Dailyhunt
ರಾಜ್ಯಪಾಲರ ನಡೆಗೆ ಟಿ.ಎ.ನಾರಾಯಣಗೌಡ ಆಕ್ಷೇಪ: 'ಶಿಕ್ಷಣ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಬೇಡ' ಎಂದು ಪತ್ರ

ರಾಜ್ಯಪಾಲರ ನಡೆಗೆ ಟಿ.ಎ.ನಾರಾಯಣಗೌಡ ಆಕ್ಷೇಪ: 'ಶಿಕ್ಷಣ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಬೇಡ' ಎಂದು ಪತ್ರ

Navayuga News 1 week ago

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪತ್ರ ಬರೆದಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ರಾಜ್ಯಪಾಲರಿಗೆ ಬಹಿರಂಗ ಪತ್ರ ಬರೆದಿದ್ದು, ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಆಗ್ರಹಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ:

ರಾಜ್ಯಪಾಲರ ಈ ನಡೆ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ ಎಂದು ಪತ್ರದಲ್ಲಿ ಟೀಕಿಸಲಾಗಿದೆ. "ನೀವು ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿಯಲ್ಲ. ರಾಜ್ಯದಲ್ಲಿ ಬಹುಮತದ ಸರ್ಕಾರವಿದ್ದಾಗ, ಅದರ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ರಾಜ್ಯಪಾಲರಿಗೆ ಯಾವುದೇ ಸಾಂವಿಧಾನಿಕ ಅಥವಾ ನೈತಿಕ ಹಕ್ಕಿಲ್ಲ" ಎಂದು ನಾರಾಯಣಗೌಡರು ನೇರ ನುಡಿಗಳಲ್ಲಿ ಆಕ್ಷೇಪಿಸಿದ್ದಾರೆ.

ಶಿಕ್ಷಣದ ಹಕ್ಕು ರಾಜ್ಯಕ್ಕಿದೆ:

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಪೂರ್ಣ ಅಧಿಕಾರ ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಕ್ಕಿದೆ. ಗ್ರೇಡಿಂಗ್ ವ್ಯವಸ್ಥೆಯ ಸಾಧಕ-ಬಾಧಕಗಳನ್ನು ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ಅಸ್ತಿತ್ವದಲ್ಲೇ ಇಲ್ಲದ ಅಥವಾ ಅಪರಿಚಿತವಾಗಿರುವ 'ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ' ಎಂಬ ಸಂಘಟನೆಯ ಮನವಿಗೆ ರಾಜ್ಯಪಾಲರು ಇಷ್ಟೊಂದು ತುರ್ತಾಗಿ ಸ್ಪಂದಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹುದ್ದೆಯ ಬಗ್ಗೆ ಪ್ರಶ್ನೆ:

ರಾಜ್ಯಪಾಲರ ಹುದ್ದೆಯು ಪ್ರಜಾಪ್ರಭುತ್ವದೊಳಗೆ ನುಸುಳಿರುವ ರಾಜಶಾಹಿ ವ್ಯವಸ್ಥೆಯ ಪಳೆಯುಳಿಕೆಯಂತೆ ಕಾಣುತ್ತಿದೆ. ಇಂತಹ ಅನಗತ್ಯ ಹಸ್ತಕ್ಷೇಪಗಳು 'ನಮ್ಮ ದೇಶಕ್ಕೆ ರಾಜ್ಯಪಾಲರ ವ್ಯವಸ್ಥೆ ಬೇಕೇ?' ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ ಎಂದು ಅವರು ಕಿಡಿಕಾರಿದ್ದಾರೆ. ಕನ್ನಡಿಗರ ಹಿತಾಸಕ್ತಿ ಮತ್ತು ಸರ್ಕಾರದ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಉತ್ತರ ಭಾರತದಲ್ಲಿ ಕನ್ನಡ ಕಲಿಸಿ:

"ನಿಮಗೆ ತೃತೀಯ ಭಾಷೆಯ ಮೇಲೆ ಅಷ್ಟೊಂದು ಪ್ರೇಮವಿದ್ದರೆ, ಮೊದಲು ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಿರಿ. ಅಲ್ಲಿನ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದಡಿ ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಸಲು ಧೈರ್ಯವಿದ್ದರೆ ಸೂಚಿಸಿ. ಅದು ಬಿಟ್ಟು ಕರ್ನಾಟಕದ ನೆಲದಲ್ಲಿ ನಿಂತು ಕನ್ನಡಿಗರ ವಿರುದ್ಧ ಮಾತನಾಡಬೇಡಿ" ಎಂದು ನಾರಾಯಣಗೌಡರು ಸವಾಲು ಹಾಕಿದ್ದಾರೆ.

ಹಿಂದಿ ಸಾಮ್ರಾಜ್ಯಶಾಹಿ ಲಾಬಿ:

ರಾಜ್ಯಪಾಲರು ಹಿಂದಿ ಸಾಮ್ರಾಜ್ಯಶಾಹಿಯ ಲಾಬಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, "ರಾಜ್ಯ ಸರ್ಕಾರವು ಶಿಕ್ಷಣ ತಜ್ಞರ ಸಲಹೆಯಂತೆ ಜಾರಿಗೆ ತಂದಿರುವ ಗ್ರೇಡಿಂಗ್ ವ್ಯವಸ್ಥೆಯು ದಶಕಗಳ ಶಾಪ ವಿಮೋಚನೆಯಾಗಿದೆ. ಇದನ್ನು ತಡೆಯಲು ಪ್ರಯತ್ನಿಸಿದರೆ ಕರ್ನಾಟಕದಲ್ಲಿ 'ಕ್ರಾಂತಿಯ ಜ್ವಾಲೆ' ಹೊತ್ತಿಕೊಳ್ಳಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.

'ಗಂಟುಮೂಟೆ ಕಟ್ಟಿಕೊಂಡು ತೊಲಗಿ':

ರಾಜ್ಯಪಾಲರು ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ನಾರಾಯಣಗೌಡರು, "ನಿಮ್ಮ ಕೆಲಸ ನೀವು ನೋಡಿ, ಹಿಂಬಾಗಿಲಿನಿಂದ ಆಡಳಿತ ನಡೆಸಲು ಯತ್ನಿಸಬೇಡಿ. ಇದೇ ರೀತಿ ಹಸ್ತಕ್ಷೇಪ ಮುಂದುವರಿದರೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ಹೇಳಬೇಕಾಗುತ್ತದೆ" ಎಂದು ಕಟುವಾದ ಶಬ್ದಗಳಲ್ಲಿ ಎಚ್ಚರಿಸಿದ್ದಾರೆ.

ರಾಜಭವನದ ಉಪಚಾರದಲ್ಲಿ ಏನಾದರೂ ಕೊರತೆಯಿದ್ದರೆ ಕೇಳಿ ವ್ಯವಸ್ಥೆ ಮಾಡುತ್ತೇವೆ, ಆದರೆ ಜನರ ಆಡಳಿತದಲ್ಲಿ ಮೂಗು ತೂರಿಸಬೇಡಿ ಎಂದು ಅವರು ಪತ್ರದಲ್ಲಿ ವ್ಯಂಗ್ಯವಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navayuga News