Monday, 25 Jan, 10.47 am Navayuga News

ಮುಖ್ಯ ಸುದ್ದಿಗಳು
ವಿಶೇಷ ಲೇಖನ : ಕರ್ನಾಟಕದಲ್ಲೊಂದು ಕಂಚಿ ಉತ್ತನೂರು ಎಂಬ 'ಉತ್ತಮಕಂಚಿ', 'ನಾಡಿನ ರಾಜಕಾರಣಿಗಳು ಮುಖ್ಯವಾಗಿ ಹಳ್ಳಿ ರಾಜಕಾರಣ ಮಾಡುವವರು ತಪ್ಪದೇ ಓದಬೇಕಾದ ಲೇಖನ'

ಶ್ರೀ ವರದರಾಜ ಸ್ವಾಮಿ, ಕಾಮಾಕ್ಷಿ ಮತ್ತು ಶಕುನ ಪಕ್ಷಿ ಹಲ್ಲಿರಾಜನ ದೇವಾಲಯ ಎಂದಾಕ್ಷಣ ನೆನಪಿನಂಗಳದಲ್ಲಿ ಉದಯಿಸುವ ಹೆಸರು ತಮಿಳುನಾಡಿನ ಕಂಚಿ (ಕಾಂಚೀಪುರಂ) ಕಂಚಿಯಷ್ಟೇ ಪ್ರಾಚೀನವಾದ, ಅಷ್ಟೇ ಮಹತ್ವದ ಸ್ಥಳ ಪುರಾಣವನ್ನು ಹೊಂದಿರುವ ಮತ್ತು ಅದೇ ಹೆಸರಿನಿಂದ ಕರೆಸಿಕೊಳ್ಳುವ ಪುಣ್ಯ ಕ್ಷೇತ್ರವೊಂದು ಕನ್ನಡ ತಾಯಿಯ ಸನ್ನಿಧಿಯಲ್ಲಿ ಇದೆಯೆಂಬ ವಿಚಾರ ಕನ್ನಡಿಗರ ಪಾಲಿನ ಸಂತಸದ ಸಂಗತಿ. ಸಹಸ್ರಾರು ವರ್ಷಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನ ತನ್ನೊಡಲಲ್ಲಿ ಅವಿತಿಟ್ಟುಕೊಂಡು ನಾಡಿನ ಸಂಸ್ಕøತಿ ಮತ್ತು ಪರಂಪರೆಗೆ ಮೆರುಗು ನೀಡುವಂತಿದೆ ಈ ಕ್ಷೇತ್ರ.
ಪ್ರಾಚೀನದಲ್ಲಿ ಉತ್ತಮಪುರಿ, ಉತ್ತಮಕಂಚಿ, ಎಂಬ ಹೆಸರುಗಳಿಂದ ಪ್ರಸಿದ್ಧಿ ಪಡೆದಿದ್ದ ಈ ಪುಣ್ಯ ಕ್ಷೇತ್ರವೇ ನಾಡಿನ ಚಿನ್ನದ ಬೀಡು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಉತ್ತನೂರು ಎಂಬ ವಿಶಿಷ್ಟ ಸ್ಥಳ. 'ಕರ್ನಾಟಕದ ಕಂಚಿ' ಎಂದೆನಿಸಿಕೊಂಡಿರುವ ಈ ಕ್ಷೇತ್ರಕ್ಕೆ ಲಭಿಸಿರುವ ಶಾಸನ ದಾಖಲೆಗಳ ಪ್ರಕಾರ 1500 ವರ್ಷಗಳ ಇತಿಹಾಸವಿದೆ. ಪುರಾಣ ಪ್ರಸಿದ್ಧ ಶ್ರೀ ವರದರಾಜ ಸ್ವಾಮಿ, ಪ್ರಹ್ಲಾದ, ಮತ್ತು ಶಕುನಪಕ್ಷಿ ಹಲ್ಲಿರಾಜರು ವಿರಾಜಮಾನವಾಗಿ ನೆಲೆ ನಿಂತಿರುವ ಪುಣ್ಯಕ್ಷೇತ್ರ ಇದಾಗಿದೆ.

ಪುರಾಣ ಕಾಲದ ಕ್ಷೇತ್ರ
ಮಹತ್ವದ ಪೌರಾಣಿಕ ಹಿನ್ನೆಲೆ ಇರುವ ಕ್ಷೇತ್ರ ಇದಾಗಿದ್ದು, ಲೋಕಕಲ್ಯಾಣಕ್ಕಾಗಿ ಮಹಾವಿಷ್ಣುವಿನ ಪ್ರೇರಣೆಯಂತೆ ದೇವಗುರುಗಳು ಹಾಗೂ ಸಪ್ತ ಋಷಿಗಳಲ್ಲಿ ಒಬ್ಬರಾದ ಭೃಗು ಮಹರ್ಷಿಗಳು ಮಹಾವಿಷ್ಣು ಸ್ವರೂಪಿಯಾದ ಶ್ರೀ ವರದರಾಜಸ್ವಾಮಿಯನ್ನು ತಮಿಳುನಾಡಿನ ಕಂಚಿ (ಕಾಂಚೀಪುರಂ), ಕರ್ನಾಟಕದ ಉತ್ತಮಕಂಚಿ(ಈಗಿನ ಉತ್ತನೂರು) ಮತ್ತು ಕೋಲಾರದ ಬಳಿಯ ಟೇಕಂಚಿ (ಈಗಿನ ಟೇಕಲ್) ಗಳಲ್ಲಿ ಏಕಕಾಲಕ್ಕೆ ಪ್ರತಿಷ್ಠಾಪಿಸಿದರೆಂಬ ಪ್ರತೀತಿಯಿದೆ. ಸಾಕ್ಷಾತ್ ಉಗ್ರ ನರಸಿಂಹನ ಅಂಶದಲ್ಲಿರುವ ಉತ್ತನೂರಿನ ವರದರಾಜ ಸ್ವಾಮಿಯ ಅತೀವ ಉಗ್ರತೆಯನ್ನು ಕಂಡು ಆತಂಕಕ್ಕೊಳಗಾದ ಭೃಗು ಮಹರ್ಷಿಗಳು ಮಹಾನ್ ಹರಿಭಕ್ತ ಪ್ರಹ್ಲಾದನನ್ನ ನೆನೆದಾಕ್ಷಣ ನರಸಿಂಹ ಅಂಶದಲ್ಲಿರುವ ಪ್ರಯೋಗಚಕ್ರಸಮೇತನಾದ ವರದರಾಜಸ್ವಾಮಿಯನ್ನ ಶಾಂತಗೊಳಿಸಲೆಂದು ಪ್ರಹ್ಲಾದ ಪ್ರತ್ಯಕ್ಷಗೊಂಡು ಭೃಗು ಮಹರ್ಷಿಗಳನ್ನೇ ಅಚ್ಚರಿಗೊಳಿಸಿದನಂತೆ. ಈಗಲೂ ವರದರಾಜಸ್ವಾಮಿಯ ಎದುರಿನಲ್ಲಿ ಪ್ರಹ್ಲಾದ ಮೂರ್ತಿಯನ್ನು ಕಾಣಬಹುದು. ಹಾಗಾಗಿ ಈ ದೇವಳ 'ಪ್ರಹ್ಲಾದ ವರದರಾಜಸ್ವಾಮಿ' ಕ್ಷೇತ್ರ ಎಂದೂ ಹೆಸರುವಾಸಿ.

ಚಾರಿತ್ರಿಕ ಹಿನ್ನೆಲೆ:
ಈ ಕ್ಷೇತ್ರದ ಇತಿಹಾಸದ ಪುಟಗಳನ್ನ ತಿರುವಿದಾಗ ಈ ಕ್ಷೇತ್ರಕ್ಕೆ ನೊಳಂಬರು, ಗಂಗರು ಮತ್ತು ಚೋಳರ ಕೊಡುಗೆ ಅಪಾರ. ಹೊಯ್ಸಳರು, ಬಾಣರು ಮತ್ತು ಪಲ್ಲವರು ತಮ್ಮ ಆಳ್ವಿಕೆಯ ಕಾಲದಲ್ಲಿ ಈ ಕ್ಷೇತ್ರವನ್ನು ಅಭಿವೃದ್ದಿಗೊಳಿಸಿರುವ ಸಂಗತಿ ಇಲ್ಲಿ ಲಭಿಸಿರುವ ತಾಮ್ರ ಪತ್ರಗಳು ಸ್ಪಷ್ಟಪಡಿಸುತ್ತವೆ. ಗಂಗರ ನೆಲೆವೀಡಾಗಿದ್ದ ಈ ಕ್ಷೇತ್ರಕ್ಕೆ ಗಂಗರ ಬಹುತೇಕ ರಾಜರುಗಳು ಭೇಟಿ ಕೊಟ್ಟಿದ್ದಾರೆ ಮತ್ತು ಅವರ ಕಾಲದಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂಬುದಕ್ಕೆ ಇಲ್ಲಿ ದೊರಕಿರುವ ಶಾಸನಗಳು ಮತ್ತು ವರದರಾಜಸ್ವಾಮಿ ದೇವಾಲಯದ ವಾಸ್ತುಶಿಲ್ಪ ಸಾಕ್ಷಿಯಾಗಿದೆ. ನಂತರದ ಚೋಳರ ಆಳ್ವಿಕೆಯ ಕಾಲದಲ್ಲಿ ಚೋಳರಾಜರಾದ ರಾಜೇಂದ್ರಚೋಳನ ಆಳ್ವಿಕೆಗೆ ಒಳಪಟ್ಟಿದ್ದ ಈ ಕ್ಷೇತ್ರ ಅವನ ಕಾಲಾವಧಿಯಲ್ಲಿ ಸುಭಿಕ್ಷವಾಗಿತ್ತು ಎಂಬ ವಿಚಾರ ಇಲ್ಲಿ ಲಭಿಸಿರುವ ಶಾಸನ ಮತ್ತು ತಾಮ್ರ ಪತ್ರಗಳಿಂದ ತಿಳಿದುಬರುತ್ತದೆ. ಹಾಗಾಗಿ ಈ ಊರನ್ನು ಚೋಳರಾಜರು 'ರಾಜೇಂದ್ರ ಚೋಳನ ಚತುರ್ವೇದಿ ಮಂಗಲಂ' ಎಂಬ ಹೆಸರಿನಿಂದ ಕರೆದಿದ್ದಾರೆ. ನೊಳಂಬ ರಾಜ ನನ್ನಿ ನೊಳಂಬನ ಆಳ್ವಿಕೆಗೆ ಒಳಪಟ್ಟಿದ್ದ ಕ್ಷೇತ್ರವಿದು. ವಿಜಯ ನಗರ ಸಾಮ್ರಾಜ್ಯದ ಆಳ್ವಿಕೆ ಕಾಲದಲ್ಲಿ ಶ್ರೀಕೃಷ್ಣ ದೇವರಾಯ ತಿರುಪತಿಗೆ ಹೋಗುವಾಗ ಇಲ್ಲಿಗೆ ಭೇಟಿ ನೀಡಿದ್ದನೆಂಬ ಪ್ರತೀತಿಯಿದೆ. ಇಂದಿಗೂ ತಿರುಪತಿಗೆ ಹೋಗುವ ಹಲವು ಭಕ್ತರು ಮೊದಲು ಇಲ್ಲಿಗೆ ಭೇಟಿ ಕೊಟ್ಟೇ ಹೋಗುತ್ತಾರೆ. ಚೋಳರ ಕಾಲದ ಕೊಡುಗೆಗಳಾದ ಮಡಿವಾಳೇಶ್ವರ, ಕನ್ನೇಶ್ವರ ಮತ್ತು ವಿಠಲೇಶ್ವರ ದೇವಾಲಗಳು ಮೊಘಲರ ದಾಳಿಗೆ ತ್ತತ್ತರಿಸಿ ಕರಾಳ ಕತ್ತಲೆಗೆ ಸರಿದಿವೆ. ಭೂಗರ್ಭದಲ್ಲಿ ಹುದುಗಿಹೋಗಿವೆಯೆನ್ನಲಾದ ಈ ದೇವಾಲಯಗಳ ಅಳಿದುಳಿದ ಶಿಲ್ಪಗಳು, ಶಾಸನಗಳು, ರಥಗಳು ಹಾಗೂ ಇನ್ನಿತರ ಕುರುಹುಗಳು ಉತ್ಖನನ ಮಾಡಿ ಹೊರ ತೆಗೆದಿದ್ದೇ ಆದಲ್ಲಿ ಕಾಲಗರ್ಭದಲ್ಲಿ ಮರೆಯಾಗಿ ಹೋಗಿರುವ ಅನೇಕ ಸಂಗತಿಗಳು ಬೆಳಕಿಗೆ ಬಂದು ನಾಡಿನ ಇತಿಹಾಸಕ್ಕೆ ಇನ್ನಷ್ಟು ಪುಟಗಳು ಸೇರ್ಪಡೆಗೊಳ್ಳುವುದರಲ್ಲಿ ಅನುಮಾನವಿಲ್ಲ. ಸೋಮೇಶ್ವರ (ಉತ್ತಮೇಶ್ವರ) ದೇವಾಲಯವೊಂದು ದಾಳಿಗೆ ಬಲಿಯಾಗದಂತೆ ಸಂರಕ್ಷಿಸಲ್ಪಟ್ಟಿರುವುದು ಸುದೈವ.

ಜಗತ್ತಿನ ಏಕೈಕ ಪ್ರಯೋಗಚಕ್ರ ಮಹಾವಿಷ್ಣು ಮೂರ್ತಿ
ಉತ್ತಮಕಂಚಿಯ ವರದರಾಜಸ್ವಾಮಿ ಮೂರ್ತಿಯ ವಿಶೇಷತೆಗಳು ವರ್ಣನೆಗೆ ನಿಲುಕದ್ದು ಎಂದರೆ ತಪ್ಪಾಗಲಾರದು. ಕಲಿಯುಗವರದ ಸಾಕ್ಷಾತ್ ತಿರುಪತಿ ವೆಂಕಟೇಶ್ವರನ ಹಾಗೆಯೇ ಕಂಗೊಳಿಸುತ್ತಿರುವ ಮತ್ತು ಉಗ್ರ ನರಸಿಂಹನ ಅಂಶದಲ್ಲಿರುವ ಐದೂವರೆ ಅಡಿ ಎತ್ತರದ ಈ ಮೂರ್ತಿ ಹೊಂದಿರುವ 'ಪ್ರಯೋಗ ಚಕ್ರ, 'ಅಭಯ ಹಸ್ತ' (ವರದ ಹಸ್ತ) ಅತ್ಯಾಕರ್ಷಕ ಮತ್ತು ವಿಸ್ಮಯಕಾರೀ ಅಂಶಗಳು. ಜಗತ್ತಿನ ಬೇರೆಲ್ಲಾ ಮಹಾವಿಷ್ಣು ಮೂರ್ತಿಗಳಲ್ಲಿ ಸುದರ್ಶನ ಚಕ್ರ ಸಹಜ ಮುದ್ರೆಯಲ್ಲಿದ್ದರೆ ಈ ಮೂರ್ತಿಯಲ್ಲಿ ಪ್ರಯೋಗ ಮುದ್ರೆಯಲ್ಲಿರುವುದು ಮೂರ್ತಿಯ ಆಕರ್ಷಣೆ ಮತ್ತು ವಿಶೇಷತೆ ಇಮ್ಮಡಿಗೊಳ್ಳುವಂತೆ ಮಾಡಿದೆ. ಬಲಗೈಯಲ್ಲಿ ಪ್ರಯೋಗಮುದ್ರೆಯಲ್ಲಿರುವ ಸುದರ್ಶನ ಚಕ್ರ ದುಷ್ಟ ಶಿಕ್ಷೆಗೆ ಹಾಗೂ ಅಭಯ ಹಸ್ತ ಅಥವಾ ವರದ ಹಸ್ತ ಶಿಷ್ಟ ರಕ್ಷಣೆಗೆ ಸದಾ ಸನ್ನದ್ಧ ಎಂಬುದು ಈ ಕ್ಷೇತ್ರದ ಭಕ್ತಾದಿಗಳ ಅಚಲ ನಂಬಿಕೆ. ಈ ಕಾರಣಕ್ಕಾಗಿಯೇ ಈ ಮೂರ್ತಿ ಜಗತ್ತಿನಲ್ಲೇ ವಿಶೇಷ ಮೂರ್ತಿಯೆನಿಸಿಕೊಂಡಿರುವುದರ ಜೊತೆಗೆ 'ಪ್ರಯೋಗಚಕ್ರ ವರದರಾಜಸ್ವಾಮಿ' ಎಂದೇ ಪ್ರಸಿದ್ಧಿ ಪಡೆದಿದೆ. ಶ್ರೀವತ್ಸ ಚಿಹ್ನೆಯಿರುವ ಉದ್ದದ ಕಿರೀಟ ಬಲು ಆಕರ್ಷಣೀಯವಾಗಿದೆ. ವಕ್ಷ ಸ್ಥಳದಲ್ಲಿ ಕೌಸ್ತುಭ ರತ್ನ ಮತ್ತು ಲಕ್ಷ್ಮಿ ನೆಲೆಸಿದ್ದಾಳೆ. ಇವಿಷ್ಟು ಮೂರ್ತಿಯ ವಿಶೇಷತೆಗಳು.

ಶತಮಾನಗಳ ತಿರುಪತಿಯ ನಂಟು
ಮತ್ತೊಂದು ಕುತೂಹಲಕಾರೀ ಸಂಗತಿಯೆಂದರೆ ಇಲ್ಲಿನ ವರದರಾಜಸ್ವಾಮಿಯ ಪೂಜಾಕೈಂಕರ್ಯಗಳಲ್ಲಿ ತೊಡಗಿರುವ ಐದಾರು ಮನೆಗಳ ಸುಮಾರು ಹತ್ತಕ್ಕೂ ಹೆಚ್ಚು ಅರ್ಚಕರು ತಿರುಪತಿಯ ಶ್ರೀನಿವಾಸನ ಸನ್ನಿದಿಯಲ್ಲಿ ಅರ್ಚಕ ವೃತ್ತಿಯಲ್ಲಿದ್ದಾರೆ. ಅವರ ವಂಶಗಳ ಇಂದಿನ ತಲೆಮಾರಿನ ಮಕ್ಕಳೂ ತಿರುಪತಿಯ ವೇದಪಾಠಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅವರ ಹಿರಿಯರಲ್ಲಿ ಕೆಲವರು ನಿವೃತ್ತಿ ಹೊಂದಿ ಇದೇ ಊರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅಪ್ಪಣ್ಣಾಚಾರ್ಯರು, ದೊರೆಸ್ವಾಮಾಚಾರ್ಯರು, ವೆಂಕಟನರಸಿಂಹಾಚಾರ್ಯರಾದಿಯಾಗಿ ಇವರ ನಂತರದ ತಲೆಮಾರಿನವರನ್ನೊಳಗೊಂಡಂತೆ ನಾಲ್ಕೈದು ತಲೆಮಾರುಗಳಿಂದ ತಿರುಪತಿ ತಿಮ್ಮಪ್ಪನ ಸೇವಯಲ್ಲಿರುವುದರಿಂದ ಈ ಊರಿಗೂ ಮತ್ತು ತಿರುಪತಿಗೂ ಶತಮಾನಗಳ ನಂಟು ಇರುವ ವಿಚಾರ ಕನ್ನಡ ನಾಡು ಹೆಮ್ಮೆ ಪಡುವಂತದ್ದು.

ನಾಲ್ಕು ಶಿವದೇವಾಲಯಗಳ ನಡುವಿನ ಏಕೈಕ ವಿಷ್ಣುದೇವಾಲಯ
ವರದರಾಜರಾಜಸ್ವಾಮಿ ದೇವಾಲಯದ ಪೂರ್ವಕ್ಕೆ ಮಡಿವಾಳೇಶ್ವರ, ಪಶ್ಚಿಮಕ್ಕೆ ಸೋಮೇಶ್ವರ (ಉತ್ತಮೇಶ್ವರ), ಉತ್ತರಕ್ಕೆ ಕನ್ನೇಶ್ವರ ಮತ್ತು ದಕ್ಷಿಣಕ್ಕೆ ವಿಠಲೇಶ್ವರ ದೇವಾಲಯಗಳಿಂದ ಸುತ್ತುವರೆಯಲ್ಪಟ್ಟಿರುವುದರಿಂದ ನಾಲ್ಕು ಶಿವ ದೇವಾಲಯಗಳ ನಡುವಿನ ಏಕೈಕ ಮಹಾವಿಷ್ಣು ದೇವಾಲಯ ಎಂಬ ವೈಶಿಷ್ಟ್ಯತೆಗೆ ಪಾತ್ರವಾಗಿರುವ ಕ್ಷೇತ್ರ ಇದಾಗಿದೆ. ಮೊಘಲರ ದಾಳಿಗೆ ತುತ್ತಾಗಿ 3 ಶಿವದೇವಾಲಯಗಳು ಕುರುಹುಗಳೂ ಕಾಣದಂತಾಗಿ ಕಾಲನ ತೆರೆಮರೆಗೆ ಸರಿದಿರುವುದು ದುರದೃಷ್ಟಕರ ಸಂಗತಿ. ಪಶ್ಚಿಮಕ್ಕಿರುವ ಉತ್ತಮೇಶ್ವರ ದೇವಾಲಯವೊಂದು ಸಂರಕ್ಷಿಸಲ್ಪಟ್ಟಿದ್ದು ನಿತ್ಯ ಪೂಜೆಗೊಳ್ಳುತ್ತಿದೆ. ಇಷ್ಟೆಲ್ಲಾ ವಿಶೇಷತೆಗಳನ್ನ ಹೊಂದಿರುವ ಜಗತ್ತಿನ ಏಕೈಕ ದೇವಾಲಯವಿದು ಎಂಬ ಸಂಗತಿಯನ್ನ ಇಲ್ಲಿನ ಪುರಾಣ ಮತ್ತು ಇತಿಹಾಸ ಪುನರುಚ್ಚರಿಸುತ್ತದೆ.

ಶಕುನ ಪಕ್ಷಿ ಹಲ್ಲಿರಾಜ ಮತ್ತು ಸೂರ್ಯ ಚಂದ್ರರು
ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ ಶಕುನಪಕ್ಷಿ ಎಂದೇ ಕರೆಸಿಕೊಳ್ಳುವ ಹಲ್ಲಿಗೆ ಒಂದು ಗರ್ಭಗುಡಿಯಿರುವುದು. ತಮಿಳುನಾಡಿನ ಕಂಚಿಯಲ್ಲಿರುವ ಮಾದರಿಯಲ್ಲೇ ಹಲ್ಲಿರಾಜ ಮತ್ತು ಸೂರ್ಯ ಚಂದ್ರರು ಇಲ್ಲಿನ ವರದರಾಜ ದೇವಾಲಯದ ವಿಶಿಷ್ಟ ಆಕರ್ಷಣೆ. ಹಲ್ಲಿ ದೋಷ ನಿವಾರಣೆ ಮತ್ತು ಬದುಕಿನ ಒಳಿತಿಗಾಗಿ ಇಲ್ಲಿನ ಹಲ್ಲಿರಾಜನ ದರ್ಶನ ಅತ್ಯಂತ ಪ್ರಭಾವಿಕಾರಿಯಾದದ್ದು ಎಂಬುದು ಇಲ್ಲಿನ ಭಕ್ತರ ದೃಢ ನಂಬಿಕೆ. ಕರ್ನಾಟಕ, ಆಂದ್ರ ಹಾಗೂ ತಮಿಳುನಾಡು ರಾಜ್ಯಗಳಿಂದ ಭಕ್ತರು ಹಲ್ಲಿ ದೋಷ ನಿವಾರಣೆಗಾಗಿ ಈ ಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ.

ಇಲ್ಲಿನ ಧಾರ್ಮಿಕ ಆಚರಣೆಗಳು
ವರ್ಷದ ಜನವರಿ - ಫೆಬ್ರವರಿ ತಿಂಗಳಲ್ಲಿ ತಿರುಪತಿಯ ಮಾದರಿಯಲ್ಲಿಯೇ ಇಲ್ಲಿನ ವರದರಾಜಸ್ವಾಮಿಯ ಬ್ರಹ್ಮೋತ್ಸವಗಳು ನಡೆಯುತ್ತವೆ. ಈ ಅವಧಿಯಲ್ಲಿ ಬರುವ ಭಾರತ ಹುಣ್ಣಿಮೆಯಂದು ವರದರಾಜಸ್ವಾಮಿ ಬ್ರಹ್ಮರಥೋತ್ಸವ ಸರ್ಕಾರದ ವತಿಯಿಂದ ನೆರವೇರಲ್ಪಡುತ್ತದೆ. ಈ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನಿಗೆ ಸೇವೆ ಸಲ್ಲಿಸುವ ಇದೇ ಊರಿನ ಅರ್ಚಕ ಸಮುದಾಯದವರು ಇಲ್ಲಿಗೆ ಬಂದು ನೆಲೆಸಿ ಧಾರ್ಮಿಕ ಕಾರ್ಯಗಳನ್ನ ನೆರವೇರಿಸುತ್ತಾರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವಗಳಿಗೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.
ಕಾರ್ತೀಕ ಮಾಸದ ಕೊನೆಯ ಸೋಮವಾರ, ಶಿವರಾತ್ರಿಯ ದಿನಗಳಂದು ಇಲ್ಲಿನ ಉತ್ತಮೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ವಿಜನಗರ ಸಾಮ್ರಾಜ್ಯದ ಇತಿಹಾಸದ ಕಡೆ ಕಣ್ಣಾಯಿಸಿದಾಗ ಆ ಸಾಮ್ರಾಜ್ಯದ ದಕ್ಷಿಣ ಮಾಂಡಲೀಕ ಕಂಪರಾಯನ ಕಾಲದಲ್ಲಿ ಮುಳಬಾಗಿಲು ಉಪರಾಜಧಾನಿಯಾಗಿತ್ತು. ಮುಳಬಾಗಿಲಿನಲ್ಲಿ ದಾಸ ಪರಂಪರೆಗೆ ನಾಂದಿ ಹಾಡಿದ ಮಹಾಮಹಿಮರಾದ ಶ್ರೀಪಾದರಾಜರು ಮತ್ತು ಅವರ ಶಿಷ್ಯರಾದ ವ್ಯಾಸರಾಯರಾದಿಯಾಗಿ ಎಲ್ಲ ದಾಸ ಶ್ರೇಷ್ಠರು ಪಕ್ಕದ ಉತ್ತಮಕಂಚಿಯ ಶ್ರೀ ವರದರಾಜ ದೇವಾಲಯದಲ್ಲಿ ಶ್ರೀಕೃಷ್ಣನ ಗೀತೆಗಳನ್ನ ರಚಿಸಿ ಗಾಯನ ಮತ್ತು ನೃತ್ಯದ ಪರಿಪಾಟವನ್ನು ಬೆಳೆಸಿಕೊಂಡು ಬಂದಿದ್ದರು ಎಂಬ ಸಂಗತಿ ತಿಳಿದುಬರುತ್ತದೆ.

ವನಮಹೋತ್ಸವ ಮತ್ತು ಬೀರೇಶ್ವರ ಜಾತ್ರೆ
ಉತ್ತನೂರಿನ ಅಧಿದೇವತೆ ಉತ್ತನೂರು ಚೌಡೇಶ್ವರಿ ದೇವಾಲಯ ಅಪಾರ ಭಕ್ತಾಧಿಗಳನ್ನ ಒಳಗೊಂಡಿರುವ ಊರಿನ ಮತ್ತೊಂದು ಪ್ರಮುಖ ದೇವಾಲಯವಾಗಿದೆ. ಈ ದೇವಾಲಯದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ 'ವನಮಹೋತ್ಸವ' ಎಂಬ ವಿಶಿಷ್ಟ ಆಚರಣೆ ರಾಜ್ಯದಲ್ಲೇ ಅಪರೂಪದ ಆಚರಣೆಯಾಗಿದೆ. ಆ ಮಹೋತ್ಸವದ ದನದಂದು ಪ್ರಾಣಿಬಲಿ ನಿಷಿದ್ಧ. ಊರಿನ ಹೊರಭಾಗದಲ್ಲಿರುವ 1500 ವರ್ಷಗಳಷ್ಟು ಪುರಾತನವಾದ 'ಬೀರೇಶ್ವರ ಸಿದ್ದೇಶ್ವರ' ದೇವಾಲಯ ಈ ಕ್ಷೇತ್ರದ ಮತ್ತೊಂದು ವೈಶಿಷ್ಟ್ಯ. ಐದಾರು ವರ್ಷಗಳಿಗೊಮ್ಮೆ ಇಲ್ಲಿ ನಡೆಯುವ ಬೀರೇಶ್ವರ ಸಿದ್ದೇಶ್ವರ ಜಾತ್ರೆ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಹೊಂದಿರುವ ಕುರುಬರ ಜಾತ್ರೆಯಾಗಿದೆ. ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ಕುರುಬ ಸಮುದಾಯದವರ ಪಾಲಿನ ಕೈಲಾಸವಾಗಿದೆ ಈ ಕ್ಷೇತ್ರ.

ಗ್ರಾಮದೇವತೆಗಳು
ಊರಿನ ಗ್ರಾಮದೇವತೆಗಳಲ್ಲಿ ಪ್ರಮುಖ ಮತ್ತು ಅಧಿದೇವತೆ ತಾಯಿ ಚೌಡೇಶ್ವರಿ. ನಿತ್ಯ ಪೂಜೆಗೊಳಪಡುವ ಶಕ್ತಿದೇವತೆಯಾಗಿ ಸಾವಿರಾರು ವರ್ಷಗಳಿಂದ ಊರಿನಲ್ಲಿ ನೆಲೆ ನಿಂತಿದ್ದಾಳೆ. ವರ್ಷದ ವಿಶೇಷ ಸಂದರ್ಭಗಳಲ್ಲಿ ಊರಿನ ಹೆಣ್ಣುಮಕ್ಕಳು ತಂಬಿಟ್ಟು ದೀಪಗಳನ್ನ ಬೆಳಗಿಸಿ, ದೀಪಗಳನ್ನ ಹೊತ್ತು ಬಂದು ತಾಯಿಗೆ ಹರಕೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ. ಜೊತೆಗೆ ಇತರೆ ಗ್ರಾಮದೇವತೆಗಳಾದ ನಡುಬೀದಿ ಗಂಗಮ್ಮ ಅರಿಶಿನ ಮೂರ್ತಮ್ಮ, ಪಟಾಲಮ್ಮ, ಸಪ್ಪಲಮ್ಮ, ಹರಿಜನ ಕೇರಿ ಗಂಗಮ್ಮ, ಸಂತೆ ಬೀದಿ ಗಂಗಮ್ಮ, ಕೆರೆ ಕಟ್ಟೆ ಗಂಗಮ್ಮ, ಏನ್ಕೆರೆ ದಡದಲ್ಲಿರುವ ಗಂಗಮ್ಮ ದೇವಾಲಯಗಳನ್ನೊಳಗೊಂಡಂತೆ ಸಪ್ತ ಮಾತೃಕೆಯರಿಗೂ ದೀಪ ಹೊತ್ತು ಹರಕೆ ಸಲ್ಲಿಸಲಾಗುತ್ತದೆ. ಈ ಸಾಲಿಗೆ ಸೇರುವ ಮತ್ತೊಂದು ವಿಷೇಶ ದೇವತೆಯೆಂದರೆ ಅದು ಘಟ್ಟು ಗಂಗಮ್ಮ. ಊರಿನ ಪಶ್ಚಿಮಕ್ಕೆ ಇರುವ ಕಾಡಿನಲ್ಲಿ ಈ ತಾಯಿ ನೆಲೆಸಿದ್ದಾಳೆ. ಮಳೆ ಬಾರದೇ ಬರಗಾಲ ಎದುರಾದಾಗಲೆಲ್ಲ ಘಟ್ಟು ಗಂಗಮ್ಮ ತಾಯಿಗೆ ಇಡೀ ಊರಿನ ಜನ ದೀಪ ಹೊತ್ತು ಹರಕೆ ಸಲ್ಲಿಸಿ ಬೇಡಿಕೊಳ್ಳುವ ಪದ್ಧತಿಯಿದೆ. ಉತ್ತನೂರಿನ ಜನತೆ ಮಾತ್ರವಲ್ಲದೆ ಸುತ್ತಮುತ್ತಲ 20 ರಿಂದ 25 ಹಳ್ಳಿಗಳಿಂದ ಭಕ್ತಾದಿಗಳು ಇಲ್ಲಿ ಹರಕೆ ಸಲ್ಲಿಸಲು ಬರುತ್ತಾರೆ. ಹಾಗೆ ಹರಕೆ ಸಲ್ಲಿಸಿದ ವರ್ಷದಲ್ಲಿ ತಪ್ಪದೇ ಮಳೆ ಬೆಳೆಯಾಗಿರುವ ನಿದರ್ಶನಗಳಿವೆ.

ದೇವಸ್ಥಾನ ಚಿಕ್ಕದಾದರೂ ಐತಿಹ್ಯ ದೊಡ್ಡದಿರುವ ಮತ್ತೆರಡು ದೇವಾಲಯಗಳೆಂದರೆ ನಡುಬೀದಿ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಕೆರೆಕೋಡಿ ಆಂಜನೇಯಸ್ವಾಮಿ ದೇವಸ್ಥಾನ. ಅಪಾರ ಭಕ್ತಾದಿಗಳನ್ನೊಳಗೊಂಡ ದೇವಾಲಯಗಳು ಇವಾಗಿವೆ. ಊರಿನ ನಡುಭಾಗದಲ್ಲಿರುವ ಶ್ರೀರಾಮಮಂದಿರ ಅತ್ಯಂತ ಚಟುವಟಿಕೆಯಿಂದ ಕೂಡಿರುವ ಭಕ್ತಿ ಕೇಂದ್ರವಾಗಿದೆ. ಇಲ್ಲಿ ನಿತ್ಯ ನಡೆಯುವ ಭಜನಾ ಕೈಂಕರ್ಯ ಊರಿನ ಭಕ್ತಿ ಪರಂಪರೆಗೆ ಬಹುದೊಡ್ಡ ಸಾಕ್ಷಿ. ಉತ್ತನೂರಿನ ಭಜನಾ ಮಂಡಳಿ ಸುತ್ತಮುತ್ತಲಿನ ಊರುಗಳಲ್ಲೇ ಹೆಸರುವಾಸಿಯಾಗಿರುವುದು ಊರಿಗೆ ಹೆಮ್ಮೆ ತರುವಂತಹ ವಿಚಾರ. ಊರು ಮುಂಭಾಗದ ವಿಘ್ನೇಶ್ವರ, ನವಗ್ರಾಮದ ವಿನಾಯಕ, ಊರಿನ ಆದಿಭಾಗದ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಊರಿನ ಉತ್ತರಕ್ಕಿರುವ ಉತ್ತಮಾಂಜನೇಯಸ್ವಾಮಿ ದೇವಾಲಯ ಹೀಗೆ ಊರಿನ ತುಂಬಾ ದೇವಾಲಯಗಳೇ ಇವೆ ಎಂದರೆ ತಪ್ಪಾಗಲಾರದು. ಊರಿನ ಈ ಎಲ್ಲ ವಿಶೇಷತೆಗಳ ನಡುವೆ ಮತ್ತೊಂದು ವಿಶೇಷ ದೈವಶಕ್ತಿ ಎಂದರೆ ಅದು ಕಾಟಪುರಾಜರು. ವರ್ಷದ ಒಂದೇ ಒಂದು ದಿನ ಅಂದರೆ ಸಂಕ್ರಾಂತಿ ಹಬ್ಬದ ದಿನ ಈ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಜಾತಿ, ಧರ್ಮ, ರಾಜಕೀಯ ಪಕ್ಷಗಳು ಇತ್ಯಾದಿಯಾಗಿ ಅಸಹ್ಯ ಎನಿಸುವಷ್ಟರಮಟ್ಟಿಗೆ ಮಾನವಕುಲವನ್ನು ಬೇರ್ಪಡಿಸುವಂಥಾ ಎಲ್ಲ ತಾರತಮ್ಯಗಳನ್ನ ಬದಿಗೊತ್ತಿ ಇಡೀ ಗ್ರಾಮದ ಜನತೆ ಒಂದೇ ಮನೆಯ ಮಕ್ಕಳಂತೆ ಇಲ್ಲಿ ಸೇರುವುದೇ ದೊಡ್ಡ ಸಂಭ್ರಮ. ಮತ್ತೊಂದು ಕುತೂಹಲ ಕೆರಳಿಸುವಂಥಾ ಮತ್ತು ಸ್ಪಷ್ಟ ಮಾಹಿತಿ ಇಲ್ಲದ ಸ್ಥಳವೆಂದರೆ ಅದು ಊರಿನ ಪಶ್ಚಿಮಕ್ಕಿರುವ ಪುರಾತನವಾದ ಬೃಂದಾವನ. ಈ ಬೃಂದಾವನ ಯಾವುದಕ್ಕೆ ಸಂಬಂಧಿಸಿದ್ದೆಂದು ಇದುವರೆಗೂ ಯಾರೂ ನಿಖರವಾದ ಮಾಹಿತಿ ಕೊಡುವವರಿಲ್ಲ. ಸತಿಸಹಗಮನ ಪದ್ದತಿ ಜಾರಿಯಲ್ಲಿದ್ದ ಕಾಲದಲ್ಲಿ ಸತಿಸಹಗಮನವಾದ ಸತಿಪತಿಯರ ಸ್ಮಾರಕ ಸಂಕೇತವಾಗಿ ಈ ಬೃಂದಾವನವನ್ನು ನಿರ್ಮಿಸಲಾಗಿದೆ ಎಂದು ಕೆಲವರು ಹೇಳಿದರೆ ಇದು ಯಾರೋ ಮುನಿಗಳ ಬೃಂದಾವನ ಎಂದು ಕೆಲವರು ಹೇಳುವುದುಂಟು ಯಾವುದು ನಿಜ ಯಾವುದು ಸುಳ್ಳು ಎಂಬುದನ್ನ ಸಂಶೋಧನೆ ಮೂಲಕ ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ. ಈ ಬೃಂದಾವನದ ಬಗ್ಗೆ ಸಂಶೋಧನೆ ನಡೆಸಿ, ಜೀರ್ಣೋದ್ಧಾರ ಮಾಡಿ ಅದನ್ನು ಸಂರಕ್ಷಿಸುವ ಇಚ್ಚಾಶಕ್ತಿ ಉಳ್ಳವರು ಮುಂದೆ ಬಂದು ಬೃಂದಾವನದ ಸಂರಕ್ಷಣೆಯ ಹೊಣೆ ಹೊರಬಹುದಾಗಿದೆ. ಊರಿನ ಯುವಕರಾದ ಎ.ರಾಘವೇಂದ್ರ ಅವರು ಆ ಜವಾಬ್ದಾರಿಯನ್ನ ವಹಿಸಿಕೊಳ್ಳುವ ಮನಸ್ಸು ಮಾಡಿರುವುದು ಸಂತಸದ ಸಂಗತಿಯಾದರೂ ಅವರಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವವರ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಊರಿನ ಹಿರಿಯರು ಮತ್ತು ಮುಖಂಡರು ಎ. ರಾಘವೇಂದ್ರ ಅವರಿಗೆ ಸಹಕರಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.
ಪ್ರಸಿದ್ಧ ರಾಜಮನೆತನಗಳಾದ ಚೋಳರು, ಗಂಗರು, ನೊಳಂಬರು ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಊರು ಇದಾಗಿತ್ತೆಂಬುದಕ್ಕೆ ಇಲ್ಲಿ ಲಭಿಸಿರುವ ಶಾಸನಗಳು ಮತ್ತು ಅಲ್ಲಲ್ಲಿ ಕಾಣಸಿಗುವ ವೀರಗಲ್ಲುಗಳೆ ಸಾಕ್ಷಿ.

ಸರ್ವಧರ್ಮ ಸಮನ್ವಯ ಮತ್ತು ಸಹಬಾಳ್ವೆ ಈ ಊರಿನ ಪ್ರಮುಖ ವಿಶೇಷತೆಯಾಗಿದೆ. ಹಿಂದೂ ಸಮಾಜದ ಜೊತೆ ಅತ್ಯಂತ ಸ್ನೇಹ ಮತ್ತು ಪ್ರೀತಿಯಿಂದ ಕೂಡಿ ಸಹಬಾಳ್ವೆ ನಡೆಸುತ್ತಿರುವ ಮತ್ತೊಂದು ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯ. ಇಸ್ಲಾಂ ಮತದ ಎಲ್ಲ ಹಬ್ಬಗಳನ್ನು ಊರಿನ ಎಲ್ಲರ ಹಬ್ಬಗಳಂತೆ ಭಾವಿಸಿ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಬಾಬಯ್ಯನ ಹಬ್ಬ. ಆ ದಿನ ಹಿಂದೂ ಮುಸ್ಲಿಂ ಸ್ನೇಹಿತರೆಲ್ಲರೂ ಸೇರಿ ಹುಲಿವೇಶ ಕುಣಿತ ಸೇರಿದಂತೆ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನ ನಡೆಸಿಕೊಡುವುದು ಹಿಂದೂ ಮುಸ್ಲಿಂ ಭ್ರಾತೃತ್ವವನ್ನ ಸಾರಿ ಹೇಳುವಂತಿರುತ್ತದೆ. ಕಾರಣಾಂತರಗಳಿಂದ ಕೆಲ ವರ್ಷಗಳಿಂದ ಬಾಬಯ್ಯನ ಹಬ್ಬ ನಿಂತಿದೆ. ಸರ್ವಧರ್ಮ ಸಾಮರಸ್ಯದ ಸಂಕೇತವಾಗಿರುವ ಬಾಬಯ್ಯನ ಹಬ್ಬ ನಡೆಯುತ್ತಿದ್ದರೇನೇ ಚೆಂದ. ಮುಸಲ್ಮಾನ ಬಾಂಧವರು ಪ್ರಾರ್ಥನೆ ಸಲ್ಲಿಸಲು ಊರಿನ ಮಧ್ಯಭಾಗದಲ್ಲಿ ಚೆಂದದ ಮಸೀದಿ ಮತ್ತು ಊರಿನ ಆದಿ ಭಾಗದಲ್ಲಿ ವಿಶಾಲವಾದ ಈದ್ಗಾ ಮೈದಾನ ತಲೆಯೆತ್ತಿ ನಿಂತಿವೆ. ಯಾವುದೇ ಅಹಿತಕರ ಘಟನೆಗಳು ನಡೆಯಲು ಆಸ್ಪದ ಕೊಡದೆ ಹಿಂದೂ ಮುಸ್ಲಿಂ ಹಬ್ಬಗಳು ಎಲ್ಲರ ಹಬ್ಬಗಳಂತೆ ನಡೆದುಕೊಂಡು ಬರುತ್ತಿರುವುದು ಎಲ್ಲ ಧರ್ಮಗಳಿಗಿಂತಾ ಮಿಗಿಲಾದ ಧರ್ಮ ಮಾನವ ಧರ್ಮವೊಂದೇ ಎಂಬುದನ್ನ ಸಾರಿ ಹೇಳುವುದರ ಜೊತೆಗೆ ಶಾಂತಿಗೆ ಹಿಡಿದ ಕನ್ನಡಿಯಂತಿದೆ ಈ ಊರಿನ ವಾತಾವರಣ.

ವರದರಾಜಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ
ಶಿಥಿಲಗೊಂಡಿದ್ದ ಪುರಾಣಪ್ರಸಿದ್ಧ, ಭೃಗು ಪ್ರತಿಷ್ಠಿತ, ಮತ್ತು ಗಂಗರ ಕಾಲದ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯ ಕಳೆದ 30 ವರ್ಷಗಳ ಹಿಂದೆಯೇ ಜೀರ್ಣೋದ್ಧಾರ ಭಾಗ್ಯ ಪಡೆದಿದ್ದರೂ ಕಾರಣಾಂತರಗಳಿಂದ ಕೆಲಸ ಕುಂಟುತ್ತಾ ಸಾಗಿದೆ. ದೇವಾಲಯದ ಕಟ್ಟಡ ಪೂರ್ಣಗೊಂಡಿದ್ದು 111 ಅಡಿಗಳ ರಾಜಗೋಪುರ ಮತ್ತು ವಿಶಾಲವಾದ ಕಲ್ಯಾಣಿ ನಿರ್ಮಾಣ ಹಂತದಲ್ಲಿವೆ. ದೇವಾಲಯಕ್ಕೆ ಘನವಾದ ರಕ್ಷಣಾಗೋಡೆಯನ್ನೊಳಗೊಂಡಂತೆ ವಸಂತ ಮಂಟಪ, ಕಲ್ಯಾಣ ಮಂಟಪ, ಪಾಕಶಾಲೆ, ಯಾಗಶಾಲೆ ಮತ್ತು ಭೋಜನ ಶಾಲೆಗಳ ಕಟ್ಟಡಗಳು ನಿರ್ಮಾಣವಾಗಬೇಕಿವೆ. ಅಷ್ಟೇ ಅಲ್ಲದೆ ಈ ಕ್ಷೇತ್ರಕ್ಕೆ ಸ್ವಾಗತ ಕೋರುವ ಎರಡು ಸ್ವಾಗತ ಕಮಾನುಗಳು ಊರಿನ ಹೊರವಲಯದ ದಕ್ಷಿಣಕ್ಕಿರುವ ರಾಷ್ಟೀಯ ಹೆದ್ದಾರಿ 75ರ ಉತ್ತನೂರು ತಿರುವಿನಲ್ಲೊಂದು ಮತ್ತು ಊರಿನ ಉತ್ತರಕ್ಕಿರುವ ಶ್ರೀನಿವಾಸಪುರ ಮುಳಬಾಗಿಲು ರಸ್ತೆಯ ಉತ್ತನೂರು ಕ್ರಾಸ್ ಬಳಿ ಮತ್ತೊಂದನ್ನು ನಿರ್ಮಿಸುವ ಅಗತ್ಯವಿದೆ. ಈ ಕುರಿತಾಗಿ ಸರ್ಕಾರ ಮತ್ತು ಸ್ಥಳೀಯ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಸರ್ಕಾರವಷ್ಟೇ ಅಲ್ಲದೆ ಭಕ್ತಾದಿಗಳು ಮತ್ತು ದಾನಕರ್ತರು ತನು-ಮನ-ಧನ ಸಹಾಯ ಮಾಡಬಹುದಾಗಿದೆ. ಬಹಳಷ್ಟು ಅಪನಿಂದೆಗಳನ್ನ ಎದುರಿಸುತ್ತಲೇ ದೇವಸ್ಥಾನದ ಟ್ರಸ್ಟ್ ನಿರಂತರವಾಗಿ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಮೆಚ್ಚುವಂತದ್ದು. ಆದರೂ ಕಾರಣಾಂತರಗಳಿಂದ ವಿಳಂಭವಾಗುತ್ತಿರುವುದಂತೂ ನಿಜ. ಮತ್ತಷ್ಟು ವಿಳಂಭವಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಮತ್ತು ಯಾವುದೇ ಕಾರಣಕ್ಕೂ ಇನ್ನು ವಿಳಂಭವಾಗಕೂಡದು ಎಂದು ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲ ಸದಸ್ಯರಿಗೆ ಹೇಳಬಯಸುತ್ತಿದ್ದೇನೆ. ಇನ್ನೊಂದು ವರ್ಷದ ಒಳಗಾಗಿ ರಾಜಗೋಪುರ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಬಾಕಿ ಕಟ್ಟಡಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುತ್ತೀರೆಂಬ ಮಹದಾಸೆಯಿದೆ. ಊರಿನ ಜನರೂ ಕೂಡ ಮೂರು ಹೊತ್ತೂ ದೇವಸ್ಥಾನದ ಟ್ರಸ್ಟ್ ನವರನ್ನು ದೂರುವುದು ಮತ್ತು ಅವರನ್ನು ನಿಂದಿಸುವುದನ್ನು ಬಿಟ್ಟು ಇದು ನಮ್ಮದೇ ದೇವಸ್ಥಾನ ನಮಗೂ ಹಕ್ಕಿದೆ ಎಂಬ ಭಾವನೆಯಿಂದ ಟ್ರಸ್ಟಿನ ಸದಸ್ಯರು ಮತ್ತು ಅಧ್ಯಕ್ಷರ ಜೊತೆ ಸಮಾಲೋಚನೆ ನಡೆಸಿ ಅವರಿಗೆ ಹೆಗಲಿಗೆ ಹೆಗಲಾಗಿ ನಿಂತು ಕಾಯಾ ವಾಚಾ ಮನಸಾ ಮತ್ತು ತನು ಮನ ಧನ ಎಲ್ಲ ರೀತಿಯಲ್ಲೂ ಈ ಕೈಂಕರ್ಯದಲ್ಲಿ ಕೈ ಜೋಡಿಸಿ ಹಗಲು ರಾತ್ರಿ ಕೆಲಸ ಮಾಡಿ 2021 ರೊಳಗಾಗಿ ದೇವಾಲಯವನ್ನ ಪೂರ್ಣಗೊಳಿಸಿ ನಾಡಿನ ಜನತೆಗೆ ಕೊಡುಗೆಯಾಗಿ ಕೊಡುತ್ತೀರೆಂಬ ಭರವಸೆಯಿದೆ. ಊರಿನ ಜನತೆಯ ಮತ್ತು ಈ ದೇವಳದ ಅಪಾರ ಭಕ್ತಾದಿಗಳ ಭಾವನೆಗಳಿಗೆ ಸಂಬಂಧಿಸಿದ ವಿಚಾರವಾಗಿರುವ ಕಾರಣ ಇನ್ನು ತಡ ಮಾಡದೇ ದೇವಕಾರ್ಯ ಮುಗಿಸಿ ಊರಿನ ಜನತೆಯ ಮತ್ತು ಭಕ್ತಾದಿಗಳ ಅಪಾರ ಪ್ರೀತಿ, ಅಭಿಮಾನ ಮತ್ತು ಆಶೀರ್ವಾದಗಳನ್ನ ಗಳಿಸಬೇಕಾಗಿ ಊರಿನ ಹಿರಿಯ ಮುಖಂಡರಲ್ಲಿ ಕೋರುತ್ತಿದ್ದೇನೆ.

ಚೋಳರ ಕಾಲದ ಸೋಮೇಶ್ವರ (ಉತ್ತಮೇಶ್ವರ) ದೇವಾಲಯವೂ ಪ್ರಸ್ತುತ ಜೀರ್ಣೋದ್ಧಾರ ಸ್ಥಿತಿಯಲ್ಲಿದೆ. ಈ ದೇವಾಲಯದ ಕೆಲಸಗಳೂ ಆದಷ್ಟು ಬೇಗ ಪೂರ್ಣಗೊಳ್ಳುತ್ತದೆಂಬ ವಿಶ್ವಾಸವಿದೆ. ಅಲ್ಲದೇ ತಾಯಿ ಚೌಡೇಶ್ವರಿ ದೇವಾಲಯದ ಜೀರ್ಣೋದ್ಧಾರದ ಮಾತುಗಳೂ ಇತ್ತೀಚೆಗೆ ಕೇಳಿಬರುತ್ತಿವೆ. ಒಂದುವೇಳೆ ಜೀರ್ಣೋದ್ಧಾರ ಮಾಡುವುದೇ ಆದಲ್ಲಿ ಅದು ಯಾರೇ ಮಾಡಲಿ ಮೂಲ ವಿಗ್ರಹವನ್ನ ಯಾವುದೇ ಕಾರಣಕ್ಕೂ ಕದಲಿಸದೇ ಕೆಲಸ ಶುರು ಮಾಡಿ. ಕಾರಣವಿಷ್ಟೇ ಉತ್ತನೂರು ಚೌಡೇಶ್ವರಿ ವಿಗ್ರಹ ಬಹಳ ಅಪರೂಪದ ವಿಗ್ರಹವಾಗಿರುವುದರಿಂದ ಅದನ್ನೇನಾದರೂ ಕದಲಿಸುವ ಕೆಲಸಕ್ಕೆ ಕೈ ಹಾಕಿದ್ದೇ ಆದಲ್ಲಿ ವಿಗ್ರಹದ ಮೂಲ ಸ್ವರೂಪಕ್ಕೆ ಧಕ್ಕೆಯಾಗಬಹುದು. ಮತ್ತು ಆ ವಿಗ್ರಹ ಒಂದು ಮಹೋನ್ನತ ಶ್ರೇಷ್ಠ ಘಳಿಗೆಯಲ್ಲಿ ಮಹನೀಯರು ಪ್ರತಿಷ್ಠಾಪಿಸಿರುವ ಕಾರಣ ಆ ಮಹತ್ವ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆಯಾದ್ದರಿಂದ ಮೂರ್ತಿಯನ್ನು ಮುಟ್ಟುವುದು ಬೇಡ ಮತ್ತು ಕೆಲಸ ಶುರು ಮಾಡಿದ್ದೇ ಆದಲ್ಲಿ ಯಾವುದೇ ಕಾರಣಕ್ಕೂ ವಿಳಂಭ ಮಾಡೆದೇ, ಊರಿನ ಎಲ್ಲರ ಸಹಕಾರದಿಂದ ತ್ವರಿತಗತಿಯಲ್ಲಿ ಕೆಲಸ ಮಾಡಿ ಕಟ್ಟಡ ಪೂರ್ಣಗೊಳಿಸಬೇಕಾಗಿ ಕೋರುತ್ತಿದ್ದೇನೆ. ತ್ವರಿತಗತಿಯಲ್ಲಿ ಕೆಲಸ ಮುಗಿಸುವ ಇಚ್ಛೆ ಇಲ್ಲದಿದ್ದರೆ ಅದರ ತಂಟೆಗೆ ಹೋಗುವುದು ಬೇಡ. ಈಗಿರುವ ದೇವಸ್ಥಾನವೇ ಚಿಕ್ಕದಾಗಿದ್ದರೂ ವಿಶೇಷವಾಗಿದೆಯಾದ್ದರಿಂದ ಊರಿನ ಜನತೆಗೆ ಅದೇ ಸಾಕು.
(ಊರಿನ ರಾಜಕೀಯ ಸ್ಥಿತಿಗತಿಗಳ ಕುರಿತು ಬರೆಯಲು ಮನಸ್ಸು ಒಪ್ಪದಿದ್ದರೂ ಜಾತಿ ಪ್ರೇಮದ ರಾಜಕೀಯ ಅಮಲು ಎಲ್ಲರ ತಲೆಗೇರಿರುವ ಕಾರಣ ಊರಿನಲ್ಲಿ ಸಮನ್ವಯ ಮತ್ತು ಸಹಬಾಳ್ವೆಗೆ ಧಕ್ಕೆ ತರಬಹುದಾದ ಎಲ್ಲ ಸೂಚನೆಗಳೂ ಗೋಚರಿಸುತ್ತಿರುವ ಕಾರಣ ಬರೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ ಬರೆಯುತ್ತಿದ್ದೇನೆ. ಊರಿನ ಎಲ್ಲ ಮುಖಂಡರೂ ನನ್ನ ಮಾತನ್ನ ಕಿವಿಮಾತು ಅಂತಾದ್ರೂ ಭಾವಿಸಿಕೊಳ್ಳಿ ಅಥವಾ ಸಲಹೆ ಅಂತಾನಾದ್ರೂ ಸ್ವೀಕರಿಸಿ, ಇವನ ಮಾತು ನಾವೇನ್ ಕೇಳೋದು ಇವನ್ಯಾವೋನ್ ನಮಗೆ ಹೇಳೋಕೆ ಅನ್ನುವ ಅಸಡ್ಡೆ ಮತ್ತು ತಾತ್ಸಾರ ಮನೋಭಾವವನ್ನ ಕಿತ್ತೆಸೆದು ಕಿವಿಗೊಟ್ಟು ನನ್ನ ಮಾತನ್ನ ಕೇಳಿಸಿಕೊಳ್ಳಿ. ಮಾತು ಆರಂಭಿಸುವ ಮುನ್ನ ಒಂದು ವಿಚಾರ ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ ನಾನು ಯಾವುದೇ ಪಕ್ಷದ ಪರವಾಗಲೀ ಯಾವುದೇ ಮುಖಂಡನ ಪರವಾಗಲೀ ಇಲ್ಲ ನಾನಿರುವುದು ಊರಿನ ಸಕಲ ಪ್ರಜೆಗಳ ಪರವಾಗಿ. ಊರಿನ ಅಭಿವೃದ್ಧಿಯ ಪರವಾಗಿ. ಯಾವ ಮುಖಂಡರಿಂದ ನನಗೇನೂ ಆಗಬೇಕಾಗಿಯೂ ಇಲ್ಲ ನಾನು ಯಾರ ಬಳಿಯೂ ಕೈ ಚಾಚಿ ನಿಲ್ಲುವವನೂ ಅಲ್ಲ. ನನ್ನ ಕಷ್ಟಕಾಲದಲ್ಲಿ ಸಹಾಯಕ್ಕೆ ನೀವುಗಳು ನಿಲ್ಲುತ್ತೀರೆಂಬ ಕನಿಷ್ಠ ಮಟ್ಟದ ಭರವಸೆಯೂ ನನ್ನಲ್ಲಿ ಉಳಿದಿಲ್ಲ ಕಾರಣವಿಷ್ಟೇ ನೀವೆಲ್ಲಾ ನಿಮ್ಮ ಜಾತಿಗಳ ಉದ್ಧಾರಕ್ಕಾಗಿಯೇ ಹುಟ್ಟಿದ ಜಾತಿ ನಾಯಕರು ಹಾಗಾಗಿ ಮತ್ತೊಬ್ಬರ ಬೆಳವಣಿಗೆ ಸಹಿಸುವವರು ನೀವಲ್ಲ ಎಂಬ ಸತ್ಯದ ಅರಿವೂ ನನಗಿದೆ. Basically I don't care political dramatists, I am least bothered about dirty caste based politics. ಊರಿನ ವಿಚಾರವಾಗಿ ಮಾತನಾಡಲು ಜಾತಿ ಕೇಂದ್ರಿತ ರಾಜಕಾರಣಿಗಳಾಗಿ ನಿಮಗೇ ಇಷ್ಟು ಅಧಿಕಾರ ಹಕ್ಕು ಇರುವಾಗ ಜಾತಿಗಳ ಎಲ್ಲೆಗಳನ್ನು ಮೀರಿ ನಿಂತು ನನ್ನ ಹುಟ್ಟೂರನ್ನು ಪ್ರೀತಿಸುವವನು ನಾನು ನನಗೆಷ್ಟು ಇರಬೇಕು..? ಊರಿನ ವಿಚಾರವಾಗಿ ನಿಮಗೆಷ್ಟು ಒಲವಿದೆಯೋ ಅದರ ಸಾವಿರ ಪಟ್ಟು ಒಲವು ನನಗಿದೆ. ನಾನು ಹುಟ್ಟಿದ ಊರು ಸದಾಕಾಲ ಸುಭಿಕ್ಷವಾಗಿರಬೇಕು ಎಂಬುದಷ್ಟೇ ನನ್ನ ವಾದ, ಉದ್ದೇಶ ನನ್ನ ಆಶಯ ಎಲ್ಲವೂ. ಕೇವಲ ಯಾವುದೋ ಒಂದು ಜಾತಿಯವರು ಮಾತ್ರ ಸುಖವಾಗಿರುವುದಲ್ಲ. ಅಂತಹ ದರಿದ್ರ ನಾಯಕತ್ವಕ್ಕೆ ನನ್ನ ಧಿಕ್ಕಾರ ಯಾವತ್ತಿಗೂ ಇರುತ್ತದೆ. ಜಾತಿ ಎಂಬುದು ನನ್ನ ಕಾಲು ಕೆಳಗಿನ ಕಸಕ್ಕೆ ಸಮಾನ. ಮನುಷ್ಯತ್ವ ಮತ್ತು ಕರ್ತವ್ಯ ನಿಷ್ಠೆಯಿರುವ ಯಾರೇ ಆಗಲಿ ಅವನನ್ನ ನನ್ನ ಮನೆಯ ಸದಸ್ಯನಿಗಿಂತ ಹೆಚ್ಚಿಗೆ ಗೌರವಿಸುವವನು ನಾನು. ಅಸಲಿಗೆ ನನ್ನ ಜಾತಿಗೂ ನನಗೂ ಸಂಬಂಧವೇ ಇಲ್ಲವೆಂಬಂತೆ ಬದುಕುತ್ತಿರುವವನು ನಾನು. ನನ್ನನ್ನ ಎಲ್ಲ ಜಾತಿಗಳ ಜನ ಪ್ರೀತಿಸುತ್ತಾರೆ ಅಭಿಮಾನಿಸುತ್ತಾರೆ. ನನ್ನ ಸ್ನೇಹಿತರಂತೂ ಎಲ್ಲ ಜಾತಿಗಳವರೂ ಇದ್ದಾರೆ ಎಲ್ಲರೂ ನನಗೆ ಅತ್ಯಾಪ್ತರೇ ನನ್ನ ಕಷ್ಟಕಾಲಗಳಲ್ಲಿ ಅವರೇ ನನ್ನ ರಕ್ಷಣೆಗೆ ನಿಲ್ಲುತ್ತಾರೆ. ಇದುವರೆಗೂ ನನ್ನ ಜಾತಿ ಯಾವುದೆಂದು ಯಾರೂ ನನ್ನನ್ನ ಕೇಳಲೇ ಇಲ್ಲ. ನಾನೂ ಯಾರನ್ನೂ ಜಾತಿಯ ಕಾರಣಕ್ಕಾಗಿ ಪ್ರೀತಿಸುವುದೂ ಇಲ್ಲ. ಎಲ್ಲರೂ ನನ್ನನ್ನ ಇಷ್ಟ ಪಡುವುದು ನನ್ನಲ್ಲಿನ ವ್ಯಕ್ತಿತ್ವವನ್ನ, ನನ್ನೊಳಗಿನ ಮನುಷ್ಯತ್ವವನ್ನ ನನ್ನೊಳಗಿನ ಮನಸ್ಸನ್ನ ಅಷ್ಟೇ. ಯಾವ ಊರಿಗೆ ಹೋದರೂ ಯಾರ ಮನೆಗೆ ಹೋದರೂ ಅವರೆಲ್ಲರೂ ಅವರ ಮನೆಯ ಮಗನಂತೆ ಸತ್ಕರಿಸುತ್ತಾರೆ ನನಗೂ ಅಷ್ಟೇ ನನ್ನ ಸ್ನೇಹಿತರೇ ನನ್ನ ಪ್ರಪಂಚ. ಇಷ್ಟು ಸಾಲದೇ ರಾಜನಂತೆ ಬಾಳಲು..?!

ನನ್ನ ವಿಚಾರ ಇರಲಿ ಬಿಡಿ ನನ್ನ ಬಗ್ಗೆ ನಾನೇ ಹೇಳಿಕೊಳ್ಳುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಒಂದು ಸತ್ಯ ನುಡಿಯುತ್ತಿದ್ದೇನೆ ಕೇಳಿಸಿಕೊಳ್ಳಿ. ಕೇವಲ ನಿಮ್ಮ ರಾಜಕೀಯ ಮೇಲಾಟದ ಕಾರಣಕ್ಕಾಗಿ ಊರಿನ ಯಾವುದೇ ದೇವಸ್ಥಾನವನ್ನ ಕದಲಿಸುವ ಗೋಜಿಗೆ ಹೋಗಬೇಡಿ. ಅದು ನಿಮಗೇ ತಿರುಗುಬಾಣವಾಗಿ ಪರಿಣಮಿಸುತ್ತದೆ ಎಚ್ಚರಿಕೆ. ಆ ಪಕ್ಷದವರು ಒಂದು ದೇವಸ್ಥಾನ ಕಟ್ಟಿದರು ನಮ್ಮ ಪಕ್ಷದವರು ಇನ್ನೊಂದು ದೇವಸ್ಥಾನ ಕಟ್ಟೋಣ ಅದರ ಮೂಲಕ ರಾಜಕೀಯ ಮಾಡೋಣ ಊರಿನ ಜನರ ಅಭಿಮಾನ ಗಳಿಸೋಣ ಎಂಬ ರಾಜಕೀಯದ ಹುಚ್ಚಾಟಕ್ಕೆ ಯಾವ ಪಕ್ಷದವರೂ ಬೀಳಬೇಡಿ ಒಂದು ವೇಳೆ ಅಂತಹ ಹುಚ್ಚಾಟಕ್ಕೆ ಬೀಳುವುದೇ ಆದಲ್ಲಿ ಬಲಿಯಾಗುವುದು ಮಾತ್ರ ನೀವೇ ಮರೆಯಬೇಡಿ. ದೇವಸ್ಥಾನಗಳು ರಾಜಕೀಯ ಪಕ್ಷಗಳ ಸೊತ್ತಾಗಲೀ ಅಥವಾ ಯಾವುದೋ ಮುಖಂಡರ ಸ್ವಂತ ಆಸ್ತಿಯಾಗಲೀ ಅಥವಾ ಬಹುಮುಖ್ಯವಾಗಿ ಯಾವುದೋ ಒಂದು ಜಾತಿಗೆ ಸೀಮಿತವಾಗಿರುವ ಪ್ರಾಪರ್ಟಿಯಾಗಲೀ ಅಲ್ಲವೇ ಅಲ್ಲ..!! ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ರಾಜಕಾರಣದಲ್ಲಿ ದೇವಸ್ಥಾನಗಳ ರಾಜಕಾರಣ ಎಂದೋ ಮುಗಿದ ಅಧ್ಯಾಯ. ಅಂತಹ Temple sentiment politics ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಕಾಲ ಬದಲಾಗಿದೆ ಜನ ನಿಮಗಿಂತಾ ಬುದ್ದಿವಂತರಾಗಿದ್ದಾರೆ. ಜನಪರ ಕಾರ್ಯಗಳನ್ನಷ್ಟೇ ಬೆಂಬಲಿಸುವ ಪ್ರಜ್ಞಾವಂತರು ಹೆಚ್ಚು ಸಂಖ್ಯೆಯಲ್ಲಿ ಹುಟ್ಟಿಕೊಂಡಿದ್ದಾರೆ. ಇವತ್ತು ನಿಮ್ಮ ಜಾತಿಯ ಬೆಂಬಲದಿಂದ ಗೆದ್ದವರು ಜನಪರ ಕಾರ್ಯಗಳನ್ನ ಮಾಡದೇ ಇನ್ನೇನೋ ಮಾಡಿಕೊಂಡು ಕಾಲ ಕಳೆದಿದ್ದೇ ಆದಲ್ಲಿ ಅದೇ ನಿಮ್ಮ ಜಾತಿಯ ಜನರೇ ನಿಮ್ಮ ಕೈಗೆ ಚೊಂಬು ಕೊಡುತ್ತಾರೆ ಮೈ ಮರೆಯಬೇಡಿ. ದೇವಸ್ಥಾನಗಳ ಜೊತೆಜೊತೆಗೆ ಊರಿನಲ್ಲಿ ಹುಟ್ಟಿದ ಪ್ರತಿಯೊಬ್ಬರ ಭಾವನೆಗಳು ಬೆಸೆದುಕೊಂಡಿರುತ್ತವೆ ಮತ್ತು ನೀವುಗಳು ಊರಿನ ಜನರ ಆ ಭಾವನೆಗಳನ್ನ ಗಾಯಗೊಳಿಸಿದ್ದೇ ಆದಲ್ಲಿ ನಿಮ್ಮ ಬದುಕುಗಳೂ ಮುಗ್ಗರಿಸಿ ನೆಲಕ್ಕೆ ಬೀಳುತ್ತವೆ. ಮತ್ತೆ ಎದ್ದು ನಿಲ್ಲಲು ನೀವುಗಳು ಬರೀ ಕಣ್ಣೀರಲ್ಲ ರಕ್ತಕಣ್ಣೀರೇ ಹರಿಸಬೇಕಾಗುತ್ತದೆ ಇದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ ನೆನಪಿರಲಿ. ರಾಜಕಾರಣದಲ್ಲಿ ಸೋಲು ಗೆಲುವುಗಳು ಸರ್ವೇಸಾಮಾನ್ಯ ಮತ್ತು ಯಾವುದೂ ಶಾಶ್ವತವಲ್ಲ ಎಂಬ ಸತ್ಯ ಕೂಡ ಎಲ್ಲರಿಗೂ ತಿಳಿದಿರಲಿ. "ಬೆಳಿಗ್ಗೆ ಜನಗಳ ಜಯಕಾರಗಳೊಂದಿಗೆ ಕೇಕೆ ಹಾಕುತ್ತಾ ನಗುತ್ತಿದ್ದವನು ಮಧ್ಯಾಹ್ನಕ್ಕೆಲ್ಲಾ ಒಂಟಿಯಾಗಿ ಬಿಕ್ಕಿ ಬಿಕ್ಕಿ ಅಳುತ್ತಾನೆ. ಎಲ್ಲರೂ ನನ್ನ ಕೈ ಬಿಟ್ಟರೆಂದು ಬೆಳಿಗ್ಗೆಯಿಂದ ಗೋಳಾಡುತ್ತಿದ್ದವನು ಸಂಜೆಯ ಹೊತ್ತಿಗೆ ಅದೇ ಜನಗಳ ಜಯಕಾರದೊಂದಿಗೆ ನಗಲಾರಂಭಿಸುತ್ತಾನೆ. ಇಷ್ಟೇ ರಾಜಕಾರಣದ ಬದುಕು ನೆನಪಿಟ್ಟುಕೊಳ್ಳಿ. ಕೇವಲ ರಾಜಕಾರಣವಷ್ಟೇ ಅಲ್ಲ ಮಾನವನ ಬದುಕೇ ಇಷ್ಟು..!! ಇಲ್ಲಿ ಯಾರೂ ದೊಡ್ಡವರಲ್ಲ ಯಾರೂ ಚಿಕ್ಕವರಲ್ಲ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರೂ ಸಮಯದ ಗೊಂಬೆಗಳು. ಸಮಯ ಆಡಿಸಿದಂತೆ ನಾವೆಲ್ಲರೂ ಆಡಬೇಕು ಅಷ್ಟೇ ಎಚ್ಚರಿಕೆಯಿರಲಿ."
ಸೋತವರು ನಮಗ್ಯಾರೂ ಮತ ಹಾಕಲಿಲ್ಲ, ನಂಬಿದವರೇ ಮೋಸ ಮಾಡಿಬಿಟ್ಟರು ಎಂದು ಮತ ಹಾಕಿದವರನ್ನೂ ಅನುಮಾನಿಸುವುದು, ಎಲ್ಲರ ಮೇಲೂ ಕೋಪಿಸಿಕೊಂಡು ಊರಿಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ದೂರ ಸರಿಯುವುದು ಬೇಡ. ನಿಜ ಹೇಳಬೇಕೆಂದರೆ ನೀವು ಈ ಮೊದಲಿಗಿಂತಲೂ ಹೆಚ್ಚಾಗಿ ಊರಿನ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಭಾಗಿಗಳಾಗಬೇಕಾಗಿರುವುದೇ ಈ ಸಮಯದಲ್ಲಿ. ನಿಮ್ಮ ಮನೆಗಳಲ್ಲಿ ಸೇರಿಕೊಂಡು ಯಾರೋ ಮೂರ್ನಾಲ್ಕು ಜನ ನಿಮ್ಮ ಭಜನೆಗೆ ತಾಳ ಹಾಕುವವರನ್ನ ಸುತ್ತಲೂ ಕೂರಿಸಿಕೊಂಡು ವ್ಯರ್ಥವಾಗಿ ಕಾಲ ಕಳೆಯುವ ಬದಲು ಊರಿನ ಜನಗಳ ಜೊತೆ ಬೆರೆಯಿರಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅವರ ಪ್ರೀತಿಯನ್ನ ಸಂಪಾದಿಸಿಕೊಳ್ಳಿ. ಜನ ಮತ್ತೆ ನಿಮ್ಮ ಕೈ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಗೆದ್ದವರು ಇಡೀ ಊರೇ ನಮ್ಮದು ನಮ್ಮನ್ನು ಸೋಲಿಸೋ ತಾಕತ್ತು ಯಾರಿಗಿದೆ..? ನಮ್ಮ ಜಾತಿ, ನಮ್ಮ ಗುಂಪು ಎಂದರೆ ತಮಾಷೇನಾ..? ನಮ್ಮನ್ನ ಅಲುಗಾಡಿಸೋ ತಾಕತ್ತು ಯಾವೋನಿಗಿದೆ ಎಂದು ತೊಡೆ ತಟ್ಟುವಂಥಾ ಅಸಹ್ಯದ ದುರ್ವರ್ತನೆ ಬಿಟ್ಟು ನಾವೇ ಅಂತಿಮ ಎಂದು ಬೀಗುವುದನ್ನ ಬಿಟ್ಟು, ದುರಹಂಕಾರದಿಂದ ಮೆರೆಯುವುದನ್ನು ಬಿಟ್ಟು ಜನಪರ ಕಾರ್ಯಗಳ ಕಡೆ ಗಮನ ಕೊಡಿ. ಇವತ್ತು ಯಾವ ಜನರು ನಿಮಗೆ ಕುರ್ಚಿ ಹಾಕಿ ಕೂರಿಸಿದ್ದಾರೋ ನಾಳೆ ಬೆಳಗಾಗುವುದರೊಳಗಾಗಿ ಅದೇ ಜನ ಕುರ್ಚಿಯಿಂದ ನಿಮ್ಮನ್ನ ಕೆಳಗಡೆ ತಳ್ಳಿ ಮತ್ತೊಬ್ಬರನ್ನ ಕೂರಿಸಿ ಕೈ ತೊಳೆದುಕೊಳ್ಳುತ್ತಾರೆ ಇದು ಸತ್ಯ ಮನಸ್ಸಿನಲ್ಲಿರಲಿ. ಮುಂದೊಂದು ದಿನ ಯಾವನೋ ಲೆಕ್ಕಕ್ಕಿಲ್ಲದ ಜಾತಿಯವನೊಬ್ಬ ಪ್ರಬಲ ಜಾತಿಯವರಾದ ನಿಮ್ಮನ್ನೆಲ್ಲಾ ಸಂಪೂರ್ಣವಾಗಿ ನೆಲಸಮ ಮಾಡಿ ಪಂಚಾಯ್ತಿ ಚುಕ್ಕಾಣಿ ಹಿಡಿಯುತ್ತಾನೆ ಈ ಮಾತು ಒಂದು ಕಡೆ ಬರೆದಿಟ್ಟುಕೊಳ್ಳಿ. ಬರೀ ನಾನು ನನ್ನ ಮನೆ ನನ್ನ ಜಾತಿ ಎಂದು ಜಪ ಮಾಡುತ್ತಾ ಸ್ವಾರ್ಥಿಗಳಾಗಬೇಡಿ ಸ್ವಾರ್ಥಿಗಳಾಗುತ್ತಿದ್ದಂತೆ ನಿಮಗೇ ಅರಿಯದ ಹಾಗೆ ನಿಮ್ಮಲ್ಲಿ ಅಧರ್ಮ ತಾಂಡವವಾಡಲು ಶುರುವಾಗುತ್ತದೆ. ಆಮೇಲೆ ನಿಮ್ಮನ್ನು ರಕ್ಷಿಸಲು ಆ ಭಗವಂತನಿಂದಲೂ ಸಾಧ್ಯವಿಲ್ಲ. 'ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಅಭ್ಯುತ್ಥಾನಾಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ! ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕøತಾಂ! ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ!! ಭಗವದ್ಗೀತೆಯ ಈ ಶ್ಲೋಕವನ್ನು ಯಾರೂ ಮರೆಯಬಾರದು. ನಾನೇ ಎಂದು ಮೆರೆದವರಾರೂ ಹೆಚ್ಚು ಕಾಲ ಬಾಳಿರುವ ಉದಾಹರಣೆ ಇತಿಹಾಸದಲ್ಲಿ ಇಲ್ಲವೇ ಇಲ್ಲ ಎಂಬ ಕಟು ಸತ್ಯ ಸದಾ ನಿಮ್ಮ ಮನದಲ್ಲಿರಲಿ. ಅಂತಿಮವಾಗಿ ನಿಮ್ಮನ್ನ ಕಾಯುವುದು ಕಾಪಾಡುವುದು ಕೇವಲ ಜನಪರ ಕಾರ್ಯಗಳಷ್ಟೇ ಹೊರತು ನಿಮ್ಮ ಮನೆ ಮತ್ತು ನಿಮ್ಮ ಜಾತಿಗಳ ಉದ್ಧಾರ ಅಲ್ಲವೇ ಅಲ್ಲ mind it..!! ಗ್ರಾಮರಾಜಕಾರಣಕ್ಕೆ ಜಾತಿಯೊಂದೇ ತಳಿರು ತೋರಣವಾಗಿ ಪರಿಣಮಿಸಿರುವುದು ಮತ್ತು ಗೆಲ್ಲವವನು ಹಣದ ಹೊಳೆಯೇ ಹರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಸರ್ವನಾಶಕ್ಕೆ ಮುನ್ಸೂಚನೆ. ಗೆದ್ದವನು ನಾನೇ ಎಂದು ಮೀಸೆ ತಿರುವಿ ತೊಡೆ ತಟ್ಟುವುದು, ಸೋತವನು ಸೇಡು ತೀರಿಸಿಕೊಳ್ಳಲೆಂದೇ ಬದುಕುವುದು ಇವೆಲ್ಲವೂ ಮಾನವ ಬದುಕಿನ ಪರಮ ಅಸಹ್ಯಗಳು. ಈ ಗೆದ್ದವರು ಮತ್ತು ಸೋತವರ ನಡುವೆ ಸಿಲುಕಿ ಕೊನೆಗೆ ಬಿಕಾರಿಯಾಗುವವನು ಬಡಪಾಯಿ ಮತದಾರ ಮಾತ್ರ. ನನ್ನ ನೋವು ನನ್ನ ವ್ಯಥೆ ಇರುವುದು ಆ ಬಡಪಾಯಿ ಮತದಾರನ ಕುರಿತಾಗಿಯೇ. ಮನುಷ್ಯರು ಪ್ರತೀ ಮನೆಯಲ್ಲಿ ಹುಟ್ಟುತ್ತಾರೆ ಅದರಲ್ಲೇನೂ ವಿಶೇಷತೆಯಿಲ್ಲ ಆದರೆ ಮಾನವೀಯತೆ ಎಷ್ಟು ಜನ ಮನುಷ್ಯರಲ್ಲಿ ಹುಟ್ಟಿ ಬೆಳೆಯುತ್ತದೆ ನೀವೇ ಉತ್ತರಿಸಿ..? ಇವತ್ತಿನ ಸ್ವಾರ್ಥ ರಾಜಕಾರಣದಲ್ಲಿ ಎಷ್ಟು ಜನರಲ್ಲಿ ಆ ಮಾನವೀಯತೆ ಇದೆಯೆಂದು ಯಾರಾದರೂ ಹೇಳಬಲ್ಲಿರಾ..? ಖಂಡಿತಾ ಸಾಧ್ಯವಿಲ್ಲ. ಮಾನವೀಯತೆಯ ಕೊರತೆ ಎಲ್ಲೆಲ್ಲೂ ಇರುವುದು ನಿಜ. ಅದು ಹುಟ್ಟಿ ಬೆಳೆಯಬೇಕಾದುದೂ ನಮ್ಮಲ್ಲೇ ಎಂಬುದೂ ನಿಜ. ಈ ನಿಟ್ಟಿನಲ್ಲಿ ಒಮ್ಮೆ ಯೋಚಿಸಿ. ಡಿವಿಜಿ ಯವರ ಕಗ್ಗ ನೆನಪಾಗುತ್ತಿದೆ.

"ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ..!
ಸುರೆ ಕುಡಿದವರು ಕೆಲವರು ಹುಟ್ಟು ಹಾಕುವರು..!!
ಬಿರುಗಾಳಿ ಬೀಸುವುದು. ಜನವೆದ್ದು ಕುಣಿಯುವುದು..!
ಉರುಳದಿಹುದಚ್ಚರಿಯೋ ಮಂಕುತಿಮ್ಮ..!!"
ಎಮ್ಮೆ ಚರ್ಮದ ಮನಸ್ಥಿತಿಗಳಿಗೆ ಇಂಥಾ ಮಹನೀಯರ ಸಾಲುಗಳು ಖಂಡಿತಾ ಅರ್ಥವಾಗುವುದಿಲ್ಲ ಬಿಟ್ಟುಬಿಡಿ.
ಕೊನೆಗೆ ಒಂದೇ ಒಂದು ಮಾತು ಹೇಳಿ ಮುಗಿಸಿಬಿಡುತ್ತೇನೆ ''The sins of the parents visit the children' ಇಂಗ್ಲೀಷಿನಲ್ಲಿ ಹೀಗೊಂದು ಮಾತಿದೆ. 'ತಂದೆ ತಾಯಿಗಳು ಮಾಡಿದ ಪಾಪ ಮಕ್ಕಳ ತಲೆಗೆ' ಎಂಬುದು ಈ ಮಾತಿನ ಅರ್ಥ. ತಂದೆತಾಯಿಯರ ಪಾಪಗಳಷ್ಟೇ ಅಲ್ಲ ಅವರು ಮಾಡಿದಂತಹ ಪುಣ್ಯಗಳ ಫಲವೂ ಮಕ್ಕಳು ಅನುಭವಿಸುತ್ತಾರೆಂಬ ಮಾತೂ ಆ ಮಾತಿನಷ್ಟೇ ಚಾಲ್ತಿಯಲ್ಲಿದೆ. ಇದು ಕರ್ಮ ಸಿದ್ಧಾಂತ ಇದರಿಂದ ತಪ್ಪಿಸಿಕೊಳ್ಳಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಹಾಗಾಗಿ ಪಾಪದ ಕೆಲಸ ಮಾಡಬೇಡಿ ಅದರ ಕೆಟ್ಟ ಫಲ ನೀವೂ ನಿಮ್ಮ ಜೊತೆ ನಿಮ್ಮ ಮಕ್ಕಳೂ ತಪ್ಪದೇ ಅನುಭವಿಸಬೆಕಾಗುತ್ತದೆ. ಪುಣ್ಯದ ಕೆಲಸಗಳನ್ನಷ್ಟೇ ಮಾಡಿ ಪುಣ್ಯ ಕಟ್ಟಿಕೊಳ್ಳಿ ನಿಮ್ಮ ಪುಣ್ಯ ನಿಮ್ಮ ಮಕ್ಕಳಿಗೂ ದಾಟಿಸಿ ಎಂದು ಹೇಳಲಿಚ್ಚಿಸುತ್ತಿದ್ದೇನೆ. ಬಹುಮುಖ್ಯವಾಗಿ ರಾಜಕಾರಣಿಗಳು ಈ ಮಾತನ್ನ ಸದಾ ನೆನಪಿನಲ್ಲಿಟ್ಟುಕೊಳ್ಳಿ. ಬರೀ ನಮ್ಮ ಜಾತಿ ನಮ್ಮ ಜಾತಿ ಎಂದು ನಿತ್ಯವೂ ಸಾಯಬೇಡಿ ಎಲ್ಲರೂ ನಮ್ಮವರೇ ಎಂದು ಇರುವತನಕ ಬದುಕಿ. ಇವತ್ತಿನ ಜಾತಿ ಕೇಂದ್ರಿತ ಕೆಟ್ಟ ರಾಜಕಾರಣದ ಬಗ್ಗೆ ಬರೆಯುತ್ತಾ ಹೋದರೆ ಎಷ್ಟು ಬೇಕಾದರೂ ಬರೆಯಬಲ್ಲೆ ಆದರೆ ಅಷ್ಟೇ ಅಸಹ್ಯ ನನ್ನಲ್ಲಿ ಹುಟ್ಟಿಸಿರುವ ಕಾರಣ ಇಲ್ಲಿಗೇ ನಿಲ್ಲಿಸುತ್ತಿದ್ದೇನೆ. ಊರಿನ ತುಂಬಾ ಮುಖಂಡರಿದ್ದೀರಿ ಎಲ್ಲರೂ ಜಾತಿ ರಾಜಕಾರಣ ಮಾಡುವವರೇ ತುಂಬಿರುವುದು ನೋವಿನ ಸಂಗತಿ. ಆದರೂ ನಿಮ್ಮನ್ನೆಲ್ಲಾ ನಾನು ಪ್ರೀತಿಸುತ್ತೇನೆ ನಿಮ್ಮ ಬೆಳವಣಿಗೆಯನ್ನ ಕಂಡು ಖುಷಿ ಪಡುತ್ತೇನೆ ಕಾರಣ ನೀವು ನಾನು ಹುಟ್ಟಿದ ಊರಿನಲ್ಲೇ ಹುಟ್ಟಿದವರು ಎಂಬ ಕಾರಣಕ್ಕೆ. ನೀವು ಬೇರೆಯವರಲ್ಲ ನಾನು ಬೇರೆಯವರಲ್ಲ ನಾನೂ ನಿಮ್ಮ ಮನೆಯ ಮಗ ನೀವೂ ನನ್ನ ಮನೆಯ ಸದಸ್ಯರು ಎಂಬ ಭಾವನೆ ನನ್ನಲ್ಲಿ ಬಲವಾಗಿ ಬೇರೂರಿರುವ ಕಾರಣಕ್ಕೆ, ಮತ್ತು ಮುಖ್ಯವಾಗಿ ನನ್ನಲ್ಲಿ ಜಾತಿ ಎಂಬ ನೀಚ ನಿಕೃಷ್ಠ ಮನಸ್ಥಿತಿ ಇಲ್ಲದೇ ಇರುವ ಕಾರಣಕ್ಕೆ. And finally, I love you all for the sake of humanity,
integrity and our village's unity.)
ನಾಡಿನ ಪರಂಪರೆಯನ್ನ ಸಂರಕ್ಷಿಸುವ ದೃಷ್ಟಿಯಿಂದ ನಾಡಿನ ಸಂಸ್ಕೃತಿಯ ಒಂದು ಭಾಗವೇ ಆಗಿರುವ ಉತ್ತಮಕಂಚಿ ಕ್ಷೇತ್ರದ ಅಭಿವೃದ್ಧಿ ಆದಷ್ಟು ಬೇಗ ಪೂರ್ಣಗೊಳ್ಳಬೇಕಾದ ಅನಿವಾರ್ಯತೆ ಖಂಡಿತಾ ಇದೆ. ಸಹಸ್ರಾರು ವರ್ಷಗಳ ಇತಿಹಾಸವಿರುವ ಉತ್ತನೂರು ಕ್ಷೇತ್ರ ಅಕ್ಷರಶಃ ಕಂಚಿಯನ್ನು ಹೋಲುವಂತದ್ದು. ನಾಡಿನ ಪ್ರತಿಯೊಬ್ಬರೂ ನಮ್ಮ 'ಕರ್ನಾಟಕದ ಕಂಚಿ' ಉತ್ತನೂರಿಗೆ ಭೇಟಿ ಕೊಟ್ಟು ಇಲ್ಲಿನ ವಿಶೇಷ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ದರ್ಶನ ಮಾಡಬಹುದು. ಈ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಆದಷ್ಟು ಬೇಗ ಜೀರ್ಣೋದ್ಧಾರಗೊಂಡು ಪ್ರವರ್ಧಮಾನಕ್ಕೆ ಬರುವಂತಾಗಲಿ. ಈ ಕ್ಷೇತ್ರದ ಇತಿಹಾಸ ಮರುಕಳಿಸಿ ಕನ್ನಡ ನಾಡಿನ ಹಿರಿಮೆ, ಗರಿಮೆ ಹೆಚ್ಚುವಂತಾಗಲಿ ಎಂದು ಆಶಿಸುವುದರೊಂದಿಗೆ ನನ್ನ ಅತ್ಯಂತ ಪ್ರೀತಿಯ ಊರಿನ ಮತ್ತು ಕನ್ನಡ ನಾಡಿನ ಜನತೆಗೆ 2021 ಫೆಬ್ರವರಿ 27ರ ಭಾರತ ಹುಣ್ಣಿಮೆಯಂದು ನಡೆಯಲಿರುವ ಉತ್ತನೂರು ಶ್ರೀ ಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮ ರಥೋತ್ಸವದ ಶುಭಾಶಯಗಳನ್ನು ಕೋರುತ್ತಾ, ನಮ್ಮೂರಿನ ಏಳ್ಗೆಗಾಗಿ, ಸರ್ವಜನಾಂಗಗಳ ನೆಮ್ಮದಿಗಾಗಿ ಎಲ್ಲರೂ ಒಟ್ಟಿಗೆ ಶ್ರಮಿಸೋಣ ಇಡೀ ಊರು ಒಂದೇ ಮನೆಯಂತಾಗಿ ಸಹೋದರರಂತೆ ಬಾಳ್ವೆ ನಡೆಸೋಣ ಎಂದು ಕರೆ ಕೊಡುತ್ತಾ ಉತ್ತನೂರಿನ ಭಕ್ತಿ ಪರಂಪರೆಯ ಸಮಗ್ರ ಮಾಹಿತಿಯನ್ನೊಳಗೊಂಡ ಈ ನನ್ನ ಲೇಖನ ಮುಗಿಸುತ್ತಿದ್ದೇನೆ ಎಲ್ಲರಿಗೂ ಒಳಿತಾಗಲಿ.

ನಿಮ್ಮವ
ಶಿವರಾಜ್ ಉತ್ತನೂರ್
(ರಾಜನಿಧಿ)

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Navayuga News
Top