ರಾಪಿಡೋ (Rapido) ಬೈಕ್ ಟ್ಯಾಕ್ಸಿ ಸೇವೆ ಬಳಸಿದ ಪ್ರಯಾಣಿಕರೊಬ್ಬರು ಚಾಲಕನ ವಿರುದ್ಧ ಹಣ ವಂಚನೆ (Fraud) ಆರೋಪ ಮಾಡಿದ್ದಾರೆ. ₹500 ನಗದು ಪಡೆದು (Viral News) ಉಳಿದ ₹380 ಹಣವನ್ನು ಕ್ಯೂಆರ್ ಕೋಡ್ (Qr Code) ಸ್ಕ್ಯಾನ್ ಮಾಡುವ ಮೂಲಕ ವಾಪಸ್ ಕಳುಹಿಸಿರುವುದಾಗಿ ಚಾಲಕ ತೋರಿಸಿದ್ದಾನೆ.
ಆದರೆ ಪ್ರಯಾಣಿಕನ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಯಾಣಿಕ, ಇತರರು ಇಂತಹ ವಂಚನೆಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
'ಈ ಚಾಲಕನ ಬಗ್ಗೆ ಎಚ್ಚರದಿಂದಿರಿ, ನನ್ನನ್ನು ವಂಚಿಸಿದ್ದಾನೆ' ಎಂಬ ಶೀರ್ಷಿಕೆಯೊಂದಿಗೆ ಪ್ರಯಾಣಿಕ ಈ ಘಟನೆಯನ್ನು ವಿವರಿಸಿದ್ದಾರೆ. ಆರಂಭದಲ್ಲಿ ಪ್ರಯಾಣಿಕರು ಆನ್‌ಲೈನ್ ಮೂಲಕ ಹಣ ಪಾವತಿಸಲು ಮುಂದಾಗಿದ್ದರು. ಆದರೆ, ರೈಡ್ ಅನ್ನು ನಗದು ಪಾವತಿ (COD) ಆಯ್ಕೆಯಡಿ ಬುಕ್ ಮಾಡಲಾಗಿದೆ ಎಂದು ಹೇಳಿದ ಚಾಲಕ, ಆನ್‌ಲೈನ್ ಪಾವತಿ ಸ್ವೀಕರಿಸಲು ನಿರಾಕರಿಸಿ ನಗದು ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಹೀಗಾಗಿ ಪ್ರಯಾಣಿಕ ₹500 ನಗದು ನೀಡಿದ್ದಾರೆ. ಬಳಿಕ ಚಾಲಕ ತನ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ₹380 ವಾಪಸ್ ಕಳುಹಿಸಿರುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಮೊಬೈಲ್‌ನಲ್ಲಿ ಹಣ ವರ್ಗಾವಣೆಯಾಗಿದೆ ಎಂಬಂತೆ ಪಾವತಿ ಯಶಸ್ವಿಯಾದ ದೃಶ್ಯವನ್ನೂ ತೋರಿಸಿದ್ದಾನೆ. ಆದರೆ, ಪ್ರಯಾಣಿಕ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಯಾವುದೇ ಹಣ ಜಮೆಯಾಗಿರಲಿಲ್ಲ. ಆಗ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ರಾಪಿಡೋ ಗ್ರಾಹಕ ಸೇವಾ ವಿಭಾಗಕ್ಕೆ ದೂರು ನೀಡಿದರೂ ಯಾವುದೇ ನೆರವು ಸಿಕ್ಕಿಲ್ಲ ಎಂದು ಪ್ರಯಾಣಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಹನದ ನೋಂದಣಿ ಸಂಖ್ಯೆಯನ್ನೂ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಚಾಲಕನ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಲು ಪ್ರಯತ್ನಿಸಿದಾಗ, ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಹಣ ಜಮೆಯಾಗಲು ವಿಳಂಬವಾಗಿರಬಹುದು ಎಂದು ಮೊದಲು ಭಾವಿಸಿದ್ದಾಗಿ ಹೇಳಿದ್ದಾರೆ. ಆದರೆ, ತನ್ನ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಚಾಲಕ ಮೊಬೈಲ್ ಸಂಖ್ಯೆಯನ್ನೇ ಬ್ಲಾಕ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ರೆಡ್ಡಿಟ್‌ನಲ್ಲಿ ಹಲವು ಮಂದಿ ಪ್ರತಿಕ್ರಿಯಿಸಿದ್ದಾರೆ. ₹405 ಬದಲಿಗೆ ₹380 ಮಾತ್ರ ಏಕೆ ವಾಪಸ್ ಕೇಳಿದಿರಿ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಯಾಣಿಕ, ಚಾಲಕನಿಗೆ ಟಿಪ್ಸ್ ನೀಡುವ ಉದ್ದೇಶದಿಂದ ₹25 ಕಡಿಮೆ ಕೇಳಿದ್ದಾಗಿ ತಿಳಿಸಿದ್ದಾರೆ.
ಇನ್ನು ಕೆಲವರು ವಾಹನದ ನೋಂದಣಿ ಸಂಖ್ಯೆ ಇರುವುದರಿಂದ ಪೊಲೀಸರಿಗೆ ಅಥವಾ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಹಣ ಪಾವತಿಯಾದ ಬಗ್ಗೆ ಮೊಬೈಲ್‌ನಲ್ಲಿನ ಬ್ಯಾಂಕ್ ಅಥವಾ ಯುಪಿಐ ನೋಟಿಫಿಕೇಶನ್ ಪರಿಶೀಲಿಸದೆ, ಚಾಲಕ ತೋರಿಸುವ ಪಾವತಿ ದೃಢೀಕರಣವನ್ನು ಮಾತ್ರ ನಂಬಬಾರದು ಎಂದೂ ಎಚ್ಚರಿಸಿದ್ದಾರೆ.
ಇದೇ ವೇಳೆ, ಮತ್ತೊಬ್ಬ ರೆಡ್ಡಿಟ್ ಬಳಕೆದಾರರು ರಾಪಿಡೋ ಪ್ರಯಾಣದ ವೇಳೆ ಯುಪಿಐ ಪಾವತಿ ವಿಳಂಬವಾದ ಅನುಭವ ಹಂಚಿಕೊಂಡಿದ್ದಾರೆ. ವಹಿವಾಟು ಬಾಕಿ ಉಳಿದಿದ್ದರಿಂದ ಚಾಲಕನಿಗೆ ನಗದು ನೀಡಿದ್ದರೂ, ಬಳಿಕ ಯುಪಿಐ ಮೂಲಕವೂ ಹಣ ಜಮೆಯಾಗಿತ್ತು ಎಂದು ತಿಳಿಸಿದ್ದಾರೆ. ಈ ಬಗ್ಗೆ ರಾಪಿಡೋಗೆ ದೂರು ನೀಡಿದಾಗ, ಕಂಪನಿ ₹45 ಹಣವನ್ನು ತನ್ನ ರಾಪಿಡೋ ವಾಲೆಟ್‌ಗೆ ಮರುಪಾವತಿ ಮಾಡಿತ್ತು ಎಂದು ಅವರು ಹೇಳಿದ್ದಾರೆ.

