ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಯೋಗಿ (Yogi Adityanath) ಸರ್ಕಾರದ 'ಜಿರೋ ಟಾಲರೆನ್ಸ್' ನೀತಿಗೆ ಹೆದರಿ ರೌಡಿಗಳು ಪೊಲೀಸ್ ಠಾಣೆಯಲ್ಲಿ (Police Station) ಶರಣಾಗಿರುವ ನಾಟಕೀಯ ಘಟನೆಯೊಂದು ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.
ಇತ್ತೀಚೆಗೆ ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ರೌಡಿಶೀಟರ್‌ಗಳು "ಯೋಗಿ ಜೀ ನಮ್ಮನ್ನು ಕ್ಷಮಿಸಿ" ಎಂಬ ಪೋಸ್ಟರ್‌ಗಳನ್ನು ಹಿಡಿದುಕೊಂಡು ಬಹಿರಂಗವಾಗಿಯೇ ಪೊಲೀಸರ ಮುಂದೆ ಬಂದು ನಿಂತಿದ್ದಾರೆ.
ಗಾಜಿಯಾಬಾದ್‌ನಲ್ಲಿ ಇತ್ತೀಚೆಗೆ ಹದಿಹರೆಯದ ಯುವಕನೊಬ್ಬನ ಭೀಕರ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಅಪರಾಧಿಗಳ ಸದ್ದಡಗಿಸಲು 'ಆಪರೇಷನ್ ಕ್ಲೀನ್ ಸ್ವೀಪ್' ಎಂಬ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಟ್ರಾನ್ಸ್-ಹಿಂದನ್ ವಲಯದ ಡಿಸಿಪಿ ಧವಲ್ ಜೈಸ್ವಾಲ್ ನೇತೃತ್ವದಲ್ಲಿ ಹಳೆಯ ಅಪರಾಧಿಗಳ ಪತ್ತೆ ಕಾರ್ಯ ಚುರುಕುಗೊಂಡಿತ್ತು. ಇದರ ಭಾಗವಾಗಿ ಪೊಲೀಸರು ಇತ್ತೀಚೆಗೆ ಸುಮಾರು 150 ರೌಡಿಶೀಟರ್‌ಗಳನ್ನು ಸಾಮಾನ್ಯ ವಿಚಾರಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಬರುವಂತೆ ಸೂಚಿಸಿದ್ದರು.
ಆದರೆ, ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ ಬುಲ್ಡೋಜರ್ ಮತ್ತು ಎನ್‌ಕೌಂಟರ್ ಕ್ರಮಗಳ ಭೀತಿಯಲ್ಲಿದ್ದ ಈ ಹಳೆಯ ಅಪರಾಧಿಗಳು, ತಾವಾಗಿಯೇ ಸ್ವಯಂಪ್ರೇರಿತರಾಗಿ ಕೈಯಿಂದ ಬರೆದ ಪೋಸ್ಟರ್‌ಗಳನ್ನು ಹಿಡಿದುಕೊಂಡು ಠಾಣೆಗೆ ಹಾಜರಾಗಿದ್ದಾರೆ. ಆ ಪೋಸ್ಟರ್‌ಗಳಲ್ಲಿ, "ಯೋಗಿ ಜೀ, ನನ್ನನ್ನು ಕ್ಷಮಿಸಿ. ನಾನು ಭವಿಷ್ಯದಲ್ಲಿ ಯಾವುದೇ ಅಪರಾಧ ಮಾಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ" ಎಂದು ಹಿಂದಿಯಲ್ಲಿ ಬರೆಯಲಾಗಿತ್ತು. ಯುವಕರು ಮತ್ತು ಮಧ್ಯವಯಸ್ಕರಾಗಿದ್ದ ಈ ರೌಡಿಶೀಟರ್‌ಗಳೆಲ್ಲರೂ ಕ್ಯಾಮೆರಾಗಳ ಮುಂದೆ ಸಾಲಾಗಿ ನಿಂತು, ಕೈಗಳನ್ನು ಮೇಲಕ್ಕೆತ್ತಿ ಇನ್ಮುಂದೆ ಯಾವುದೇ ಕಾನೂನುಬಾಹಿರ ಕೃತ್ಯ ಎಸಗುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿಪಿ ಧವಲ್ ಜೈಸ್ವಾಲ್ ಅವರು, ಅಪರಾಧಿಗಳು ಕ್ಷಮೆ ಕೇಳಿದ ತಕ್ಷಣ ಅವರ ಮೇಲಿರುವ ಹಳೆಯ ಪ್ರಕರಣಗಳು ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಈ ಎಲ್ಲಾ 150 ರೌಡಿಶೀಟರ್‌ಗಳ ಪ್ರಸ್ತುತ ವಿವರಗಳು ಮತ್ತು ಇತ್ತೀಚಿನ ಚಟುವಟಿಕೆಗಳನ್ನು ಪೊಲೀಸ್ ಡೇಟಾಬೇಸ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಭವಿಷ್ಯದಲ್ಲಿ ಇವರು ಯಾವುದೇ ಸಣ್ಣ ತಪ್ಪು ಮಾಡಿದರೂ ಅತ್ಯಂತ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಪರಾಧಿಗಳು ಸಾಲಾಗಿ ನಿಂತು ಪೋಸ್ಟರ್ ಹಿಡಿದು ಕ್ಷಮೆ ಯಾಚಿಸುತ್ತಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

