ಕೋಲ್ಕತ್ತಾ: ವಿಧಾನಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಪಶ್ಚಿಮ ಬಂಗಾಳದ (West Bengal) ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಈಗ ಬಂಡಾಯದ ಬೀದಿಗೆ ಬಂದಿವೆ. ಪಶ್ಚಿಮ ಬಂಗಾಳ ವಿಧಾನಸಭೆಯನ್ನು ನಡುಗಿಸಿರುವ ನಕಲಿ ಸಹಿ ಹಗರಣಕ್ಕೆ (Signature Forgery Scandal) ಸಂಬಂಧಿಸಿದಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಸ್ಫೋಟಕ ಸತ್ಯ ಬಹಿರಂಗಪಡಿಸಿದ ಬೆನ್ನಲ್ಲೇ, ಟಿಎಂಸಿ ಪಕ್ಷವು ತನ್ನ ಇಬ್ಬರು ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಿದೆ.
ವಿಧಾನಸಭೆಯಲ್ಲಿ ಶೋಭಂದೇವ್ ಚಟ್ಟೋಪಾಧ್ಯಾಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಬೆಂಬಲಿಸುವ ಪತ್ರದಲ್ಲಿ ತಮ್ಮ ಸಹಿಗಳನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದ ಟಿಎಂಸಿ ಶಾಸಕರಾದ ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ನೆಪವೊಡ್ಡಿ ಮಮತಾ ಬ್ಯಾನರ್ಜಿ (Mamata Banerjee) ಪಕ್ಷದಿಂದ ಹೊರಹಾಕಿದ್ದಾರೆ. ಟಿಎಂಸಿ ಉಪಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಸಹಿ ಮಾಡಿರುವ ಉಚ್ಚಾಟನಾ ಪತ್ರದಲ್ಲಿ, ಈ ಇಬ್ಬರು ಶಾಸಕರು ಸತತವಾಗಿ ಪಕ್ಷದ ಪ್ರಮುಖ ಸಭೆಗಳಿಗೆ ಗೈರುಹಾಜರಾಗುತ್ತಿದ್ದಾರೆ ಮತ್ತು ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುತ್ತಾ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ಇಬ್ಬರನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣವೇ ಉಚ್ಚಾಟಿಸಲು ನಿರ್ಧರಿಸಿದೆ"ಎಂದು ತಿಳಿಸಲಾಗಿದೆ. ಟಿಎಂಸಿ ತನ್ನದೇ ಶಾಸಕರ ಸಹಿ ಕದ್ದಿದೆ ಎಂದ ಸಿಎಂ ಸುವೇಂದು ಪ್ರಸ್ತುತ ಪಶ್ಚಿಮ ಬಂಗಾಳದ ಸಿಐಡಿ (CID) ಪೊಲೀಸರು ಈ ನಕಲಿ ಸಹಿ ಹಗರಣದ ತನಿಖೆ ನಡೆಸುತ್ತಿದ್ದು, ಹಲವು ಹಿರಿಯ ಟಿಎಂಸಿ ನಾಯಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ತನಿಖೆಯ ಭಾಗವಾಗಿ ಇಂದೇ (ಜೂನ್ 01) ವಿಚಾರಣೆಗೆ ಹಾಜರಾಗುವಂತೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರಿಗೂ ಸಿಐಡಿ ಸಮನ್ಸ್ ನೀಡಿತ್ತಾದರೂ, ಅವರು ಇಂದು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ತಿಳಿದುಬಂದಿದೆ. ಅಭಿಷೇಕ್ ಬ್ಯಾನರ್ಜಿ ಅವರದ್ದೇ ತಪ್ಪು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಮೇಲೆ ಟಿಎಂಸಿ ನಾಯಕರು ಒಬ್ಬೊಬ್ಬರಾಗಿ ಪಕ್ಷದ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಪಕ್ಷದ ಒಗ್ಗಟ್ಟನ್ನು ಮುರಿಯಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಮ್ಮ ಶಾಸಕರು ಸಭೆಗೆ ಬರದಂತೆ ತಡೆಯಲು ಬಿಜೆಪಿ ಸರ್ಕಾರ ಪೊಲೀಸರ ಮೂಲಕ ಬೆದರಿಕೆ ಹಾಕಿಸುತ್ತಿದೆ. ನನ್ನ ಪಕ್ಷದ ನಾಲ್ವರು ಚುನಾಯಿತ ಶಾಸಕರು ಸಭೆಗೆ ಬರುವ ಮುನ್ನ ಪೊಲೀಸರು ತಮಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಬಂಗಾಳದ ಈ ಸಿಗ್ನೇಚರ್ ಸ್ಕ್ಯಾಂಡಲ್ ಸದ್ಯ ದೇಶದ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶಾಸಕರ ಉಚ್ಚಾಟನೆಗೂ ಮುನ್ನ ಮಾಧ್ಯಮಗಳ ಎದುರು ಟಿಎಂಸಿ ಹಗರಣವನ್ನು ಬಯಲಿಗೆಳೆದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್‌ನ ಭ್ರಷ್ಟಾಚಾರ ಕೇವಲ ಬಂಗಾಳದ ಸಾಮಾನ್ಯ ಜನರನ್ನು ಮಾತ್ರವಲ್ಲ, ಅವರದೇ ಪಕ್ಷದ ಶಾಸಕರನ್ನೂ ಬಿಟ್ಟಿಲ್ಲ. ಟಿಎಂಸಿ ನಾಯಕರು ತಮ್ಮದೇ ಶಾಸಕರ ಸಹಿಗಳನ್ನು ಕದ್ದು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಈ ಬಗ್ಗೆ ಸ್ವತಃ ಆ ಪಕ್ಷದ ಶಾಸಕರಾದ ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರೇ ಲಿಖಿತ ದೂರು ನೀಡಿದ್ದಾರೆ. ಈ ಹಗರಣದಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ.
ಪಕ್ಷದಿಂದ ಉಚ್ಚಾಟನೆಗೊಂಡ ಬೆನ್ನಲ್ಲೇ ಮಾತನಾಡಿದ ಶಾಸಕ ಸಂದೀಪನ್ ಸಹಾ, ಈ ಇಡೀ ಹಗರಣಕ್ಕೆ ಅಭಿಷೇಕ್ ಬ್ಯಾನರ್ಜಿ ಅವರೇ ನೇರ ಹೊಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಭೆಗೆ ಬಾರದ ಶಾಸಕರ ಸಹಿಗಳನ್ನು ನಕಲಿ ಮಾಡಿ ಪಟ್ಟಿಯನ್ನು ಸಿದ್ಧಪಡಿಸಿದ್ದು ಪಕ್ಷ ಮಾಡಿದ ಬಹುದೊಡ್ಡ ತಪ್ಪು. ಪಕ್ಷದ ಜನರಲ್ ಸೆಕ್ರೆಟರಿಯಾಗಿ ಶಾಸಕರ ಪಟ್ಟಿಗೆ ಅಭಿಷೇಕ್ ಬ್ಯಾನರ್ಜಿ ಅವರೇ ಸಹಿ ಹಾಕಿದ್ದಾರೆ. ಆ ಪಟ್ಟಿಯಲ್ಲಿ ಸಾಲು ಸಾಲು ತಪ್ಪುಗಳಿವೆ. ಒಟ್ಟಾರೆ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದ ಅಭಿಷೇಕ್ ಬ್ಯಾನರ್ಜಿ ತಮ್ಮ ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ, ಹಾಗಾಗಿ ಸಹಜವಾಗಿಯೇ ಎಲ್ಲಾ ಪ್ರಶ್ನೆಗಳು ಅವರ ಮೇಲೆಯೇ ಏಳುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

