ಬೆಂಗಳೂರು: ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಡ್ಡಿಯಾಗಿರುವ ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಠಿಣ ಕಾರ್ಯಾಚರಣೆ ಆರಂಭಿಸಿದೆ. ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರ ನಿರ್ದೇಶನದಂತೆ ಏಪ್ರಿಲ್ 5 ರಿಂದ ವಿಶೇಷ ತೆರವು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕೇವಲ ಮೂರು ದಿನಗಳಲ್ಲಿ ದಾಖಲೆ ಪ್ರಮಾಣದ ತೆರವು ಕಾರ್ಯ ನಡೆದಿದೆ.
ವಲಯವಾರು ಕಾರ್ಯಾಚರಣೆ ವಿವರ:
ವಿಶೇಷ ತಂಡಗಳ ಮೂಲಕ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಏಪ್ರಿಲ್ 5 ರಿಂದ 7ರ ಅವಧಿಯಲ್ಲಿ ಒಟ್ಟು 1,872ಕ್ಕೂ ಹೆಚ್ಚು ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ.
ಕೆ.ಆರ್.ಪುರಂ ವಲಯ: 812 ಫ್ಲೆಕ್ಸ್ ತೆರವು.
ಮಹದೇವಪುರ ವಲಯ: 1,060 ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ತೆರವು.
ವಿಶೇಷ ತಂಡಗಳ ರಚನೆ:
ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಪ್ರತಿ ವಿಭಾಗದಲ್ಲಿ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಿಗೆ ದೈನಂದಿನ ಗುರಿಯನ್ನು ನೀಡಲಾಗಿದ್ದು, ಏಪ್ರಿಲ್ 13ರವರೆಗೆ ಈ ವಿಶೇಷ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಠಿಣ ಕಾನೂನು ಕ್ರಮದ ಎಚ್ಚರಿಕೆ:
ಪಾಲಿಕೆಯ ಅನುಮತಿ ಪಡೆಯದೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಥವಾ ಪೋಸ್ಟರ್‌ಗಳನ್ನು ಅಳವಡಿಸುವುದು ದಂಡನೀಯ ಅಪರಾಧವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕೇವಲ ದಂಡ ಮಾತ್ರವಲ್ಲದೆ, ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪಾಲಿಕೆ ಎಚ್ಚರಿಸಿದೆ.
ಸಾರ್ವಜನಿಕರಿಗೆ ಮನವಿ:
"ಸ್ವಚ್ಛ ಮತ್ತು ಸುಂದರ ಬೆಂಗಳೂರು ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಯಾವುದೇ ಜಾಹೀರಾತುಗಳನ್ನು ಪ್ರದರ್ಶಿಸುವ ಮೊದಲು ಪಾಲಿಕೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಗರದ ಸುರಕ್ಷತೆ ದೃಷ್ಟಿಯಿಂದ ಅನಧಿಕೃತ ಬ್ಯಾನರ್‌ಗಳನ್ನು ಹಾಕುವುದನ್ನು ಬಿಡಬೇಕು," ಎಂದು ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

