ದೇಶ
ಮಹಿಳೆಗೆ 31 ಬಾರಿ ಕೊರೊನಾ ಪಾಸಿಟಿವ್, ದಂಗಾದ ವೈದ್ಯರು

ಜೈಪುರ: ಮಹಿಳೆಯೊಬ್ಬರಿಗೆ ಕೇವಲ 5 ತಿಂಗಳಲ್ಲಿ 31 ಬಾರಿ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ವೈದ್ಯರನ್ನ ದಂಗಾಗಿಸಿದೆ. ರಾಜಸ್ಥಾನದಲ್ಲಿ ಈ ಪ್ರಕರಣ ವರದಿಯಾಗಿದೆ. ಶಾರದಾ ದೇವಿ ಎಂಬ ಮಹಿಳೆಗೆ 17 ಬಾರಿ ಅರ್ಟಿ-ಪಿಸಿಆರ್ ಹಾಗೂ 14 ಬಾರಿ ಱಪಿಡ್ ಆಯಂಟಿಂಜೆನ್ ಟೆಸ್ಟ್ ಮಾಡಲಾಗಿದೆ. ಅಷ್ಟೂ ಪರೀಕ್ಷೆಗಳಲ್ಲೂ ಆಕೆಗೆ ಕೊರೊನಾ ಸೋಂಕು ಇರುವುದಾಗಿ ವರದಿ ಹೇಳಿದೆ.
ಶಾರದಾ ಅವರ ಪ್ರಕರಣ ಕೊರೊನಾ ಬಗೆಗಿನ ವೃದ್ಯಕೀಯ ಪರಿಕಲ್ಪನೆಗೇ ಸವಾಲೊಡ್ಡಿದೆ. ಕೊರೊನಾವೈರಸ್ನ ಇನ್ಕ್ಯುಬೇಷನ್(ಕಾಯಿಲೆ ಹರಡುವಿಕೆ) 14 ದಿನಗಳಲ್ಲಿ ಕೊನೆಗೊಳ್ಳುತ್ತದೆ ಎಂದು ಸದ್ಯ ತಜ್ಞರು ನಂಬಿದ್ದಾರೆ. ಆದ್ರೆ ಈ ಮಹಿಳೆಗೆ 5 ತಿಂಗಳಿಂದ ಸತತವಾಗಿ ಪಾಸಿಟಿವ್ ಎಂದೇ ವರದಿ ಬರುತ್ತಿದೆ.
ಶಾರದಾ ಅವರು ಕಳೆದ ವರ್ಷ ಆಗಸ್ಟ್ನಿಂದ ಭರತ್ಪುರದ ಅಪ್ನಾ ಆಶ್ರಮದಲ್ಲಿದ್ದಾರೆ. ಆಶ್ರಮದ ನಿಯಮದಂತೆ, ಪ್ರವೇಶಾತಿಗೂ ಮುನ್ನ ಅವರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ವರದಿ ಪಾಸಿಟಿವ್ ಬಂದಿತ್ತು. ಅಂದಿನಿಂದ ಅವರನ್ನ ಪ್ರತ್ಯೇಕವಾಗಿ ಇರಿಸಲಾಗಿದೆ. ಹಾಗೇ ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ.. ಎಲ್ಲಾ ಮೂರು ರೀತಿಯ ಚಿಕಿತ್ಸೆಯನ್ನು ನೀಡಲಾಗಿದೆ. ಇದರ ಹೊರತಾಗಿಯೂ, ಪ್ರತಿ ಬಾರಿ ಕೊರೊನಾ ಪರೀಕ್ಷೆಯಲ್ಲೂ ಅವರ ವರದಿ ಪಾಸಿಟಿವ್ ಬರುತ್ತಲೇ ಇದೆ. ಆಶ್ಚರ್ಯ ಅಂದ್ರೆ, ಮಹಿಳೆಗೆ ಕೊರೊನಾ ಇದ್ದರೂ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿಲ್ಲ. ಅಲ್ಲದೆ 7-8 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಅವರು ಆಶ್ರಮಕ್ಕೆ ಬಂದಾಗ ನಿಲ್ಲಲು ಕೂಡ ಶಕ್ತಿಯಿಲ್ಲದೆ ತುಂಬಾ ವೀಕ್ ಆಗಿದ್ದರು ಎಂದು ವೈದ್ಯ ಡಾ. ಬಿ.ಎಂ ಭಾರದ್ವಾಜ್ ತಿಳಿಸಿದ್ದಾರೆ.
ಅವರು ಆರೋಗ್ಯವಾಗಿದ್ದಾರೆ ಅನ್ನೋದು ಸಮಾಧಾನಕರ ವಿಷಯ. ಆದ್ರೂ ಕೊರೊನಾ ಪಾಸಿಟಿವ್ ಬರುತ್ತಿರುವುದು ನಮಗೆ ಕಳವಳ ಮೂಡಿಸಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡು, ವರದಿಗಳನ್ನು ವಿವರಿಸಲು ನಾವು ಭರತ್ಪುರ ಆರೋಗ್ಯ ಅಧಿಕಾರಿಗಳು ಮತ್ತು ಜೈಪುರದ ಸವಾಯಿ ಮನ್ ಸಿಂಗ್ ಆಸ್ಪತ್ರೆ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ ಎಂದು ಭಾರದ್ವಾಜ್ ಹೇಳಿದ್ದಾರೆ. ಮಹಿಳೆಯ ರೋಗನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಅವರಿಗೆ ಪದೇ ಪದೇ ಕೊರೊನಾ ಪಾಸಿಟಿವ್ ವರದಿ ಬರುತ್ತಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.