ಟಾಪ್
ಐಪಿಎಲ್ ಪಂದ್ಯಗಳನ್ನು ಸ್ಥಗಿತಗೊಳಿಸಿ - ದೆಹಲಿ ಹೈಕೋರ್ಟ್ ಗೆ ಮನವಿ
ನವದೆಹಲಿ: ಬಯೋಬಬಲ್ ವಾತಾವರಣದಲ್ಲಿ ನಡೆಯುತ್ತಿದ್ದ ಐಪಿಎಲ್ ಟೂರ್ನಿಗೆ ಕೊರೊನಾ ಕಂಟಕವಾಗಿ ಪರಿಣಮಿಸಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯ ಭಾಗವಹಿಸಿದ್ದ 10 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಆಯೋಜನೆಯಾಗಿರುವ ಪಂದ್ಯಗಳನ್ನು ಸ್ಥಗಿತಗೊಳಿಸಬೇಕೆಂದು ದೆಹಲಿ ಹೈಕೋರ್ಟ್ ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂವರು ಸಿಬ್ಬಂದಿ ಹಾಗೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಐದು ಗ್ರೌಂಡ್ಸ್ ಮನ್ಸ್ ಗಳಿಗೂ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ದೆಹಲಿಯಲ್ಲಿ ಆಯೋಜನೆಯಾಗಿರುವ ಐಪಿಎಲ್ ಪಂದ್ಯಗಳನ್ನು ಸ್ಥಗಿತಗೊಳಿಸುವಂತೆ ಬಿಸಿಸಿಐ ಹಾಗೂ ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೊಸಿಯೇಶನ್‌ಗೆ ನಿರ್ದೇಶನ ನೀಡುವಂತೆ ಕರಣ್ ಎಸ್. ಠಾಕೂರ್ ಎಂಬ ವಕೀಲರು ದೆಹಲಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ದೆಹಲಿಯ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ ಅಗತ್ಯ ಔಷಧಿಗಳ ಕೊರತೆಯಿಂದ ಜನರು ತೀವ್ರ ಸಂಕಷ್ಟದಲ್ಲಿದ್ದು, ಈಗಾಗಲೇ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಜನಸಾಮಾನ್ಯರು ಅಂತ್ಯಕ್ರಿಯೆಯಲ್ಲೂ ಕೂಡ ಭಾಗಿಯಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ.
ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಇನ್ನುಳಿದ ಪಂದ್ಯಗಳನ್ನೂ ಕೂಡ ಸ್ಥಗಿತಗೊಳಿಸಬೇಕು. ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಕೊರೊನಾ ಸೋಂಕಿತರಿಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ವಕೀಲರಾದ ಕರಣ್ ಎಸ್. ಠಾಕೂರ್ ಮನವಿ ಮಾಡಿಕೊಂಡಿದ್ದಾರೆ.