ಭೋಪಾಲ್: ಲೋಕೋಪೈಲಟ್ (Loco Pilot) ಒಬ್ಬರು ಸಮೋಸ (Samosa) ಮತ್ತು ಕಚೋರಿ ಖರೀದಿಸಲು ಹಳಿ ಮಧ್ಯೆಯೇ ರೈಲು (Train) ನಿಲ್ಲಿಸಿದ್ದಾರೆ ಎನ್ನಲಾದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral News) ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಹರಿದಾಡುತ್ತಿದ್ದಂತೆ, ಇಂದೋರ್-ಮೋವ್ ಡೆಮು (DEMU) ಪ್ರಯಾಣಿಕರ ರೈಲನ್ನು ಸಮೋಸ ತರಲೆಂದೇ ನಿಲ್ಲಿಸಲಾಗಿತ್ತು ಎಂದು ಹಲವರು ಆರೋಪಿಸಿದ್ದರು. ಅಲ್ಲದೆ, ಈ ಬಗ್ಗೆ ತನಿಖೆ ನಡೆಸುವಂತೆಯೂ ಒತ್ತಾಯ ಕೇಳಿಬಂದಿತ್ತು. ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಭಾರತೀಯ ರೈಲ್ವೆಯ ರತ್ಲಾಮ್ ವಿಭಾಗದ ಡಿಆರ್‌ಎಂ (DRM Ratlam) ಈ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಅಸಲಿ ಸತ್ಯವನ್ನು ಬಿಚ್ಚಿಟ್ಟಿದೆ. ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ವೈರಲ್ ವಿಡಿಯೋದಲ್ಲಿರುವುದು ಪ್ರಯಾಣಿಕರ ಡೆಮು ರೈಲಲ್ಲ, ಬದಲಿಗೆ ಅದೊಂದು ಗೂಡ್ಸ್ ರೈಲು. ರಾವ್ (RAU) ಯಾರ್ಡ್ ಬಳಿಯ ಹಳಿಯಲ್ಲಿ ಇಂಜಿನಿಯರಿಂಗ್ ದುರಸ್ತಿ ಕೆಲಸಗಳು ನಡೆಯುತ್ತಿದ್ದ ಕಾರಣ, ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಗೂಡ್ಸ್ ರೈಲನ್ನು ರಾವ್ ಹೋಮ್ ಸಿಗ್ನಲ್ ಬಳಿ ನಿಯಮಾನುಸಾರವೇ ನಿಲ್ಲಿಸಲಾಗಿತ್ತು. ರೈಲು ಹಳಿಯ ಮೇಲೆ ನಿಂತಿದ್ದ ಈ ಬಿಡುವಿನ ಸಮಯದಲ್ಲಿ, ರೈಲಿನ ಸಹಾಯಕ ಲೋಕೋ ಪೈಲಟ್ (ALP) ಕೆಳಗಿಳಿದು ಪಕ್ಕದಲ್ಲಿದ್ದ ಅಂಗಡಿಯಿಂದ ಸಮೋಸ ಮತ್ತು ಕಚೋರಿ ಖರೀದಿಸಿದ್ದಾರೆ. ಆಹಾರ ಖರೀದಿಸುವ ಉದ್ದೇಶದಿಂದ ರೈಲನ್ನು ಎಲ್ಲೂ ನಿಲ್ಲಿಸಿಲ್ಲ ಹಾಗೂ ಈ ವಿಡಿಯೋವನ್ನು ತಪ್ಪು ಉದ್ದೇಶದಿಂದ ಹಂಚಿಕೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಗೂಡ್ಸ್ ರೈಲುಗಳು ಸಿಗ್ನಲ್ ಸಿಗದೆ ಕೆಲವೊಮ್ಮೆ ಗಂಟೆಗಟ್ಟಲೆ ಹಳಿಗಳ ಮೇಲೆ ನಿಲ್ಲಬೇಕಾಗುತ್ತದೆ, ಅಂತಹ ಸಮಯದಲ್ಲಿ ಲೋಕೋಪೈಲಟ್‌ಗಳು ಕೆಳಗಿಳಿಯುವುದು ಸಹಜ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಕೂಡ ರೈಲ್ವೆ ಸಿಬ್ಬಂದಿ ಪರ ಕಮೆಂಟ್ ಮಾಡುತ್ತಿದ್ದಾರೆ.

