ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ನಾಳೆ, ಅಂದರೆ ಏಪ್ರಿಲ್ 09ರಂದು ಮಧ್ಯಾಹ್ನ 3.00 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಿದೆ.
ಫಲಿತಾಂಶ ವೀಕ್ಷಿಸುವುದು ಹೇಗೆ?
ವಿದ್ಯಾರ್ಥಿಗಳು ಮಂಡಲಿಯ ಅಧಿಕೃತ ವೆಬ್‌ಸೈಟ್ https://karresults.nic.in ಅಥವಾ KarnatakaOne ಮೊಬೈಲ್ ಆಪ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಇದಲ್ಲದೆ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗಳಿಗೆ ವಾಟ್ಸಾಪ್ ಅಥವಾ ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ವಿವರಗಳನ್ನು ಕಳುಹಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಡಿಜಿಲಾಕರ್‌ನಲ್ಲಿ ಅಂಕಪಟ್ಟಿ:
ಈ ವರ್ಷದ ವಿಶೇಷವೆಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕ ಲಭ್ಯಗೊಳಿಸಲಾಗುತ್ತಿದೆ. ಫಲಿತಾಂಶ ಪ್ರಕಟವಾದ ತಕ್ಷಣವೇ, ಅಂದರೆ ಮಧ್ಯಾಹ್ನ 3.00 ಗಂಟೆಗೆ ವಿದ್ಯಾರ್ಥಿಗಳು digilocker.gov.in ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಡಿಜಿಲಾಕರ್ ಬಳಸುವ ವಿಧಾನದ ಕುರಿತು ಮಂಡಳಿಯು ಮಾಹಿತಿ ವಿಡಿಯೋ ಲಿಂಕ್ (tinyurl.com) ಅನ್ನು ಸಹ ಹಂಚಿಕೊಂಡಿದೆ.
ಸಂಬಂಧಪಟ್ಟ ಕಾಲೇಜುಗಳ ಲಾಗಿನ್‌ನಲ್ಲಿಯೂ ಅಂದೇ ಮಧ್ಯಾಹ್ನ ಫಲಿತಾಂಶದ ಪಟ್ಟಿ ಲಭ್ಯವಿರಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

