ಬಾಗಲಕೋಟೆ: ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿದ್ದರೂ (Expelled), ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ಅಭ್ಯರ್ಥಿ ಪರವಾಗಿಯೇ ಅಖಾಡಕ್ಕಿಳಿದಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಇಲ್ಲಿನ ಬಿ.ವಿ.ವಿ. ಸಂಘದ ಆಡಿಟೋರಿಯಂನಲ್ಲಿ ನಡೆದ ಸಭೆಯಲ್ಲಿ ವೀರಣ್ಣ ಚರಂತಿಮಠ ಪರ ಮತಯಾಚಿಸಿದ ಯತ್ನಾಳ್, ತಮ್ಮ ರಾಜಕೀಯ ನಿಷ್ಠೆ ವ್ಯಕ್ತಿಗಿಂತ 'ಹಿಂದುತ್ವ'ಕ್ಕೆ ಎಂಬ ಸಂದೇಶ ರವಾನಿಸಿದ್ದಾರೆ.
ಉಚ್ಚಾಟನೆಯ ಬಿಸಿ ನಡುವೆಯೂ ಪ್ರಚಾರದ ಕಿಚ್ಚು:
ಪಕ್ಷದ ವರಿಷ್ಠರ ವಿರುದ್ಧದ ಹೇಳಿಕೆಗಾಗಿ ಉಚ್ಚಾಟನೆ ಅನುಭವಿಸುತ್ತಿರುವ ಯತ್ನಾಳ್, ತಾಂತ್ರಿಕವಾಗಿ ಪಕ್ಷದಿಂದ ಹೊರಗಿದ್ದರೂ ಮಾನಸಿಕವಾಗಿ ಮತ್ತು ಸೈದ್ಧಾಂತಿಕವಾಗಿ ಬಿಜೆಪಿಯ ಸಿದ್ಧಾಂತದಿಂದ ದೂರವಾಗಿಲ್ಲ ಎಂಬುದು ಈ ಸಭೆಯ ಮೂಲಕ ಸ್ಪಷ್ಟವಾಗಿದೆ. "ಹಿಂದುತ್ವದ ಉಳಿವಿಗಾಗಿ ಚರಂತಿಮಠ ಗೆಲ್ಲಬೇಕು" ಎಂಬ ಅವರ ಮಾತುಗಳು, ಪಕ್ಷದ ಶಿಸ್ತು ಕ್ರಮಕ್ಕಿಂತ ಸಿದ್ಧಾಂತವೇ ಮುಖ್ಯ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ತಲುಪಿಸಿದೆ.
ಬಾಕಿ ಉಳಿದ ಬಾಂಧವ್ಯ: ಒಂದೇ ವೇದಿಕೆಯಲ್ಲಿ ಘಟಾನುಘಟಿಗಳು!
ಸಮಾಜದ ಬಲ ಪ್ರದರ್ಶನದ ನೆಪದಲ್ಲಿ ನಡೆದ ಈ ಸಭೆಯಲ್ಲಿ ಯತ್ನಾಳ್ ಅವರೊಂದಿಗೆ ಶಾಸಕರಾದ ಅರವಿಂದ ಬೆಲ್ಲದ, ಸಿ.ಸಿ. ಪಾಟೀಲ್ ಹಾಗೂ ಒಂದು ಕಾಲದ ರಾಜಕೀಯ ಪ್ರತಿಸ್ಪರ್ಧಿ ಎನ್ನಲಾಗಿದ್ದ ಮುರುಗೇಶ್ ನಿರಾಣಿ ಕೂಡ ಕಾಣಿಸಿಕೊಂಡಿದ್ದು ವಿಶೇಷ. ಉಚ್ಚಾಟಿತ ನಾಯಕನ ಜೊತೆಗೆ ಹಾಲಿ ಶಾಸಕರು ಮತ್ತು ಮಾಜಿ ಸಚಿವರು ವೇದಿಕೆ ಹಂಚಿಕೊಂಡಿರುವುದು, ಬಿಜೆಪಿಯೊಳಗಿನ ಪಂಚಮಸಾಲಿ ನಾಯಕರ ಆಂತರಿಕ ಬಾಂಧವ್ಯ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಯಿತು.ಯ
ತ್ನಾಳ್ ಅವರ ಈ ನಡೆ ಒಂದು ಕಡೆ ಅಭ್ಯರ್ಥಿ ಚರಂತಿಮಠ ಅವರಿಗೆ ಸಮುದಾಯದ ಮತಗಳನ್ನು ಕ್ರೋಢೀಕರಿಸಲು ನೆರವಾದರೆ, ಇನ್ನೊಂದೆಡೆ ಬಿಜೆಪಿಯ ವರಿಷ್ಠರಿಗೆ ತಮ್ಮ ಜನಪ್ರಿಯತೆ ಮತ್ತು ಅನಿವಾರ್ಯತೆಯನ್ನು ಸಾಬೀತುಪಡಿಸುವ ತಂತ್ರಗಾರಿಕೆಯಂತೆಯೂ ಕಂಡುಬರುತ್ತಿದೆ.

