Dailyhunt Logo
  • Light mode
    Follow system
    Dark mode
    • Play Story
    • App Story
ಪಾದಯಾತ್ರೆಗೆ ನಾಗೇಂದ್ರ ರಾಜೀನಾಮೆ ಕೇವಲ ಒಂದು ವಿಷಯವಷ್ಟೇ, 8-10 ಹಲವು ವಿಚಾರಗಳೊಂದಿಗೆ ನಮ್ಮ ಹೋರಾಟ: ಬಿ.ವೈ. ವಿಜಯೇಂದ್ರ ಸ್ಪಷ್ಟನೆ

ಪಾದಯಾತ್ರೆಗೆ ನಾಗೇಂದ್ರ ರಾಜೀನಾಮೆ ಕೇವಲ ಒಂದು ವಿಷಯವಷ್ಟೇ, 8-10 ಹಲವು ವಿಚಾರಗಳೊಂದಿಗೆ ನಮ್ಮ ಹೋರಾಟ: ಬಿ.ವೈ. ವಿಜಯೇಂದ್ರ ಸ್ಪಷ್ಟನೆ

Navayuga News 1 week ago

ಬೆಂಗಳೂರು: ಮುಂಬರುವ ಪಾದಯಾತ್ರೆಗೆ ಸಂಬಂಧಿಸಿದಂತೆ ಎದ್ದಿರುವ ಗೊಂದಲಗಳನ್ನು ತೆರೆಗೆ ಸರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ತಾವೇ ಸ್ವತಃ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗೆ ಒಟ್ಟಾಗಿ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಬಿ. ನಾಗೇಂದ್ರ ಅವರು ಈಗಾಗಲೇ ರಾಜೀನಾಮೆ ನೀಡಿರುವುದರಿಂದ ಇನ್ನು ಪಾದಯಾತ್ರೆಯ ಅಗತ್ಯವೇನಿದೆ ಎಂಬ ಗೊಂದಲ ಕೆಲ ಮುಖಂಡರಲ್ಲಿತ್ತು ಆದರೆ "ನಾಗೇಂದ್ರರ ರಾಜೀನಾಮೆ ನಮ್ಮ ಹೋರಾಟದ ಹಲವು ವಿಷಯಗಳಲ್ಲಿ ಒಂದು ಮಾತ್ರ. ನಾವು ಕೇವಲ ಒಂದು ಹಗರಣಕ್ಕೆ ಸೀಮಿತವಾಗಿ ಪಾದಯಾತ್ರೆ ಮಾಡುತ್ತಿಲ್ಲ. ಸರ್ಕಾರದ ವೈಫಲ್ಯಗಳ ವಿರುದ್ಧ ಸುಮಾರು 8 ರಿಂದ 10 ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಈ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರೊಂದಿಗೂ ಸುದೀರ್ಘ ಚರ್ಚೆ ನಡೆಸಿ, ಅವರ ಅನುಮತಿಯನ್ನೂ ಪಡೆದುಕೊಂಡಿದ್ದೇನೆ" ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಪಾದಯಾತ್ರೆ ವಿಷಯವಾಗಿ ಸಣ್ಣ ತಪ್ಪು ಕಲ್ಪನೆ ಇರಬಹುದು ಎಂದ ವಿಜಯೇಂದ್ರ, ಅವರೊಂದಿಗೆ ಮತ್ತೊಮ್ಮೆ ಮಾತನಾಡಿ ಗೊಂದಲಗಳನ್ನು ಬಗೆಹರಿಸುವುದಾಗಿ ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯನ್ನು ತರಾಟೆಗೆ ತೆಗೆದುಕೊಂಡ ವಿಜಯೇಂದ್ರ, "ದಲಿತರನ್ನು ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ ಎಂದು ಸುಳ್ಳು ಆರೋಪ ಮಾಡುವ ಕಾಂಗ್ರೆಸ್ ನಾಯಕರು ಮತ್ತು ಮುಖ್ಯಮಂತ್ರಿಗಳೇ, ಹಿಂದೆ ಕೆ.ಎ.ಎನ್. ರಾಜಣ್ಣ ಅವರು ರಾಹುಲ್ ಗಾಂಧಿಯವರ ಮತಗಳ್ಳತನದ ಬಗ್ಗೆ ಪ್ರಶ್ನೆ ಎತ್ತಿದಾಗ ಕೇವಲ 24 ಗಂಟೆಯೊಳಗೆ ಅವರಿಂದ ರಾಜೀನಾಮೆ ಪಡೆದರಲ್ಲವೇ? ಅಂದು ರಾಜಣ್ಣ ಅವರು ದಲಿತ ಅಥವಾ ಪರಿಶಿಷ್ಟ ಪಂಗಡದ ನಾಯಕ ಎಂಬುದು ನಿಮಗೆ ನೆನಪಾಗಲಿಲ್ಲವೇ?" ಎಂದು ಪ್ರಶ್ನಿಸಿದರು.

ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‌ಇಪಿ ಮತ್ತು ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡು, ಆ ಸಮುದಾಯಕ್ಕೆ ಅನ್ಯಾಯ ಮಾಡುವಾಗ ಮುಖ್ಯಮಂತ್ರಿಗಳಿಗಾಗಲಿ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಾಗಲಿ ದಲಿತರ ಕಾಳಜಿ ಕಾಡಲಿಲ್ಲವೇ ಎಂದು ಅವರು ಆಕ್ರೋಶ ಹೊರಹಾಕಿದರು. ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿತ್ತು, ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದಕ್ಕೆ ಮಣ್ಣು ಹಾಕುವ ಕೆಲಸ ಮಾಡಿದೆ ಎಂದರು.

ಸೆಪ್ಟೆಂಬರ್ 1 ರಿಂದ ಲಿಂಗಸುಗೂರಿನಿಂದ ಆರಂಭವಾಗಲಿರುವ ಈ ಪಾದಯಾತ್ರೆಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ದುರ್ಬಳಕೆಯಾಗಿರುವ 185 ಕೋಟಿ ರೂಪಾಯಿ ಹಣವನ್ನು ತಕ್ಷಣವೇ ಮರಳಿ ಅದೇ ನಿಗಮಕ್ಕೆ ಜಮಾ ಮಾಡಬೇಕು, ಕೊಪ್ಪಳ ಭಾಗದ ಹೊಸಪೇಟೆ ಸಮಾನಾಂತರ ಜಲಾಶಯ ಯೋಜನೆಯನ್ನು ಜಾರಿಗೊಳಿಸಬೇಕು ಹಾಗೂ ಭರವಸೆ ನೀಡಿದಂತೆ 2.5 ಲಕ್ಷ ಯುವಜನರಿಗೆ ಉದ್ಯೋಗ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.

ಎಸ್‌ಇಪಿ-ಟಿಎಸ್‌ಪಿ ಹಣ ದುರ್ಬಳಕೆ, ಮೀಸಲಾತಿ ಕಡೆಗಣನೆ, ಬರಗಾಲ ನಿರ್ವಹಣೆಯಲ್ಲಿ ವೈಫಲ್ಯ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯ ಮುಂತಾದ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಈ ಪಾದಯಾತ್ರೆ ನಡೆಸಲಿದೆ ಎಂದು ಪ್ರಕಟಿಸಿದರು. ಕೊನೆಯಲ್ಲಿ, ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಬಂಧನದ ಕುರಿತು ಉತ್ತರಿಸಿದ ಅವರು, ಅಧಿಕಾರಿ ತನಿಖೆಗೆ ಹಾಜರಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಈ ಹಗರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳು ಭಾಗಿಯಾಗಿದ್ದರೂ ಸಮಗ್ರ ತನಿಖೆಯಾಗಿ ಸತ್ಯ ಹೊರಬರಬೇಕು ಎಂದು ಆಗ್ರಹಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Navayuga News