Tuesday, 11 Aug, 2.47 pm Navayuga News

ರಾಜ್ಯ
ರೈತರಿಗೆ ಯೂರಿಯಾ ವಿತರಣೆ : ಯಾವುದೇ ಕಾರಣಕ್ಕೂ ಅಭಾವ ಉಂಟಾಗಬಾರದು ಕೃಷಿ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ

ಹಾವೇರಿ: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಯೂರಿಯಾ ಗೊಬ್ಬರ ಕೊರತೆ ಉಂಟಾಗಬಾರದು. ರೈತರಿಗೆ ತೊಂದರೆಯಾಗಬಾರದು, ಬಿಡುಗಡೆಯಾಗಿರುವ ಗೊಬ್ಬರವನ್ನು ಬೇಡಿಕೆ ಇರುವ ರೈತರಿಗೆ ಸಮರ್ಪಕವಾಗಿ ವಿತರಣೆಮಾಡಿ. ಮತ್ತಷ್ಟು ಬೇಡಿಕೆ ಇದ್ದರೆ ನನ್ನ ಗಮನಕ್ಕೆ ತನ್ನಿ. ಬೇಡಿಕೆ ಪ್ರಮಾಣದ ಯೂರಿಯಾವನ್ನು ಬಿಡುಗಡೆಮಾಡಿಸುತ್ತೇನೆ ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.

ಜಿಲ್ಲೆಯ ರೈತರ ಯೂರಿಯಾ ಗೊಬ್ಬರದ ಬೇಡಿಕೆ ಹಾಗೂ ಮಳೆ ಪರಿಸ್ಥಿತಿ, ಪ್ರವಾಹ ಸ್ಥಿತಿಗತಿ, ಪರಿಹಾರ ಕಾರ್ಯಗಳು ಹಾಗೂ ಕೋವಿಡ್ ನಿರ್ವಹಣೆ ಕುರಿತಂತೆ ಸೋಮವಾರ ಬೆಂಗಳೂರಿನಿಂದ ವರ್ಚುವಲ್ ಫ್ಲಾಟಫಾರ್ಮ್ ಮೂಲಕ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಗೃಹ ಸಚಿವರು ಅಸಮರ್ಪಕ ವಿತರಣೆಯಿಂದ ಯೂರಿಯಾ ಗೊಬ್ಬರದ ಅಭಾವ ಉಂಟಾಗಿದೆ. ಈಗ ಬಿಡುಗಡೆಯಾಗಿರುವ ಯೂರಿಯಾ ಗೊಬ್ಬರವನ್ನು ಈವರೆಗೆ ಕಡಿಮೆ ಪೂರೈಕೆ ಮಾಡಿರುವ ತಾಲೂಕುಗಳಿಗೆ ಆದ್ಯತೆ ಮೇಲೆ ಬಿಡುಗಡೆಮಾಡಿ. ಯಾವ ರೈತರಿಗೆ ಅಗತ್ಯವಿದೆ ಅಂತಹ ರೈತರಿಗೆ ಗೊಬ್ಬರ ಹಂಚಿಕೆಮಾಡಿ ಎಂದು ಸೂಚನೆ ನೀಡಿದರು.

ರಾಣೇಬೆನ್ನೂರ, ಹಾವೇರಿ, ಹಾನಗಲ್, ಶಿಗ್ಗಾಂವ, ಸವಣೂರ ತಾಲೂಕಿನಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಈ ದಿನ ಮತ್ತೆ 1200 ಮೆಟ್ರಿಕ್ ಟನ್ ಸ್ಪಿಕ್ ಕಂಪನಿಯ ಯೂರಿಯಾ ಪೂರೈಕೆಯಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಇದ್ದರೆ ಸಂಬಂಧಿಸಿದ ಕಂಪನಿಗಳೊಂದಿಗೆ ಚರ್ಚಿಸಲಾಗುವುದು. ಸಾಗಾಣಿಕೆಯ ಅಡಚಣೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲೆಗೆ ಸಮರ್ಪಕ ಯೂರಿಯಾ ಪೂರೈಕೆಗೆ ಕ್ರಮವಹಿಸಲಾಗುವುದು. ಈ ಕುರಿತಂತೆ ತಕ್ಷವೇ ನನ್ನ ಗಮನಕ್ಕೆ ತರಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಲೈಸನ್ಸ್ ರದ್ದುಪಡಿಸಿ: ಯೂರಿಯಾ ಬೇಡಿಕೆ ಇರುವ ತಾಲೂಕುಗಳಿಗೆ ಆದ್ಯತೆ ಮೇಲೆ ಪೂರೈಕೆಯ ಜೊತೆಗೆ ಸಹಕಾರಿ ಸಂಘಗಳ ಮೂಲಕವೇ ಗೊಬ್ಬರ ವಿತರಣೆಗೆ ಕ್ರಮವಹಿಸಬೇಕು. ಸಹಕಾರಿ ಸಂಘಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸದ ಕಡೆಗಳಲ್ಲಿ ಖಾಸಗಿ ಡೀಲರ್‍ಗಳಿಗೆ ಹಂಚಿಕೆಮಾಡಬೇಕು. ಪ್ರತಿ ಸೊಸೈಟಿ ಹಾಗೂ ಡೀಲರ್‍ಗಳು ಯಾವ ಗ್ರಾಮಕ್ಕೆ ಯಾವ ರೈತರಿಗೆ ಎಷ್ಟು ಪ್ರಮಾಣದ ಗೊಬ್ಬರ ವಿತರಣೆ ಮಾಡಿದ್ದಾರೆ ಎಂಬ ಮಾಹಿತಿ ಪಡೆಯಬೇಕು. ವಿತರಣೆಗೆ ಗೊಬ್ಬರ ಪಡೆದು ಕೃತಕ ಅಭಾವ ಸೃಷ್ಟಿಸಿ ಬೇರೆ ಜಿಲ್ಲೆಗೆ ಯೂರಿಯಾ ಮಾರಾಟ ಮಾಡುವ ದೂರುಗಳು ಬಂದಿವೆ. ಈ ಕುರಿತಂತೆ ಕೃಷಿ ಜಾಗೃತ ದಳ ಪರಿಶೀಲನೆ ಮಾಡಬೇಕು. ದುರ್ಬಳಕೆ ಮಾಡಿಕೊಂಡ ಸೊಸೈಟಿಗಳ ಕಾರ್ಯದರ್ಶಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತ್‍ಗೊಳಿಸಿ. ಖಾಸಗಿ ಡೀಲರ್‍ಗಳು ತಪ್ಪೆಸಗಿದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದುಪಡಿಸಿ ಎಂದು ಖಡಕ್ ಸೂಚನೆ ನೀಡಿದರು.

ಖುದ್ದಾಗಿ ಮಾನೀಟರ್: ಯೂರಿಯಾ ರಸಗೊಬ್ಬರದ ದಾಸ್ತಾನುಗಳ ಮಳಿಗೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ. ಯೂರಿಯಾ ಗೊಬ್ಬರದ ವಿತರಣೆಯನ್ನು ಖುದ್ದಾಗಿ ಮೇಲುಸ್ತುವಾರಿವಹಿಸಿ ಸಮರ್ಪಕವಾಗಿ ರೈತರಿಗೆ ವಿತರಣೆಯಾಗುವಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Navayuga News
Top