ಭೋಪಾಲ್: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ತ್ವಿಶಾ ಶರ್ಮಾ (Twisha Sharma Case) ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತ ಗಿರಿಬಾಲಾ ಸಿಂಗ್ ಅವರ ಬೇಲ್ ಅನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದು ಮಾಡಿದೆ. ಈ ಬೆನ್ನಲ್ಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ತನಿಖೆಯನ್ನು ತೀವ್ರಗೊಳಿಸಿದೆ.
ಗಿರಿಬಾಲಾ ಸಿಂಗ್ ವಿಚಾರಣೆ ಮೇ 12 ರಂದು ಭೋಪಾಲ್‌ನಲ್ಲಿರುವ ಪತಿಯ ಮನೆಯಲ್ಲಿ ತ್ವಿಶಾ ಶರ್ಮಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ಗಿರಿಬಾಲಾ ಸಿಂಗ್ ಮತ್ತು ಆಕೆಯ ಪುತ್ರ ಸಮರ್ಥ್ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಆದರೆ, ಸ್ಥಳೀಯ ಸೆಷನ್ಸ್ ನ್ಯಾಯಾಲಯವು ಮೇ 15 ರಂದು ಗಿರಿಬಾಲಾ ಅವರಿಗೆ ಮುಂಗಡ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ದೇವನಾರಾಯಣ ಮಿಶ್ರಾ ಅವರು ನೀಡಿರುವ 17 ಪುಟಗಳ ಸುದೀರ್ಘ ಆದೇಶದಲ್ಲಿ, ಕೆಳ ನ್ಯಾಯಾಲಯದ ಜಾಮೀನು ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ. ಸಾಕ್ಷಿ ನಾಶ ಮಾಡುವ ಸಾಧ್ಯತೆ ವಿಚಾರಣೆಯ ವೇಳೆ ಮೃತ ತ್ವಿಶಾ ಶರ್ಮಾ ಅವರ ಕುಟುಂಬದ ಪರ ವಕೀಲರು ಹೈಕೋರ್ಟ್‌ಗೆ ಮಹತ್ವದ ಸಾಕ್ಷ್ಯಗಳನ್ನು ಮಂಡಿಸಿದ್ದರು. ಮದುವೆಯಾದ ದಿನದಿಂದಲೂ ತ್ವಿಶಾ ಪತಿಯ ಮನೆಯಲ್ಲಿ ತೀವ್ರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರು ಮತ್ತು ಅಲ್ಲಿಂದ ಹೊರಬರಲಾರದ ಸ್ಥಿತಿಯಲ್ಲಿದ್ದರು ಎಂದು ವಾದಿಸಲಾಗಿದೆ. ಇದಕ್ಕಿಂತಲೂ ಗಂಭೀರವಾಗಿ, ಮುಂಗಡ ಜಾಮೀನು ಪಡೆದ ನಂತರ ಪ್ರಭಾವಿ ಆರೋಪಿ ಗಿರಿಬಾಲಾ ಸಿಂಗ್ ಅವರು ಸಾಕ್ಷ್ಯನಾಶ ಮಾಡಲು ಮತ್ತು ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಮೇ 13 ರಂದು ಪೊಲೀಸರು ಅವರ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದರೂ, ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ತಮಗೆ ಅನುಕೂಲಕರವಾದ ಆಯ್ದ ತುಣುಕುಗಳನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು ಎಂದು ಅರ್ಜಿದಾರರು ಆರೋಪಿಸಿದ್ದು, ಪ್ರಾಸಿಕ್ಯೂಷನ್ ಕೂಡ ಈ ವಾದವನ್ನು ಬಲವಾಗಿ ಬೆಂಬಲಿಸಿದೆ. ಈ ವಾರದ ಆರಂಭದಲ್ಲಷ್ಟೇ ಮಧ್ಯಪ್ರದೇಶ ಪೊಲೀಸರಿಂದ ಪ್ರಕರಣವನ್ನು ಅಧಿಕೃತವಾಗಿ ಕೈಗೆತ್ತಿಕೊಂಡಿರುವ ಸಿಬಿಐ, ಆರೋಪಿಗಳ ವಿರುದ್ಧ ಮರು ಎಫ್‌ಐಆರ್ ದಾಖಲಿಸಿಕೊಂಡಿದೆ. ವಕೀಲ ವೃತ್ತಿ ಮಾಡುತ್ತಿರುವ ಟ್ವಿಶಾ ಪತಿ ಸಮರ್ಥ್ ಸಿಂಗ್‌ನನ್ನು ಈಗಾಗಲೇ ವಶಕ್ಕೆ ಪಡೆದಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಸಾಕ್ಷ್ಯನಾಶದ ಆರೋಪ ಎದುರಿಸುತ್ತಿರುವ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರ ಮನೆಗೇ ತೆರಳಿ ಸಿಬಿಐ ಅಧಿಕಾರಿಗಳು ತಪಾಸಣೆ ಮತ್ತು ವಿಚಾರಣೆ ನಡೆಸಿರುವುದರಿಂದ, ಈ ಹೈಪ್ರೊಫೈಲ್ ಪ್ರಕರಣದಲ್ಲಿ ಅವರ ಬಂಧನವೂ ಶೀಘ್ರದಲ್ಲೇ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಜಾಮೀನು ರದ್ದಾದ ಹಿನ್ನೆಲೆ ಸಿಬಿಐ ಅಧಿಕಾರಿಗಳ ವಿಶೇಷ ತಂಡವು ಗುರುವಾರ ಭೋಪಾಲ್‌ನ ಬಾಗ್ ಮುಘಲಿಯಾ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶೆ ಹಾಗೂ ಪ್ರಕರಣದ ಪ್ರಮುಖ ಆರೋಪಿ ಗಿರಿಬಾಲಾ ಸಿಂಗ್ ಅವರ ನಿವಾಸಕ್ಕೆ ಬೇಟಿ ಇಟ್ಟಿದೆ. ಹೈಕೋರ್ಟ್ ಆದೇಶ ಹೊರಬಿದ್ದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಸಿಬಿಐ ಅಧಿಕಾರಿಗಳು, ಗಿರಿಬಾಲಾ ಸಿಂಗ್ ಅವರ ನಿವಾಸ ಪ್ರವೇಶಿಸಿ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

