ಕಠ್ಮಂಡು: ಪ್ರವಾಸಕ್ಕೆ (Tour) ಹೋದಾಗ ಆ ದೇಶದ ಸಂಪ್ರದಾಯ ಮತ್ತು ಸ್ವಚ್ಛತೆಯನ್ನು ಗೌರವಿಸುವುದು ಪ್ರತಿಯೊಬ್ಬ ಪ್ರವಾಸಿಗನ ಕರ್ತವ್ಯ. ಆದರೆ, ನೇಪಾಳಕ್ಕೆ (Nepal) ಪ್ರವಾಸಕ್ಕೆ ಹೋಗಿದ್ದ ಭಾರತೀಯ ಪ್ರವಾಸಿಗರ (Indian Tourist) ತಂಡವೊಂದು ಸಾರ್ವಜನಿಕ ರಸ್ತೆಯಲ್ಲೇ ಗುಟ್ಕಾ ಉಗುಳಿ ಅಲ್ಲಿನ ಸ್ಥಳೀಯ ವ್ಯಕ್ತಿಯ ಕೆಂಗಣ್ಣಿಗೆ ಗುರಿಯಾಗಿದೆ.
ಅಷ್ಟೇ ಅಲ್ಲದೆ, ಉಗುಳಿದ ಕರೆಯನ್ನು ಸ್ವತಃ ಪ್ರವಾಸಿಗರಿಂದಲೇ ತೊಳೆಯಿಸಿರುವ ವಿಡಿಯೋ ಈಗ ವೈರಲ್ (Viral News) ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಭಾರತೀಯ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರ ತಂಡವೊಂದು ಚಲಿಸುವ ಕಾರಿನಿಂದಲೇ ರಸ್ತೆಗೆ ಗುಟ್ಕಾ ಉಗುಳಿದೆ. ಇದನ್ನು ಗಮನಿಸಿದ ನೇಪಾಳದ ಸ್ಥಳೀಯ ವ್ಯಕ್ತಿಯೊಬ್ಬರು ತಕ್ಷಣವೇ ಕಾರನ್ನು ಅಡ್ಡಗಟ್ಟಿ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಭಾರತವಲ್ಲ ಸಹೋದರ, ನೇಪಾಳ. ಇಲ್ಲಿ ಗಲೀಜು ಮಾಡಬೇಡಿ. ನೀವು ಇಷ್ಟು ದೊಡ್ಡ ದೇಶದಿಂದ ಬಂದಿದ್ದೀರಿ, ಇಲ್ಲಿಗೆ ಬಂದು ಇಂತಹ ಕೆಲಸ ಮಾಡುತ್ತಿದ್ದೀರಾ? ಎಂದು ನೇಪಾಳದ ವ್ಯಕ್ತಿ ಹಿಂದಿಯಲ್ಲಿ ಗದರಿಸುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತದೆ.
ಸ್ಥಳೀಯ ವ್ಯಕ್ತಿಯ ಖಡಕ್ ಎಚ್ಚರಿಕೆಯಿಂದ ಎಚ್ಚೆತ್ತ ಪ್ರವಾಸಿಗರು ತಕ್ಷಣವೇ ಕ್ಷಮೆಯಾಚಿಸಿದ್ದಾರೆ. ಬಳಿಕ ಕಾರಿನಿಂದ ಕೆಳಗಿಳಿದ ಒಬ್ಬ ಪ್ರವಾಸಿಗ, ನೀರನ್ನು ಬಳಸಿ ರಸ್ತೆಯ ಮೇಲಿದ್ದ ಗುಟ್ಕಾ ಕರೆಯನ್ನು ತೊಳೆದು ಸ್ವಚ್ಛಗೊಳಿಸಿದ್ದಾನೆ. ಸ್ಥಳೀಯ ವ್ಯಕ್ತಿ ಅಲ್ಲಿಂದ ಕದಲದೆ, ಸಂಪೂರ್ಣವಾಗಿ ಕಲೆ ಹೋಗುವವರೆಗೆ ನಿಂತು ಸ್ವಚ್ಛ ಮಾಡಿಸಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತದಲ್ಲಿ ಅದ್ರಲ್ಲೂ ಉತ್ತರ ಭಾರತದ ಹಲವು ರಾಜ್ಯದ ಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ ಉಗುಳುವುದು ತೀರಾ ಸಾಮಾನ್ಯ. ಯಾರು ಕೂಡ ಇದನ್ನು ಪ್ರಶ್ನೆ ಮಾಡೋದಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಹೆಚ್ಚು ಹೆಚ್ಚು ಚರ್ಚೆಗೆ ಒಳಪಟ್ಟಿದಗೆ. ತನ್ನ ದೇಶದ ಬಗ್ಗೆ ಹೆಮ್ಮೆ ಇರುವ ಮತ್ತು ಸ್ವಚ್ಛತೆಯನ್ನು ಕಾಪಾಡುವ ಇಂತಹ ವ್ಯಕ್ತಿಗಳು ನಮಗೆ ಭಾರತದಲ್ಲೂ ಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಬಳಕೆದಾರರು, ಕೆಲವು ಪ್ರವಾಸಿಗರ ಇಂತಹ ಬೇಜವಾಬ್ದಾರಿ ವರ್ತನೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ: ಇರಾನ್ ಯುದ್ಧದ ಎಫೆಕ್ಟ್, ಕಾಫಿ ಬೆಲೆಯಲ್ಲಿ ಭಾರೀ ಕುಸಿತ: ಸಂಕಷ್ಟದಲ್ಲಿ ಬೆಳೆಗಾರರು

