAKUR: ನಕಲಿ ನಕ್ಸಲ್‌ ಕಿಡಿಗೇಡಿತನ, ಮೋಟರ್ ಸ್ಟಾರ್ಟರ್‌ಗೆ ಬಾಂಬ್‌ ಅಳವಡಿಸಿ ಕೊ*ಲೆ ಯತ್ನ

TUMAKUR: ನಕಲಿ ನಕ್ಸಲ್‌ ಕಿಡಿಗೇಡಿತನ, ಮೋಟರ್ ಸ್ಟಾರ್ಟರ್‌ಗೆ ಬಾಂಬ್‌ ಅಳವಡಿಸಿ ಕೊ*ಲೆ ಯತ್ನ

Navasamaja.com 2 weeks ago

ತುಮಕೂರು: ಮಾಜಿ ನಕ್ಸಲ್‌ ಎಂದು ಹೇಳಿಕೊಂಡು ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾದ ವ್ಯಕ್ತಿಯೊಬ್ಬ ಜಮೀನಿನ ನೀರಿನ ಮೋಟರ್‌ ಸ್ಟಾರ್ಟರ್‌ಗೆ ಬಾಂಬ್‌ ಅಳವಡಿಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಘಟನೆ ತುಮಕೂರು (Tumakur) ಜಿಲ್ಲೆಯ ಪಾವಗಡ ತಾಲೂಕಿನ ಕನಿಕಲಬಂಡೆ ಗ್ರಾಮದಲ್ಲಿ ನಡೆದಿದೆ.

ಕನಿಕಲಬಂಡೆ ಗ್ರಾಮದ ನಿವಾಸಿ ವೆಂಕಟೇಶ್‌ ಎಂಬಾತ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮದ ಗಿರಿಯಪ್ಪ ಎಂಬುವವರ ಜಮೀನಿನಲ್ಲಿದ್ದ ನೀರಿನ ಮೋಟರ್‌ನ ಸ್ಟಾರ್ಟರ್‌ಗೆ ಬಾಂಬ್‌ ಅಳವಡಿಸಲಾಗಿತ್ತು ಎನ್ನಲಾಗಿದೆ.

ಮೋಟರ್ ಆನ್‌ ಮಾಡುತ್ತಿದ್ದಂತೆ ಸ್ಫೋಟ!

ಇಂದು ಬೆಳಗ್ಗೆ ಗಿರಿಯಪ್ಪ ಅವರು ಜಮೀನಿಗೆ ತೆರಳಿ ನೀರಿನ ಮೋಟರ್‌ ಚಾಲನೆ ಮಾಡಲು ಸ್ಟಾರ್ಟರ್‌ ಆನ್‌ ಮಾಡಿದ ವೇಳೆ ಸ್ಫೋಟ ಸಂಭವಿಸಿದೆ. ಲಘು ಪ್ರಮಾಣದಲ್ಲಿ ಬಾಂಬ್‌ ಸ್ಫೋಟಗೊಂಡಿದ್ದರಿಂದ ಗಿರಿಯಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ವೆಂಕಟೇಶ್‌ ತನ್ನನ್ನು ಮಾಜಿ ನಕ್ಸಲ್‌ ಎಂದು ಪರಿಚಯಿಸಿಕೊಂಡು ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ. ನಾಡ ಪಿಸ್ತೂಲ್‌ ಹಾಗೂ ನಾಡ ಬಾಂಬ್‌ ತೋರಿಸಿ ಭಯ ಹುಟ್ಟಿಸುತ್ತಿದ್ದ ಹಾಗೂ ಗ್ರಾಮಸ್ಥರಿಂದ ಹಣ, ದವಸ-ಧಾನ್ಯ ಪಡೆದುಕೊಳ್ಳುತ್ತಿದ್ದ ಎಂದು ಗಿರಿಯಪ್ಪ ಈ ಹಿಂದೆ ದೂರು ನೀಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರ ವಿರುದ್ಧ ದ್ವೇಷ ಬೆಳೆಸಿಕೊಂಡು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಆರೋಪ ಇದೀಗ ಕೇಳಿಬಂದಿದೆ.

ಬಾಂಬ್‌ ಸ್ಫೋಟದ ಘಟನೆ ಬಳಿಕ ವೆಂಕಟೇಶ್‌ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಈ ಘಟನೆ ಪಾವಗಡ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಂಬ್‌ ಅಳವಡಿಸಿದವರು ಯಾರು, ಅದರ ಸ್ವರೂಪ ಏನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja