ಸೋನಿಪತ್: ಕೇವಲ 5,100 ರೂಪಾಯಿ ಆನ್‌ಲೈನ್‌ನಲ್ಲಿ ಕಳುಹಿಸಿ, ವಿಡಿಯೋ ಕಾಲ್ (Shocking) ಮೂಲಕವೇ ತಂದೆಯ (Viral News) ಅಂತಿಮ ಸಂಸ್ಕಾರ ವೀಕ್ಷಿಸಿದ ಕರುಣಾಜನಕ (Tragedy) ಹಾಗೂ ಮನಕಲಕುವ ಘಟನೆಯೊಂದು ಹರ್ಯಾಣದ (Haryana) ಸೋನಿಪತ್‌ನಲ್ಲಿ ನಡೆದಿದೆ.
ಏನಿದು ಘಟನೆ? ಶಿವಚರಣ್ ಅವರ ನಿಧನದ ಬಳಿಕ ವೃದ್ಧಾಶ್ರಮದ ಆಡಳಿತ ಮಂಡಳಿಯು ಮುಂಬೈನಲ್ಲಿದ್ದ ಅವರ ಪುತ್ರಿಯರನ್ನು ಸಂಪರ್ಕಿಸಿ ವಿಷಯ ತಿಳಿಸಿತ್ತು. ಆದರೆ ಮೃತದೇಹವನ್ನು ಮುಂಬೈಗೆ ತರಲು ನಿರಾಕರಿಸಿದ ಪುತ್ರಿಯರು, ಆನ್‌ಲೈನ್ ಮೂಲಕ 5,100 ರೂಪಾಯಿ ಹಣ ವರ್ಗಾಯಿಸಿ ಸೋನಿಪತ್‌ನಲ್ಲೇ ಅಂತಿಮ ಸಂಸ್ಕಾರ ಮುಗಿಸುವಂತೆ ವಿನಂತಿಸಿಕೊಂಡರು. ಅಲ್ಲದೆ, ಅಂತಿಮ ವಿಧಿವಿಧಾನಗಳನ್ನು ತಮಗೆ ವಿಡಿಯೋ ಕಾಲ್ ಮೂಲಕ ತೋರಿಸುವಂತೆ ಕೋರಿದ್ದರು. ಆಶ್ರಮದ ನಿರ್ದೇಶಕ ಆನಂದ್ ಕುಮಾರ್ ಅವರೇ ಮುಂದೆ ನಿಂತು ಕರ್ಮ ಕಾರ್ಯಗಳನ್ನ ನೆರವೇರಿಸಿದ್ದು, ವಿಡಿಯೋ ಕರೆ ಆರಂಭವಾದಾಗ ಮಗಳು ತಂದೆಯ ಮುಖ ನೋಡಿ 'ಪಾಪಾ' ಎಂದು ಕೇವಲ ಒಮ್ಮೆ ಉದ್ಗರಿಸಿದ್ದಳು.
ಮುಂಬೈನ ಪ್ರಸಿದ್ಧ ಬಟ್ಟೆ ವ್ಯಾಪಾರಿಯಾಗಿದ್ದ 74 ವರ್ಷದ ಶಿವಚರಣ್ ರಾಮರತನ್ ಗುಪ್ತಾ ಎಂಬ ವೃದ್ಧರು ಸೋನಿಪತ್‌ನ ವೃದ್ಧಾಶ್ರಮವೊಂದರಲ್ಲಿ ಕೊನೆಯುಸಿರೆಳೆದಿದ್ದು, ಅವರ ಕೊನೆಯ ವಿಧಿವಿಧಾನಗಳು ಹೆತ್ತ ಮಕ್ಕಳ ಗೈರುಹಾಜರಿಯಲ್ಲೇ ನೆರವೇರಿವೆ. ಶಿವಚರಣ್ ಅವರು ಕಳೆದ ಮೂರು ವರ್ಷಗಳಿಂದ ಈ ಆಶ್ರಮದಲ್ಲೇ ವಾಸಿಸುತ್ತಿದ್ದರು. ಆಸಕ್ತಿಕರ ಎಂದರೆ, ಅವರ ಪತ್ನಿ ಕೂಡ ಇದೇ ಆಶ್ರಮದಲ್ಲಿದ್ದು ಸುಮಾರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು.
ತೀವ್ರ ಬೇಸರ ವ್ಯಕ್ತಪಡಿಸಿದ ಜನರು
ಇಡೀ ದಹನ ಪ್ರಕ್ರಿಯೆಯು ಮುಗಿಯುವವರೆಗೂ ವಿಡಿಯೋ ಕರೆಯಲ್ಲಿಯೇ ಇದ್ದ ಮಗಳು, ಇನ್ನು ಎಷ್ಟು ಸಮಯ ಬೇಕಾಗುತ್ತದೆ ಎಂದು ಪದೇ ಪದೇ ವಿಚಾರಿಸುತ್ತಿದ್ದಳು. ದಹನ ಕ್ರಿಯೆ ಆರಂಭವಾಗಿದ್ದು ಇನ್ನು 10 ರಿಂದ 15 ನಿಮಿಷಗಳಲ್ಲಿ ಮುಗಿಯಲಿದೆ ಎಂದು ತಿಳಿದ ಬಳಿಕ, ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಪೂರ್ಣ ವಿಡಿಯೋವನ್ನು ತಮಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾಳೆ. ಈ ತಿಂಗಳ 20ರ ಒಳಗಾಗಿ ತಂದೆಯ ಅಸ್ಥಿಯನ್ನು ಒಯ್ಯುವಂತೆ ಆಶ್ರಮದ ಸಿಬ್ಬಂದಿ ಮನವಿ ಮಾಡಿದ್ದು, ಅದಕ್ಕೆ ಕಿರಿಯ ಮಗಳು ಬರುವುದು ಸಾಧ್ಯವಾಗುತ್ತದೆಯೇ ಎಂದು ನೋಡುವುದಾಗಿ ತಿಳಿಸಿದ್ದಾಳೆ. ಈ ಘಟನೆಯು ಆಧುನಿಕ ಸಮಾಜದಲ್ಲಿ ಕಳಚುತ್ತಿರುವ ಕೌಟುಂಬಿಕ ಬಾಂಧವ್ಯಕ್ಕೆ ಹಿಡಿದ ಕನ್ನಡಿಯಂತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.

