ಗುವಾಹಟಿ: ಶ್ರೀಮಂತಿಕೆ ಇರುವುದು ಹಣದಲ್ಲಲ್ಲ, ಕೊಡುವ ಉದಾರ ಮನಸ್ಸಿನಲ್ಲಿ ಎಂಬುದಕ್ಕೆ ಅಸ್ಸಾಂನಲ್ಲಿ (Assam) ನಡೆದ ಈ ಅಪರೂಪದ ಘಟನೆಯೇ ಸಾಕ್ಷಿ. ಮದುವೆಗೆ (Wedding) ಯಾವುದೇ ಆಮಂತ್ರಣ ಇಲ್ಲದಿದ್ದರೂ ಬಂದ ಅಪರಿಚಿತ ವ್ಯಕ್ತಿಯೋರ್ವ, ಅಲ್ಲಿನ ಅತಿಥಿಗಳೊಂದಿಗೆ ಅತ್ಯಂತ ಗೌರವಯುತವಾಗಿ ಊಟ ಮಾಡಿ, ವಾಪಸ್ ಹೋಗುವಾಗ ವಧುವಿಗೆ (Bride) ಕೇವಲ 10 ರೂಪಾಯಿ ನೋಟನ್ನು (10 Rs) ಕಾಣಿಕೆಯಾಗಿ ನೀಡಿರುವ ಹೃದಯಸ್ಪರ್ಶಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ವೈರಲ್ (Viral) ಆಗುತ್ತಿದೆ.
ಕನಿಷ್ಠ ಸೌಕರ್ಯ ಅಥವಾ ಸಂಪನ್ಮೂಲ ಇಲ್ಲದ ಬಡವರೂ ಕೂಡ ತಮ್ಮ ವಿಶಾಲ ಹೃದಯದಿಂದ ಹೇಗೆ ಪ್ರೀತಿಯನ್ನು ನೀಡಬಲ್ಲರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಇಡೀ ಇಂಟರ್ನೆಟ್ ಜಗತ್ತು ಭಾವಪರವಶಗೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಮದುವೆಯ ಸಂಭ್ರಮದ ನಡುವೆ ಈ ಅಪರಿಚಿತ ವ್ಯಕ್ತಿ ಮಂಟಪಕ್ಕೆ ಆಗಮಿಸಿ ಅತಿಥಿಗಳೊಂದಿಗೆ ಊಟದ ಸಾಲಿನಲ್ಲಿ ಕುಳಿತಿದ್ದಾರೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಅಪರಿಚಿತರನ್ನು ಹೊರಗೆ ಕಳುಹಿಸುವ ಉದಾಹರಣೆಗಳೇ ಹೆಚ್ಚು. ಆದರೆ, ಈ ಮದುವೆ ಮನೆಯವರು ಯಾವುದೇ ಅಡ್ಡಿ ಮಾಡದೆ, ಆ ವ್ಯಕ್ತಿಯನ್ನು ತಮ್ಮದೇ ಅತಿಥಿಯಂತೆ ಅತ್ಯಂತ ಗೌರವದಿಂದ ನಡೆಸಿ ಊಟ ಬಡಿಸಿದ್ದಾರೆ.
ಊಟ ಮುಗಿದ ನಂತರ ನಡೆದ ಆ ಒಂದು ದೃಶ್ಯ ಇಡೀ ಮದುವೆ ಮನೆ ಹಾಗೂ ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಆ ವ್ಯಕ್ತಿ ಅಲ್ಲಿಂದ ಹೊರಡುವ ಮುನ್ನ ವಧು-ವರರ ಬಳಿ ತೆರಳಿ, ತನ್ನ ಹರಿದ ಜೇಬಿನಿಂದ ಜಾಗರೂಕತೆಯಿಂದ 10 ರೂಪಾಯಿ ನೋಟನ್ನು ಹೊರತೆಗೆದಿದ್ದಾರೆ. ಅದನ್ನು ಅತ್ಯಂತ ಪ್ರೀತಿಯಿಂದ ವಧುವಿನ ಕೈಗಿಟ್ಟು ಆಶೀರ್ವದಿಸಿದ್ದಾರೆ. ಆ ಬಡವನ ಬಳಿ ಇದ್ದ ಒಟ್ಟು ಮೊತ್ತವೇ ಆ 10 ರೂಪಾಯಿ ಆಗಿರಬಹುದು ಎಂದು ವಿಡಿಯೋ ನೋಡಿದ ಸಾರ್ವಜನಿಕರು ಕಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಈಶಾನ್ಯ ಭಾರತ ಹಾಗೂ ಅಸ್ಸಾಂನ ಸಂಸ್ಕೃತಿಯನ್ನು ಹಲವರು ಶ್ಲಾಘಿಸಿದ್ದಾರೆ. ತಮ್ಮ ಭಾಗದಲ್ಲಿ ಮದುವೆ ಅಥವಾ ಯಾವುದೇ ಶುಭ ಸಮಾರಂಭಗಳಿದ್ದಾಗ ಅಪರಿಚಿತರು ಅಥವಾ ಹಸಿದವರು ಬಂದರೆ ಅವರನ್ನು ದೇವರೆಂದು ಭಾವಿಸಿ ಗೌರವದಿಂದ ಉಣಬಡಿಸುವ ಹಳೆಯ ಸಂಪ್ರದಾಯ ಇಂದಿಗೂ ಜೀವಂತವಾಗಿದೆ ಎಂದು ಸ್ಥಳೀಯರು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಈ ಭಾವುಕ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಸಿನ ಮಹಾಪೂರವೇ ಹರಿದುಬರುತ್ತಿದೆ. ಮಾನವೀಯತೆ ಇನ್ನೂ ಜೀವಂತ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ ಎಂದು ಒಬ್ಬರು ಬರೆದರೆ, "ದೇವರು ಯಾವ ರೂಪದಲ್ಲಿ ಬಂದು ಆಶೀರ್ವದಿಸುತ್ತಾನೋ ತಿಳಿಯದು" ಎಂದು ಮತ್ತೊಬ್ಬರು ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ಕೆಲವರು ಆ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥ ಎಂದು ಕರೆಯುವುದನ್ನು ತೀವ್ರವಾಗಿ ವಿರೋಧಿಸಿದ್ದು, ಆತ ಸಂಸ್ಕಾರ ಮತ್ತು ಮೌಲ್ಯಗಳನ್ನು ಹೊಂದಿರುವ ಅಸಲಿ ಶ್ರೀಮಂತ ಎಂದು ಕೊಂಡಾಡಿದ್ದಾರೆ.
ಕೇವಲ ಕೆಲವು ಸೆಕೆಂಡುಗಳ ಈ ಪುಟ್ಟ ವಿಡಿಯೋ, ಸಹಾನುಭೂತಿ ಮತ್ತು ಸಮಾಜದ ನಡವಳಿಕೆಯ ಕುರಿತು ಆನ್‌ಲೈನ್‌ನಲ್ಲಿ ಅತ್ಯಂತ ದೊಡ್ಡ ಮತ್ತು ಆರೋಗ್ಯಕರ ಚರ್ಚೆಯನ್ನು ಹುಟ್ಟುಹಾಕಿದೆ.

