ಮಂಡ್ಯ: ಕುಟುಂಬ ರಾಜಕಾರಣದ ವಿಚಾರವಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಕುಟುಂಬವನ್ನು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಟುವಾಗಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಅವರು ಗುಡುಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ಸಿದ್ದರಾಮಯ್ಯ ಅವರ ಮೊದಲ ಮಗನ ಅಕಾಲಿಕ ನಿಧನದ ಬಗ್ಗೆ ನನಗೂ ನೋವಿದೆ. ಆದರೆ, ತಮ್ಮ ಇನ್ನೊಬ್ಬ ಮಗನನ್ನು ಅವರು ರಾಜಕಾರಣಕ್ಕೆ ತಂದಿದ್ದು ಸಮಾಜ ಸೇವೆಗಾಗಿಯೇ? ಅವರ ಮಗ ಈಗ ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಜನರ ಸಮಸ್ಯೆ ಬಗೆಹರಿಸುವ ಬದಲು ರಾಜಕೀಯ ವಸೂಲಿಯಲ್ಲಿ ತೊಡಗಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ನಾಯಕರ ಕುಟುಂಬಗಳತ್ತ ಪ್ರಶ್ನೆ:
ದೇವೇಗೌಡರ ಕುಟುಂಬವನ್ನು ದೂರುವ ಎಷ್ಟು ಜನ ನಾಯಕರು ತಮ್ಮ ಕುಟುಂಬದವರನ್ನು ರಾಜಕೀಯಕ್ಕೆ ತಂದಿಲ್ಲ? ಉಪಮುಖ್ಯಮಂತ್ರಿಗಳ ಕುಟುಂಬದಲ್ಲಿ ಎಷ್ಟು ಜನ ಅಧಿಕಾರದಲ್ಲಿದ್ದಾರೆ? ಎರಡು ಮೂರು ಶಾಸಕರಿರುವ ಎಷ್ಟೋ ಕುಟುಂಬಗಳು ಕಾಂಗ್ರೆಸ್‌ನಲ್ಲಿವೆ. ಇದೆಲ್ಲವೂ ಮುಖ್ಯಮಂತ್ರಿಗಳಿಗೆ ತಿಳಿದಿಲ್ಲದ ವಿಷಯವಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಸಿಎಂ ಸ್ಥಾನದ ಆಸೆ ಬಗ್ಗೆ ವ್ಯಂಗ್ಯ:
ಸಿದ್ದರಾಮಯ್ಯ ಅವರು 2028ರವರೆಗೂ ತಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, "2013ರಲ್ಲೇ ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಅಧಿಕಾರದ ರುಚಿ ನೋಡಿದ ಮೇಲೆ ಈಗ ತಾನೇ ಶಾಶ್ವತ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಅವರು ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ಎಂಬ ಪರೀಕ್ಷೆ ಮುಂದಿನ ಚುನಾವಣೆಯಲ್ಲಿ ಎದುರಾಗಲಿದೆ. ಜನರ ತೀರ್ಪೇ ಅಂತಿಮ," ಎಂದು ಭವಿಷ್ಯ ನುಡಿದರು
ಐಪಿಎಲ್ ಟಿಕೆಟ್‌ಗಾಗಿ ಶಾಸಕರ ಪಟ್ಟು: 'ನಗಪಾಟಲಿಗೆ ಈಡಾಗಬೇಡಿ':
ಐಪಿಎಲ್ ಕ್ರಿಕೆಟ್ ಪಂದ್ಯಗಳ ಉಚಿತ ಟಿಕೆಟ್‌ಗಳಿಗಾಗಿ ರಾಜ್ಯದ ಶಾಸಕರು ಪಟ್ಟು ಹಿಡಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷುಲ್ಲಕ ಕಾರಣಗಳಿಗಾಗಿ ಜನಪ್ರತಿನಿಧಿಗಳು ಸಾರ್ವಜನಿಕವಾಗಿ ನಗೆಪಾಟಲಿಗೀಡಾಗುವುದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
"ಹಿಂದೆ ರಾಜ್ಯ ಕ್ರಿಕೆಟ್ ಮಂಡಳಿಯು (KSCA) ಗೌರವಪೂರ್ವಕವಾಗಿ ಶಾಸಕರಿಗೆ ಒಂದು ಹಾಗೂ ಸಚಿವರಿಗೆ ಎರಡು ಟಿಕೆಟ್‌ಗಳನ್ನು ಕಳುಹಿಸಿಕೊಡುವ ಸಂಪ್ರದಾಯ ಹೊಂದಿತ್ತು. ಅದು ನನಗೂ ತಿಳಿದಿದೆ. ಆದರೆ ಈಗಿನ ಶಾಸಕರು ತಮಗೆ ಟಿಕೆಟ್ ಬೇಕೇ ಬೇಕು ಎಂದು ಒತ್ತಡ ಹೇರುವುದು ಮತ್ತು ಈ ವಿಷಯವನ್ನು ದೊಡ್ಡದು ಮಾಡುವುದು ಶೋಭೆ ತರುವುದಿಲ್ಲ" ಎಂದರು.
ಗೌರವ ಉಳಿಸಿಕೊಳ್ಳಿ:
"ಜನಪ್ರತಿನಿಧಿಗಳಾದವರು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕೇ ಹೊರತು, ಕ್ರಿಕೆಟ್ ಟಿಕೆಟ್‌ಗಳಿಗಾಗಿ ಹಠ ಹಿಡಿಯಬಾರದು. ಇಂತಹ ವರ್ತನೆಗಳಿಂದ ಶಾಸಕರ ಘನತೆಗೆ ಧಕ್ಕೆ ಉಂಟಾಗುತ್ತದೆ. ಉಚಿತ ಟಿಕೆಟ್‌ಗಾಗಿ ಬೇಡಿಕೆ ಇಡುವ ಬದಲು ಆಸಕ್ತಿ ಇರುವವರು ತಾವೇ ಹಣ ಪಾವತಿಸಿ ಟಿಕೆಟ್ ಖರೀದಿಸುವುದು ಸೂಕ್ತ. ಇಂತಹ ಸಣ್ಣ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಹಾಸ್ಯದ ವಸ್ತುವಾಗಬೇಡಿ" ಎಂದು ಅವರು ಸಲಹೆ ನೀಡಿದರು.

