Dailyhunt Logo
  • Light mode
    Follow system
    Dark mode
    • Play Story
    • App Story
ಯೋಗೀಶಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್,ಜೀವಾವಧಿ ಶಿಕ್ಷೆಗೆ ತಡೆ, ಷರತ್ತುಬದ್ಧ ಜಾಮೀನು ಮಂಜೂರು!

ಯೋಗೀಶಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್,ಜೀವಾವಧಿ ಶಿಕ್ಷೆಗೆ ತಡೆ, ಷರತ್ತುಬದ್ಧ ಜಾಮೀನು ಮಂಜೂರು!

Navayuga News 2 weeks ago

ಬೆಂಗಳೂರು:ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡದ ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್‌ನಿಂದ ಭಾರಿ ರಿಲೀಫ್ ಸಿಕ್ಕಿದೆ.

ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಹೈಕೋರ್ಟ್‌ನ ದ್ವಿಸದಸ್ಯ ಪೀಠವು ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 10 ಜನ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿ ಮಹತ್ವದ ಆದೇಶ ಹೊರಡಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಪ್ರಮುಖರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ವಿಶೇಷ ನ್ಯಾಯಾಲಯ ನೀಡಿದ್ದ 'ದೋಷಿ' ಎಂಬ ತೀರ್ಪು ಹಾಗೂ ಜೀವಾವಧಿ ಶಿಕ್ಷೆಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಪ್ರಕರಣದ ಮೇಲ್ಮನವಿ ವಿಲೇವಾರಿಯಾಗುವವರೆಗೆ ಆರೋಪಿಗಳಿಗೆ ಮಧ್ಯಂತರ ಜಾಮೀನು ಕರುಣಿಸಲಾಗಿದೆ.

ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಲಯವು ಪ್ರತಿಯೊಬ್ಬರಿಗೂ ತಲಾ 5 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಒದಗಿಸುವಂತೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ.

ವಿಚಾರಣೆ ವೇಳೆ ತನಿಖಾ ಸಂಸ್ಥೆಯು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಬೇಕೆಂದು ಮನವಿ ಮಾಡಿತ್ತಾದರೂ, ಸಾಕ್ಷಿ ವಿಚಾರಣೆಗಳು ಈಗಾಗಲೇ ಮುಗಿದಿರುವುದರಿಂದ ನ್ಯಾಯಾಲಯವು ಪ್ರವೇಶದ ನಿರ್ಬಂಧವನ್ನು ನಿರಾಕರಿಸಿದೆ.

ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಚಿವರಿಗೆ ಮತ್ತು ಅವರ ಬೆಂಬಲಿಗರಿಗೆ ಹೈಕೋರ್ಟ್‌ನ ಈ ಇತ್ತೀಚಿನ ಆದೇಶವು ಕಾನೂನು ಹೋರಾಟದಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Navayuga News