ಬಕ್ಸರ್: ಬಿಹಾರದ(Bihar) ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂಬಂತೆ, 9, 10 ಮತ್ತು 12ನೇ ತರಗತಿಯ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ(Exam question paper) ಕಟ್ಟುಗಳು ನೀರಿನಲ್ಲಿ ತೇಲುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಬಿಹಾರದ ಬಕ್ಸರ್(Boxer) ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯು ಪರೀಕ್ಷಾ ಪತ್ರಿಕೆಗಳ ಸುರಕ್ಷತೆ ಮತ್ತು ನಿರ್ವಹಣೆಯ ಕುರಿತು ಮತ್ತೊಮ್ಮೆ ದೊಡ್ಡ ಮಟ್ಟದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಶ್ನೆ ಪತ್ರಿಕೆಗಳು ಈ ರೀತಿ ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. 167 ಶಾಲೆಗಳ ಪ್ರಶ್ನೆ ಪತ್ರಿಕೆಗಳು ನೀರುಪಾಲು! ತನಿಖೆಗೆ ಆದೇಶಿಸಿದ ಜಿಲ್ಲಾಡಳಿತ ವಿಚಾರಣೆ ಪೂರ್ಣಗೊಂಡ ನಂತರ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಆದರೆ, ಪದೇ ಪದೇ ಪರೀಕ್ಷಾ ಅಕ್ರಮ ಹಾಗೂ ಲೋಪದೋಷಗಳಿಂದ ಸುದ್ದಿಯಾಗುವ ಬಿಹಾರದಲ್ಲಿ ಈ ಘಟನೆ ವಿದ್ಯಾರ್ಥಿಗಳ ಭವಿಷ್ಯದ ಜೊತೆಗಿನ ಚೆಲ್ಲಾಟ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಾಥಮಿಕ ವರದಿಗಳ ಪ್ರಕಾರ, ಜಿಲ್ಲೆಯ ಸುಮಾರು 167 ಶಾಲೆಗಳಿಗೆ ವಿತರಿಸಬೇಕಾಗಿದ್ದ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಈ ಘಟನೆಯಿಂದಾಗಿ ಹಾಳಾಗಿವೆ ಎಂದು ಅಂದಾಜಿಸಲಾಗಿದೆ. ಅತ್ಯಂತ ಸೂಕ್ಷ್ಮ ಹಾಗೂ ರಹಸ್ಯವಾಗಿಡಬೇಕಾದ ಪರೀಕ್ಷಾ ಸಾಮಗ್ರಿಗಳನ್ನು ಶಿಕ್ಷಣ ಇಲಾಖೆಯು ಇಷ್ಟು ನಿರ್ಲಕ್ಷ್ಯದಿಂದ ನಿರ್ವಹಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇಲಾಖೆಯ ಮೂಲಸೌಕರ್ಯದ ಕೊರತೆಯೂ ಇದರಿಂದ ಬಯಲಾಗಿದೆ.
ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಕ್ಸರ್ ಜಿಲ್ಲಾಡಳಿತವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಇಷ್ಟೊಂದು ಭಾರಿ ಪ್ರಮಾಣದ ಪ್ರಶ್ನೆ ಪತ್ರಿಕೆಗಳು ನೀರ ಪಾಲಾಗಿದ್ದು ಹೇಗೆ? ಇದರ ಹಿಂದೆ ಯಾರ ಬೇಜವಾಬ್ದಾರಿತನವಿದೆ? ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

