Dailyhunt Logo
  • Light mode
    Follow system
    Dark mode
    • Play Story
    • App Story
VIRAL VIDEO: ಒಂಟಿ ಸಲಗದ ಜೊತೆ ಸೆಲ್ಫಿಗಾಗಿ ಬೈಕ್ ಸವಾರರ ಹುಚ್ಚಾಟ..!

VIRAL VIDEO: ಒಂಟಿ ಸಲಗದ ಜೊತೆ ಸೆಲ್ಫಿಗಾಗಿ ಬೈಕ್ ಸವಾರರ ಹುಚ್ಚಾಟ..!

Navasamaja.com 1 week ago

ಚಾಮರಾಜನಗರ: ಕಾಡಾನೆಗಳೊಂದಿಗೆ (Wild Elephant) ಅನಗತ್ಯ ಸಾಹಸಕ್ಕೆ ಇಳಿದು ಪ್ರಾಣಾಪಾಯ ತಂದೊಡ್ಡಿಕೊಳ್ಳುವ ಸಾರ್ವಜನಿಕರು ಹಾಗೂ ಪ್ರವಾಸಿಗರ ಹುಚ್ಚಾಟ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಚಾಮರಾಜನಗರ (Chamarajanagar) ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ (Tamil Nadu) ಆಸನೂರು ಅರಣ್ಯ ಪ್ರದೇಶದ ಸಮೀಪ ರಸ್ತೆ ಬದಿಯಲ್ಲಿ (Viral Video) ನಿಂತಿದ್ದ ಒಂಟಿ ಆನೆಯ ಜೊತೆ ಬೈಕ್ ಸವಾರರಿಬ್ಬರು ಫೋಟೋ ಹಾಗೂ ಸೆಲ್ಫಿ ತೆಗೆಯಲು ಹೋಗಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿರುವ ಆತಂಕಕಾರಿ ಘಟನೆ ನಡೆದಿದ್ದು, ಅದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಏನಿದೆ ವೈರಲ್‌ ವಿಡಿಯೋದಲ್ಲಿ?

ಆಸನೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಕಬ್ಬು, ತರಕಾರಿ ಹಾಗೂ ಆಹಾರ ಧಾನ್ಯಗಳ ಲಾರಿಗಳನ್ನು ಹುಡುಕಿಕೊಂಡು ಕಾಡಿನಿಂದ ಆನೆಗಳು ರಸ್ತೆಗೆ ಬರುವುದು ಸಾಮಾನ್ಯ. ಹೀಗೆ ಬಂದಿದ್ದ ಒಂಟಿ ಸಲಗವೊಂದು ರಸ್ತೆ ಬದಿಯಲ್ಲಿ ನಿಂತಿತ್ತು. ಈ ವೇಳೆ ಮಾರ್ಗಮಧ್ಯೆ ಎದುರಾದ ಕಾಡಾನೆಯನ್ನು ಕಂಡು ದೂರದಿಂದಲೇ ಮುನ್ನೆಚ್ಚರಿಕೆ ವಹಿಸಿ ವಾಪಸ್ ಹೋಗುವ ಬದಲು, ಬೈಕ್ ಸವಾರರು ಆನೆಯ ತೀರಾ ಸಮೀಪವೇ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ಆನೆಯ ತೀರಾ ಹತ್ತಿರಕ್ಕೆ ಹೋಗಿ ಮೊಬೈಲ್‌ನಲ್ಲಿ ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ.

ಆನೆ ಕೊಂಚ ಕೆರಳಿದ್ದರೂ ಬೈಕ್ ಸವಾರರ ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆಯಿತ್ತು. ಆದರೆಪ್ರವಾಸಿಗರು ಅದೃಷ್ಟವಶಾತ್ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.ಅರಣ್ಯ ಪ್ರದೇಶದ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದು, ಕಾಡುಪ್ರಾಣಿಗಳಿಗೆ ಆಹಾರ ನೀಡುವುದು ಮತ್ತು ಸೆಲ್ಫಿ ತೆಗೆಯುವುದು ಸಂಪೂರ್ಣವಾಗಿ ನಿಷೇಧವಾಗಿದ್ದರೂ ಸಹ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಾಣಿಗಳ ಸ್ವಭಾವ ಕ್ಷಣಾರ್ಧದಲ್ಲಿ ಬದಲಾಗುವುದರಿಂದ ಅರಣ್ಯ ಮಾರ್ಗಗಳಲ್ಲಿ ಸಂಚರಿಸುವಾಗ ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗರೂಕರಾಗಿರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.ನಿಯಮ ಉಲ್ಲಂಘಿಸಿ ಕಾಡುಪ್ರಾಣಿಗಳ ಜೊತೆ ಹುಚ್ಚಾಟವಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ಅರ್ಚಕನನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ

ತಿರುವನಂತಪುರಂ: ದೇವಾಲಯದ ಉತ್ಸವದ ವೇಳೆ ಆನೆಯೊಂದು ಅರ್ಚಕನನ್ನು ಸೊಂಡಿಲಿನಿಂದ ಎತ್ತಿ ಎಸೆದ ಪರಿಣಾಮ ಗಂಭೀರ ಗಾಯಗೊಂಡಿರುವ ಘಟನೆ ಕೇರಳದ (Kerala) ತ್ರಿಶೂರ್‌ನಲ್ಲಿ(Thrissur) ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ (Viral) ಆಗಿದೆ.

ಘಟನೆ ಅನ್ನಮನದ ಮಹಾದೇವ ದೇವಾಲಯದ (Annamanada Mahadeva Temple) ಆವರಣದಲ್ಲಿ ಮೆರವಣಿಗೆ ಸಮಯದಲ್ಲಿ ಸಂಭವಿಸಿದೆ. ಉತ್ಸವದ ಅಂಗವಾಗಿ ಅಲಂಕರಿಸಲ್ಪಟ್ಟ ಆನೆಯನ್ನು ದೇವಾಲಯದ ಆವರಣಕ್ಕೆ ತರಲಾಗಿತ್ತು. ದೇವರ ವಿಗ್ರಹವನ್ನು ಆನೆಯ ಮೇಲೆ ಇರಿಸಲು ಸಿದ್ಧತೆ ನಡೆಯುತ್ತಿದ್ದಾಗ, ಮಾವುತ ಅರ್ಚಕರೊಬ್ಬರಿಗೆ ಆನೆಯ ಮೇಲೆ ಹತ್ತಲು ಸಹಾಯ ಮಾಡುತ್ತಿದ್ದರು.

ಈ ವೇಳೆ ಏಕಾಏಕಿ ಉದ್ರೇಕಗೊಂಡ ಆನೆ ಹತ್ತಿರ ನಿಂತಿದ್ದ ಮತ್ತೊಬ್ಬ ಅರ್ಚಕನನ್ನು ಸೊಂಡಿಲಿನಿಂದ ಎತ್ತಿ ಪಕ್ಕಕ್ಕೆ ಎಸೆದಿದೆ. ಘಟನೆಯಿಂದ ಅರ್ಚಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದ ತಕ್ಷಣ ಮಾವುತ ಆನೆಯ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನೆ ಅರ್ಚಕನನ್ನು ಎತ್ತಿ ಎಸೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja