ದೇಶ
ಭಾರತದ ಭದ್ರತಾ ಪಡೆಯ ಏಟಿಗೆ ದಿಕ್ಕೆಟ್ಟ ಜೆಇಎಂ ಉಗ್ರರು

ಜಮ್ಮು ಕಾಶ್ಮೀರ: ಅದು ನವೆಂಬರ್ 19.. ಗುರುವಾರ ಮುಂಜಾನೆ 4.50ರ ಸಮಯ.. ಜಮ್ಮು ಸಿಟಿಯಿಂದ ಕೊಂಚ ದೂರದ ನಗ್ರೋಟಾ ಬಳಿಯ ಬಾನ್ ಟೋಲ್ ಪ್ಲಾಜಾ ಬಳಿ ನಿಂತಿದ್ದ ಟ್ರಕ್ನಿಂದ ಏಕಾಏಕಿ ಗುಂಡಿನ ಸುರಿಮಳೆಯಾಗಿತ್ತು. ಅದೇ ಟ್ರಕ್ನಲ್ಲಿ ಮೂರು ಬಾರಿ ಗ್ರೆಡೇನ್ ಸ್ಫೋಟಗೊಂಡಿತ್ತು. ಈ ಎಲ್ಲಾ ದೃಶ್ಯಗಳು ಟೋಲ್ ಪ್ಲಾಜಾದ ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು. ಯೆಸ್, ಇದು ಜೈಷ್-ಏ- ಮೊಹಮ್ಮದ್ ಸಂಘಟನೆಯ ಉಗ್ರರು ಮತ್ತು ಭಾರತದ ಭದ್ರತಾ ಪಡೆಯ ನಡುವೆ ನಡೆದಿದ್ದ ಗುಂಡಿನ ಚಕಮಕಿ. ನಗ್ರೋಟಾ ಟೋಲ್ ಪ್ಲಾಜಾ ಬಳಿ ಟ್ರಕ್ನಲ್ಲಿದ್ದ ನಾಲ್ವರು ಜೈಷ್-ಏ- ಮೊಹಮ್ಮದ್ ಉಗ್ರರನ್ನ ಭಾರತೀಯ ಭದ್ರತಾ ಪಡೆ ಹೊಡೆದು ಮಲಗಿಸಿತ್ತು.
ಭಾರತದ ಯೋಧರು, ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನ ಹುಡುಕಿ ಹುಡುಕಿ ಹೊಸಕಿ ಹಾಕುತ್ತಿದ್ದಾರೆ. ಭಯೋತ್ಪಾದಕರನ್ನ ಕಂಡಲ್ಲಿ ಗುಂಡಿಕ್ಕಿ ಕೊಂದು ಹಾಕುತ್ತಿರುವುದು ಉಗ್ರ ಸಂಘಟನೆಗಳಿಗೆ ಸರಿಯಾದ ಬಿಸಿ ಮುಟ್ಟಿದೆ. ಅದರಲ್ಲೂ ನಗ್ರೋಟಾದಲ್ಲಿ ಜೈಷ್-ಏ- ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರನ್ನ ಸೇನಾ ಪಡೆ ಹೊಡೆದುರುಳಿಸಿದ್ದು, ಗಡಿಯಾಚೆಗಿನ ಉಗ್ರರಿಗೆ ನಿದ್ದೆಯೇ ಇಲ್ಲದಂತಾಗಿದೆ. ಮುಖ್ಯವಾಗಿ ಜೈಷ್ ಉಗ್ರ ಸಂಘಟನೆಯ ಎರಡನೇ ಅತ್ಯುನ್ನತ ಕಮಾಂಡರ್ ಮುಫ್ತಿ ರೌಫ್ ಅಸ್ಗರ್ಗೆ ಕಣಿವೆ ರಾಜ್ಯದಲ್ಲಿ ಉಗ್ರ ಕೃತ್ಯ ನಡೆಸುವುದು ಹೇಗೆ ಅನ್ನೋ ಚಿಂತೆ ಕಾಡುತ್ತಿದೆಯಂತೆ.
ಹೌದು, ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಬಿರುಸಾಗಿಯೇ ಇದೆ. ಎಲ್ಒಸಿ ಗಡಿಯುದ್ಧಕ್ಕೂ ಭಾರತೀಯ ಭದ್ರತಾ ಪಡೆ ಹಗಲಿರುಳು ಹೈ ಅಲರ್ಟ್ನಲ್ಲಿದೆ. ಈ ಹಿಂದೆ ಪಾಕ್ ಉಗ್ರರನ್ನ ಕಾಶ್ಮೀರ ಭಾಗದ ಗಡಿ ಭಾಗದಲ್ಲಿ ನುಸುಳಿಸುತ್ತಿದ್ದರು. ಆದರೆ ಆ ಭಾಗದಲ್ಲಿ ಭಾರತೀಯ ಸೇನೆ ತೀವ್ರ ಕಣ್ಗಾವಲು ಹಾಕಿದ್ದು, ಇದೀಗ ಪಾಕ್ ಉಗ್ರರ ಕಣ್ಣು ಜಮ್ಮು ಭಾಗದತ್ತ ಬಿದ್ದಿದೆ. ಇದೇ ಕಾರಣಕ್ಕೆ ಮೊನ್ನೆ ನಾಲ್ವರು ಜೈಷ್ ಉಗ್ರರನ್ನ ಪಾಕಿಸ್ತಾನದ ಸೈನಿಕರ ನೆರವಿನಿಂದ ಜಮ್ಮು ಭಾಗದಲ್ಲೇ ಗಡಿ ದಾಟಿಸಲಾಗಿತ್ತು. ಟ್ರಕ್ನಲ್ಲಿ ಯಾರಿಗೂ ತಿಳಿಯದಂತೆ ಕೂರಿಸಿ ಕಳುಹಿಸಲಾಗಿತ್ತು. ಆದರೆ ಭಾರತೀಯ ಸೇನೆ ಈ ವಿಷ ಸರ್ಪಗಳನ್ನ ಬೇಟೆಯಾಡಿತ್ತು. ನಗ್ರೋಟಾ ಬಳಿಯ ಬಾನ್ ಟೋಲ್ ಪ್ಲಾಜಾದಲ್ಲೇ ಎನ್ಕೌಂಟರ್ ಮಾಡಿ ಕೊಂದು ಹಾಕಿತ್ತು.
ಯಾವಾಗ ನಾಲ್ವರು ಜೈಷ್ ಉಗ್ರರು ಎನ್ಕೌಂಟರ್ನಲ್ಲಿ ಹತರಾದ್ರೋ ಅತ್ತ ಗಡಿಯಾಚೆಗಿನ ಕಮಾಂಡರ್ಗಳಿಗೆ ಬಾಲ ಸುಟ್ಟಂತಾಗಿದೆ. ನಾವು ಎಷ್ಟೆಲ್ಲಾ ಪ್ಲಾನ್ ಮಾಡಿ ಉಗ್ರರನ್ನ ಗಡಿ ದಾಟಿಸಿದ್ರು, ಇಂಡಿಯನ್ ಆರ್ಮಿ ಮತ್ತು ಗುಪ್ತಚರ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಎನ್ಕೌಂಟರ್ ಮಾಡಿ ಮುಗಿಸುತ್ತಿದ್ದಾರೆ ಅನ್ನೋದು ಜೈಷ್ ಸಂಘಟನೆಯ ಟಾಪ್ ಕಮಾಂಡರ್ಗಳಿಗೆ ಚಿಂತೆಯಾಗಿದೆ. ಹೀಗಂತ ಸ್ವತಃ ಜೆಇಎಂನ ಎರಡನೇ ಅತ್ಯುನ್ನತ ನಾಯಕ ಮುಫ್ತಿ ರೌಫ್ ಅಸ್ಗರನೇ ಆತಂಕ ವ್ಯಕ್ತಪಡಿಸಿದ್ದಾನೆ. ಕಾಶ್ಮೀರದಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಕೂಡ ಕಷ್ಟವಾಗಿದೆ ಅಂತ ಜೆಇಎಂ ಉಗ್ರರಿಗೆ ಸಂದೇಶ ರವಾನಿಸಿದ್ದಾನೆ. ಈ ಸಂದೇಶಗಳ ಬಗ್ಗೆ ಭಾರತೀಯ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.
ಅಂದಹಾಗೆ, ಮುಫ್ತಿ ರೌಫ್ ಅಸ್ಗರ್ ಯಾರು ಅಂದ್ರೆ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಮಸೂದ್ ಅಜರ್ನ ತಮ್ಮ. ಜೈಷ್ ಉಗ್ರ ಸಂಘಟನೆಯ ಎರಡನೇ ಪ್ರಮುಖ ನಾಯಕ. ಮಸೂದ್ ಅಜರ್ಗೆ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗ ಜೈಷ್ ಸಂಘಟನೆಯ ಪೂರ್ತಿ ಹೊಣೆ ಈ ಅಸ್ಗರ್ ಮೇಲೇನೆ ಇದೆ. ಈತನೇ ಎಲ್ಲಾ ಪ್ಲಾನ್ ಮಾಡಿ ಭಾರತದೊಳಗೆ ಉಗ್ರರನ್ನ ಕಳುಹಿಸುತ್ತಿದ್ದಾನೆ. ಮೊನ್ನೆ ನವೆಂಬರ್ 19ರಂದು ಕೂಡ ನಾಲ್ವರು ಉಗ್ರರನ್ನ ಗಡಿ ದಾಟಿಸಿ ಭಾರತದಲ್ಲಿ 26/11 ಮುಂಬೈ ಮಾದರಿಯ ದಾಳಿ ಮಾಡಿಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಆದರೆ ಅಸ್ಗರ್ ಪ್ಲಾನ್ ಉಲ್ಟಾ ಆಗಿದೆ. ಭಾರತೀಯ ಭದ್ರತಾ ಪಡೆಯ ಮುಂದೆ ಈ ಉಗ್ರರು ಮಂಡಿಯೂರುವಂತಾಗಿದೆ.