ನಾಗಾಲ್ಯಾಂಡ್: ಕೆವೈಸಿ (KYC) ಬಯೋಮೆಟ್ರಿಕ್ ಆಯಪ್ ಒಂದರಲ್ಲಿ ನಾಗಾಲ್ಯಾಂಡ್ ಮೂಲದ ವ್ಯಕ್ತಿಯೊಬ್ಬರ ಕಣ್ಣುಗಳನ್ನು ಸ್ಕ್ಯಾನ್ ಮಾಡಲು ಆಯಪ್‌ಗೆ ಸಾಧ್ಯವಾಗದೇ ಪದೇ ಪದೇ ವಿಫಲಗೊಂಡಿದೆ. ಕೊನೆಗೆ ಅವರ ಕಣ್ಣುಗಳನ್ನು ಕೈಗಳಿಂದ ಬಲವಂತವಾಗಿ ಅಗಲವಾಗಿ ತೆರೆದು ಸ್ಕ್ಯಾನ್ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣವಾದ 'X' (ಟ್ವಿಟರ್)ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಈ ವೀಡಿಯೋವನ್ನು ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಹಾಗೂ ಬಿಜೆಪಿ ನಾಯಕರಾದ ತೇಮ್ಜೆನ್ ಇಮ್ನಾ ಅಲಾಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿ ಸಚಿವರ ಪೋಸ್ಟ್‌ನಲ್ಲೇನಿದೆ? ತಮ್ಮ ಸಮಯಪ್ರಜ್ಞೆ ಮತ್ತು ಹಾಸ್ಯಪ್ರಜ್ಞೆಗೆ ಹೆಸರಾದ ಸಚಿವ ತೇಮ್ಜೆನ್ ಇಮ್ನಾ ಅಲಾಂಗ್, ಈ ವೀಡಿಯೋವನ್ನು ಹಂಚಿಕೊಂಡು ಡಿಜಿಟಲ್ ತಂತ್ರಜ್ಞಾನದಲ್ಲಿ ಎದುರಾಗುವ ಇಂತಹ ತಾಂತ್ರಿಕ ತೊಂದರೆಗಳ ಬಗ್ಗೆ ನಗುತ್ತಲೇ ಬೆಳಕು ಚೆಲ್ಲಿದ್ದಾರೆ.
ಈ ವೀಡಿಯೋ ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ, ಇದು ಪ್ರಸ್ತುತ ತಂತ್ರಜ್ಞಾನ ವ್ಯವಸ್ಥೆಯಲ್ಲಿರುವ ದೊಡ್ಡದೊಂದು ಲೋಪವನ್ನು ಎತ್ತಿ ತೋರಿಸುತ್ತದೆ. ಆಧುನಿಕ ಡಿಜಿಟಲ್ ಡೇಟಾಬೇಸ್‌ಗಳಲ್ಲಿ ಭಾರತದ ಈಶಾನ್ಯ ಭಾಗದ ಸಣ್ಣ ಪಂಗಡಗಳ ಹಾಗೂ ವಿಭಿನ್ನ ಶಾರೀರಿಕ ಲಕ್ಷಣಗಳನ್ನು ಹೊಂದಿರುವ ಜನಾಂಗೀಯ ಸಮುದಾಯಗಳ 'ಸ್ಯಾಂಪಲ್ ಡೇಟಾ' (ಮಾದರಿ ಮಾಹಿತಿ) ಕೊರತೆ ಇರುವುದನ್ನು ಇದು ಪ್ರಮುಖವಾಗಿ ಎತ್ತಿ ತೋರಿಸಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆ (AI) ಮತ್ತು ಬಯೋಮೆಟ್ರಿಕ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಾಗ ಭಾರತದ ಎಲ್ಲಾ ಪ್ರದೇಶ ಹಾಗೂ ವಿಭಿನ್ನ ಜನಾಂಗೀಯ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

