ಬೆಂಗಳೂರು: ಕರ್ನಾಟಕದಲ್ಲಿ(Karnataka) ಹೊಸ ಸರ್ಕಾರದ ಸಚಿವ ಸಂಪುಟ ರಚನೆಯ ಕಸರತ್ತು ತೀವ್ರಗೊಂಡಿರುವ ಬೆನ್ನಲ್ಲೇ, ಮಾಜಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರ ಆಡಿಯೋ ಲೀಕ್ ವಿವಾದವು ಕಾಂಗ್ರೆಸ್ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನವೇ ದೆಹಲಿಯಲ್ಲಿ ಸಚಿವರ ಪಟ್ಟಿ ಅಂತಿಮಗೊಳ್ಳುತ್ತಿರುವ ಬೆನ್ನಲ್ಲೇ ಜಮೀರ್ ಅವರಿಗೆ ಹೊಸ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಒಳಸಂಚು ನಡೆಸಿದ ಹಾಗೂ ಎಸ್‌ಡಿಪಿಐ (SDPI) ಪಕ್ಷಕ್ಕೆ ಪರೋಕ್ಷ ಬೆಂಬಲ ನೀಡಿದ ಆರೋಪದ ಆಡಿಯೋ ವೈರಲ್ ಆಗುತ್ತಿದ್ದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಆತಂಕಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ವಿರುದ್ಧದ ಆರೋಪಗಳ ಕುರಿತು ಸುದೀರ್ಘ ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.
ಸಚಿವ ಸ್ಥಾನಕ್ಕೆ ಕುತ್ತು?: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಚಿವರ ಅಂತಿಮ ಪಟ್ಟಿಯನ್ನು ಹಿಡಿದು ದೆಹಲಿಗೆ ಹಾರಿದ್ದಾರೆ. ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಪ್ರಮುಖ ನಾಯಕರು ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ. ಆದರೆ, ಈ ಆಡಿಯೋ ಹಗರಣದಿಂದಾಗಿ ಜಮೀರ್ ಖಾನ್ ಹೆಸರು ಸಂಪುಟ ಪಟ್ಟಿಯಿಂದ ಕೈಬಿಡಲ್ಪಟ್ಟಿದೆಯೇ ಎಂಬ ಟೆನ್ಷನ್ ಜಮೀರ್ ಬೆಂಬಲಿಗರಲ್ಲಿ ಮನೆಮಾಡಿದೆ.
ಡಿಕೆಶಿ 'ನೋ ರಿಯಾಕ್ಷನ್' ತಂತ್ರ: ಈ ಇಡೀ ಆಡಿಯೋ ವಿವಾದದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೆ 'ನೋ ರಿಯಾಕ್ಷನ್' ಎಂದಿದ್ದಾರೆ.
ರಾಜಕೀಯ ಸಂದೇಶ: ಡಿಕೆಶಿ ಅವರ ಈ ಮೌನವು ಜಮೀರ್ ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಬೆನ್ನಿಗೆ ಇರಿದ ಆರೋಪ ಹೊತ್ತಿರುವ ಜಮೀರ್ ಪರವಾಗಿ ಕೆಪಿಸಿಸಿ ಅಧ್ಯಕ್ಷರು ಯಾವುದೇ ರಕ್ಷಣೆಗೆ ನಿಲ್ಲುತ್ತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇದು ರವಾನಿಸಿದೆ.
ಹೈಕಮಾಂಡ್ ಅಖಾಡ ಮತ್ತು ನಾಯಕರ ಅಮಾನತುಈಗಾಗಲೇ ಇಬ್ಬರು ಔಟ್: ಈ ಒಳಸಂಚಿನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಹಿರಿಯ ಮುಸ್ಲಿಂ ನಾಯಕರಾದ ಅಬ್ದುಲ್ ಜಬ್ಬಾರ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕಠಿಣ ಶಿಸ್ತುಕ್ರಮ ಜರುಗಿಸಿದೆ.
ಅಂತಿಮ ತೀರ್ಪು ಬಾಕಿ: ಅದೇ ಹಾದಿಯಲ್ಲಿ ಜಮೀರ್ ವಿರುದ್ಧವೂ ಹೈಕಮಾಂಡ್ ಕೆಂಗಣ್ಣು ಬೀರಿದ್ದು, ಸಚಿವ ಸ್ಥಾನ ವಂಚಿತರನ್ನಾಗಿ ಮಾಡುವ ಮೂಲಕ ಅವರಿಗೆ ಶಿಕ್ಷೆ ನೀಡಲು ಕಾಂಗ್ರೆಸ್ ನಾಯಕತ್ವ ಮುಂದಾಗಿದೆಯೇ ಎಂಬ ಕುತೂಹಲಕ್ಕೆ ದೆಹಲಿಯಲ್ಲಿ ಉತ್ತರ ಸಿಗಬೇಕಿದೆ.

