ನವದೆಹಲಿ: ರಾಷ್ಟ್ರ ರಾಜಧಾನಿಯಂತಹ (Delhi) ದುಬಾರಿ ಸಿಟಿಗಳಲ್ಲಿ ತಿಂಗಳ ಬಜೆಟ್ (Budget) ನಿರ್ವಹಣೆ ಮಾಡುವುದು ಸಾಮಾನ್ಯ ಜನರಿಗೆ ದೊಡ್ಡ ಸವಾಲಿನ ಕೆಲಸ. ಆದರೆ, ದೆಹಲಿಯಲ್ಲಿ ವಾಸಿಸುತ್ತಿರುವ ಸರ್ಕಾರಿ ಉದ್ಯೋಗಿಯೊಬ್ಬರು (Government Employee) ಅತ್ಯಂತ ಕಡಿಮೆ ವೆಚ್ಚದಲ್ಲಿ ತಮ್ಮ ಜೀವನ ಸಾಗಿಸುತ್ತಿರುವ ಕುರಿತು ಹಂಚಿಕೊಂಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಭಾರಿ ವೈರಲ್ (Viral) ಆಗಿದೆ.
ಕೃತಿಕಾ ಹೆಸರಿನ 28 ವರ್ಷದ ಯುವತಿ ಸರ್ಕಾರಿ ಅಧಿಕಾರಿಯಾಗಿದ್ದರೂ, ದೆಹಲಿಯಂತಹ ಮಹಾನಗರದಲ್ಲಿ ಕೇವಲ ₹25,000 ದಲ್ಲಿ ಇಡೀ ತಿಂಗಳ ಖರ್ಚನ್ನು ನಿಭಾಯಿಸುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ತಮಗೆ ತಿಂಗಳಿಗೆ ಕೈಗೆ ಸಿಗುವ (In-hand) ನಿವ್ವಳ ವೇತನ ₹90,000 ಎಂದು ಬಹಿರಂಗಪಡಿಸಿರುವ ಅವರು, ತಾವು 2022ರ ಎಸ್‌ಎಸ್‌ಸಿ ಸಿಜಿಎಲ್ (SSC CGL) ಪರೀಕ್ಷೆಯ ಮೂಲಕ ಲೆವೆಲ್ 7 ರ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO) ಆಗಿ ಆಯ್ಕೆಯಾಗಿದ್ದಾಗಿ ತಿಳಿಸಿದ್ದಾರೆ.
"ನಾನು ತುಂಬಾ ಒಳ್ಳೆಯ ಹುಡುಗಿ, ಹೆಚ್ಚಾಗಿ ಮನೆಯಲ್ಲಿಯೇ ಸಿದ್ಧಪಡಿಸಿದ ಊಟವನ್ನು ಸೇವಿಸುತ್ತೇನೆ" ಎಂದು ಕೃತಿಕಾ ವಿಡಿಯೋದಲ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಕೇವಲ ಮಿತವ್ಯಯದ ಮಾಸಿಕ ವೆಚ್ಚಗಳನ್ನು ಮಾತ್ರ ಇದರಲ್ಲಿ ಸೇರಿಸಲಾಗಿದ್ದು, ಪ್ರವಾಸ ಅಥವಾ ಗೃಹೋಪಯೋಗಿ ವಸ್ತುಗಳ ಖರೀದಿಯಂತಹ ಒಂದು ಬಾರಿಯ ದೊಡ್ಡ ವೆಚ್ಚಗಳನ್ನು ಇದರಲ್ಲಿ ಸೇರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೆಚ್ಚಿನ ಸಂಬಳವಿದ್ದರೂ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಮಿತವಾಗಿ ಹಣ ಖರ್ಚು ಮಾಡುವ ಇವರ ಈ ಸೂತ್ರ ನೆಟ್ಟಿಗರ ಗಮನ ಸೆಳೆದಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

