ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸಚಿವ ಸಂಪುಟ ರಚನೆಯ ಕಸರತ್ತು ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಬೆನ್ನಲ್ಲೇ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ (UT Khader) ಅವರು ಅತ್ಯಂತ ಮಹತ್ವದ ಹೇಳಿಕೆ ನೀಡಿದ್ದಾರೆ.
ಹೊಸ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಕೊಡುವುದು ಅಥವಾ ಬಿಡುವುದು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದ್ದು, ತಾವಂತೂ ಮಂತ್ರಿಗಿರಿಗಾಗಿ ಹಠ ಹಿಡಿದು ದೆಹಲಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯು.ಟಿ. ಖಾದರ್, ನನಗೆ ಸಚಿವ ಸ್ಥಾನ ಸಿಗುತ್ತದೋ ಇಲ್ಲವೋ ಎಂಬುವುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿಗೆ (Delhi) ಹೋಗುತ್ತಿಲ್ಲ. ಅದರ ಬದಲಾಗಿ, ನನ್ನ ಮಂಗಳೂರು (Mangaluru) ಕ್ಷೇತ್ರದ ಜನರ ಸಮಸ್ಯೆಗಳನ್ನು ಹತ್ತಿರದಿಂದ ಆಲಿಸಿ, ಅವುಗಳನ್ನು ತಕ್ಷಣವೇ ಪರಿಹರಿಸಲು ನನ್ನ ತಾಯ್ನಾಡಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದರು. ನನ್ನ ಕೆಲಸ ನೋಡಿ ಪಕ್ಷವೇ ಸ್ಥಾನ ನೀಡಿದೆ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ತಾವು ತಲೆಬಾಗಲು ಸಿದ್ಧ ಎಂದ ಸ್ಪೀಕರ್ ಖಾದರ್, ನಾನು ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಸ್ಥಾನವನ್ನು ತಾವಾಗಿಯೇ ಬಯಸಿ ಪಡೆದವನಲ್ಲ. ನಮ್ಮ ಪಕ್ಷ ಏನೇ ತೀರ್ಮಾನ ಮಾಡಿದರೂ ಅದನ್ನು ಅತ್ಯಂತ ಸಂತೋಷ ಮತ್ತು ಸಮಾಧಾನದಿಂದ ಸ್ವೀಕರಿಸುತ್ತೇನೆ. ನಾನು ಮಂತ್ರಿ ಸ್ಥಾನಕ್ಕಾಗಿ ಹಠ ಮಾಡುವ ಶಾಸಕನಲ್ಲ. ಸದ್ಯಕ್ಕೆ ನಾನು ದೆಹಲಿಗೆ ಹೋಗುವ ಪ್ರಶ್ನೆಯೇ ಇಲ್ಲ, ನನ್ನ ಜನರ ಸೇವೆಗಾಗಿ ಮಂಗಳೂರಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಜೀವನದ ಸಾಧನೆಗಳನ್ನು ಸ್ಮರಿಸಿದ ಖಾದರ್, ತಾವು ಎಂದಿಗೂ ಯಾವುದೇ ಸ್ಥಾನಕ್ಕಾಗಿ ಪಕ್ಷದ ಮುಂದೆ ಕೈಚಾಚಿಲ್ಲ ಎಂದು ಹೆಮ್ಮೆಯಿಂದ ಹೇಳಿದರು. ಹಿಂದೆ ಪಕ್ಷ ನನಗೆ ಸಚಿವ ಸ್ಥಾನ ನೀಡಿದಾಗ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಒಳ್ಳೆಯ ಕೆಲಸ ಮಾಡಿದ್ದೇನೆ. ನಾನು ಕೇವಲ ಶಾಸಕನಾಗಿದ್ದಾಗ ನನ್ನ ಪ್ರದರ್ಶನ ನೋಡಿ ಸದನ ವೀರ ಪ್ರಶಸ್ತಿ ನೀಡಲಾಗಿತ್ತು. ಆ ಬಳಿಕ ಸಚಿವನಾಗಿದ್ದಾಗ ದೇಶದಲ್ಲೇ ಅತ್ಯುತ್ತಮ ಕೆಲಸ ಮಾಡಿದ್ದಕ್ಕಾಗಿ ರಾಷ್ಟ್ರ ಪ್ರಶಸ್ತಿಯೂ ನನಗೆ ಲಭಿಸಿದೆ. ನನ್ನ ನಿರಂತರ ಕೆಲಸವನ್ನು ಗುರುತಿಸಿ ಸನ್ಮಾನ್ಯ ಸಿದ್ದರಾಮಯ್ಯನವರು ನನ್ನನ್ನು ಈ ಹಿಂದೆ ವಿರೋಧ ಪಕ್ಷದ ಉಪನಾಯಕನನ್ನಾಗಿ ಮಾಡಿದ್ದರು. ಪ್ರಸ್ತುತ ಗೌರವಾನ್ವಿತ ಸ್ಪೀಕರ್ ಸ್ಥಾನ ನೀಡಿದ್ದಾರೆ, ಅಲ್ಲೂ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಮುಂದೆ ಪಕ್ಷ ನನಗೆ ಏನು ಜವಾಬ್ದಾರಿ ಕೊಡುತ್ತದೆಯೋ ಅದನ್ನು ಕಾದು ನೋಡೋಣ ಎಂದರು.

