Saturday, 31 Oct, 1.14 pm News First Live

ಟಾಪ್ನ್ಯೂಸ್
ಮತ್ತೆ ಅಧಿಕಾರದ ಕನಸು ಕಂಡಿರೋ ಕೇರಳ ಸಿಎಂಗೆ ಮುಳುವಾಗುತ್ತಾ ಗೋಲ್ಡ್​ ಸ್ಮಗ್ಲಿಂಗ್ ಕೇಸ್..?

ತಿರುವನಂತಪುರಂ: ಕೇರಳದಲ್ಲಿ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದ ವಿಷಯ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಸಿಎಂ ಪಿಣರಾಯಿ ವಿಜಯನ್​ರ ಸರ್ಕಾರವನ್ನೇ ಅಲುಗಾಡಿಸುತ್ತಿರುವ ಬಿಗ್​​ ಕೇಸ್​​ ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋದು ತೀವ್ರ ಕುತೂಹಲ ಸೃಷ್ಟಿಸಿದೆ.

ಏನಿದು ಈ ಪ್ರಕರಣ ಅಂತಾ ನೋಡೊದಾದ್ರೆ ಕಳೆದ ಜುಲೈ ತಿಂಗಳಿನಲ್ಲಿ ಅಧಿಕಾರಿಗಳು ತಿರುವನಂತಪುರಂನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30 ಕೆಜಿ ಗೋಲ್ಡ್ ಅನ್ನ ಸೀಜ್ ಮಾಡ್ತಾರೆ. 30 ಕೆಜಿ ಬಂಗಾರದ ಮೌಲ್ಯ ಅಂದಾಜು 15 ಕೋಟಿ ರೂಪಾಯಿಗೂ ಅಧಿಕ ಎನ್ನಲಾಗಿದೆ. ಇದು ದುಬೈನಿಂದ ತಿರುವನಂತಪುರಂನಲ್ಲಿರುವ UAE ಕಾನ್ಸುಲೇಟ್ ಜನರಲ್ ಆಫೀಸ್ ಬಂದಿದ್ದ ರಾಜತಾಂತ್ರಿಕ ಸರಕುಗಳಲ್ಲಿ ಕಂಡು ಬಂದಿತ್ತು. ಕಸ್ಟಮ್ಸ್​ ಅಧಿಕಾರಿಗಳು ಸಾಮಾನ್ಯ ತಪಾಸಣೆ ವೇಳೆ ಯಾವುದೇ ದಾಖಲೆ ಇಲ್ಲದ ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ ಅದನ್ನ ಸೀಜ್ ಮಾಡಿದ್ದರು.

30 ಕೆಜಿ ಚಿನ್ನವನ್ನ ಸೀಜ್ ಮಾಡಿದ್ದು ಹೇಗೆ..?
ಕಸ್ಟಮ್ಸ್​ ಅಧಿಕಾರಿಗಳಿಗೆ ಕೇರಳಕ್ಕೆ ಚಿನ್ನವನ್ನ ಅಕ್ರಮವಾಗಿ ಸಾಗಾಟ ಮಾಡಲಾಗ್ತಿದೆ ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿತ್ತು. ಇದು ದುಬೈನಿಂದ ಬಂದಿದ್ದ ರಾಜತಾಂತ್ರಿಕ ಸರಕುಗಳ ಒಂದು ಭಾಗವಾಗಿತ್ತು. ಚಿನ್ನವನ್ನ ಶಾರ್ಜಾ ಮೂಲದ ಅಲ್-ಜತಾರ್ ಸ್ಪೈಸೀಸ್ ಸಂಸ್ಥೆ ಕಳುಹಿಸಿಕೊಟ್ಟಿತ್ತು. ಇದನ್ನ ಸಾಗಿಸಲು ಯುಎಇ ದೂತಾವಾಸ ಕಚೇರಿಯ ಮಾಜಿ ಪಿಆರ್‌ಒ ಸರಿತ್‌ ಕುಮಾರ್‌ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಂದ್ಹಾಗೆ ಸರಿತ್ ಕುಮಾರ್​ನನ್ನ 2019 ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಸರಿತ್ ಕುಮಾರ್ ಪರವಾಗಿ ಯಾವುದೇ ಸರಕುಗಳನ್ನು ಸ್ವೀಕರಿಸಲು ಇನ್ಮುಂದೆ ಅಧಿಕಾರವಿಲ್ಲ ಎಂದು ಕಾನ್ಸುಲೇಟ್ ಕಸ್ಟಮ್ಸ್ ಇಲಾಖೆಗೆ ತಿಳಿಸಿತ್ತು. ಅಂದು ಸರಿತ್ ಕುಮಾತ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರೋದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಎಚ್ಚೆತ್ತುಕೊಂಡ ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ನಡೆಸಿದಾಗ 30 ಕೆಜಿ ಚಿನ್ನ ಇರೋದು ಪತ್ತೆಯಾಗಿದೆ.

ಪ್ರಕರಣ ಸಿಎಂ ಕಚೇರಿಗೆ ಲಿಂಕ್ ಪಡೆದಿದ್ದೇಗೆ..?
ಈ ಎಲ್ಲಾ ಬೆಳವಣಿಗೆಗಳ ಬಳಿಕ ಕಸ್ಟಮ್ಸ್ ಅಧಿಕಾರಿಗಳು ಸರಿತ್ ಕುಮಾರ್ ಅವರನ್ನ ಅರೆಸ್ಟ್ ಮಾಡ್ತಾರೆ. ಈತನ ವಿಚಾರಣೆ ವೇಳೆ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿ, ಕೇರಳದ ಐಟಿ ಇಲಾಖೆಯ ಎಂಜಿನಿಯರ್‌ ಆಗಿದ್ದ ಸ್ವಪ್ನಾ ಸುರೇಶ್​ರತ್ತ ಬೆರಳು ತೋರಿಸಿದ್ದಾನೆ. ಕೊನೆಗೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್​ ಕಿಂಗ್ ಪಿನ್ ಅನ್ನೋದನ್ನ ತನಿಖಾಧಿಕಾರಿಗಳು ಖಾತ್ರಿ ಮಾಡಿಕೊಳ್ತಾರೆ. ಅಲ್ಲದೇ ಸ್ಪಪ್ನಾ ಸುರೇಶ್​ಗೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಿದಾಗ ಆಕೆ ಸಿಎಂ ಕಚೇರಿಯ ಜೊತೆ ಸಂಪರ್ಕದಲ್ಲಿರೋದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಸಿಎಂ ಪಿಣರಾಯಿ ವಿಜಯನ್​, ಪ್ರಧಾನಿ ಮೋದಿಗೆ ಪತ್ರ ಬರೆಯುತ್ತಾರೆ. ಪತ್ರದಲ್ಲಿ ಪ್ರಕರಣದ ತನಿಖೆಯನ್ನ ಎನ್​ಐಎ ಹಾಗೂ ಇಡಿ ಅಧಿಕಾರಿಗಳಿಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಾಗ ಕೇಂದ್ರ ಸ್ವತಂತ್ರ ತನಿಖಾ ಏಜನ್ಸಿಗಳು ಪ್ರಕರಣ ದಾಖಲಿಸಿಕೊಂಡವು.

ಐಎಎಸ್​ ಅಧಿಕಾರಿ ಶಿವಶಂಕರ್ ಹೆಸರು ಬಹಿರಂಗ
ಸ್ವಪ್ನಾ ಸುರೇಶ್ ಹಾಗೂ ಸರಿತ್ ಕುಮಾರ್​​ನನ್ನ ತೀವ್ರ ವಿಚಾರಣೆ ನಡೆಸಿದಾಗ ಸಿಎಂ ಪಿಣರಾಯಿ ವಿಜಯನ್ ಮಾಜಿ ಕಾರ್ಯದರ್ಶಿ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಹೆಸರು ಕೇಳಿಬರುತ್ತೆ. ಹೀಗಾಗಿ ಶಿವಶಂಕರ್​​ನನ್ನ ಕಚೇರಿಯಿಂದ ಅಮಾನತು ಮಾಡಲಾಗುತ್ತದೆ. ಎಂ ಶಿವಶಂಕರ್ ,ಸಿಎಂ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿ ಮತ್ತು ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಲಿಮಿಟೆಡ್ (ಕೆಎಸ್‍ಟಿಐಎಲ್) ಮುಖ್ಯಸ್ಥರಾಗಿದ್ದರು. ಇವರು ಈ ಹಿಂದೆ ಕೆಎಸ್‍ಐಟಿಐಎಲ್ ಹುದ್ದೆಗೆ ಸ್ವಪ್ನಾಳನ್ನು ಶಿಫಾರಸು ಮಾಡಿದ್ದರು. ಆದರೆ ಆ ಹುದ್ದೆಗೆ ಸ್ವಪ್ನಾ ಸುರೇಶ್ ಅರ್ಹಳಲ್ಲ ಎನ್ನಲಾಗಿದೆ. ಇದಾದ ನಂತರ ಶಿವಸಂಕರ್ ಗೋಲ್ಡ್​ ಸ್ಮಗ್ಲಿಂಗ್ ಕೇಸ್​ನಲ್ಲಿ ಭಾಗಿಯಾಗಿದ್ದಾನೆ ಅನ್ನೋದು ಗೊತ್ತಾಗುತ್ತೆ. ಹೀಗಾಗಿ ಸಿಎಂ ಪಿಣರಾಯಿ ವಿಜಯನ್ ತಮ್ಮ ಪ್ರಿನ್ಸಿಪಾಲ್ ಸೆಕ್ರೆಟರಿ ಹುದ್ದೆಯಿಂದ ಅವರನ್ನ ರಿಮೂವ್ ಮಾಡ್ತಾರೆ.

ಅಕ್ಟೋಬರ್ 27 ರಂದು ಬಂಧನ
ನಂತರ ಶಿವಶಂಕರ್ ಅವರನ್ನ ಕೇಂದ್ರ ತನಿಖಾ ಸಂಸ್ಥೆಗಳಾದ ಎನ್​ಐಎ, ಇಡಿ ಕಸ್ಟಮ್ಸ್ ಇಲಾಖೆ ಹಲವಾರು ಬಾರಿ ಪ್ರಶ್ನಿಸಿದ್ದಾರೆ. ತನಿಖೆ ವೇಳೆ ಅಕ್ರಮ ಚಿನ್ನವನ್ನ ಸಾಗಾಟ ಮಾಡುವಲ್ಲಿ ತಮ್ಮ ಪಾತ್ರ ಇತ್ತು ಅನ್ನೋದನ್ನ ಶಿವಶಂಕರ್ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 27 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನ ಬಂಧಿಸುತ್ತಾರೆ.

ಈ ಪ್ರಕರಣವೀಗ ಮತ್ತೆ ಸಿಎಂ ಪಿಣರಾಯಿ ವಿಜಯ್ ಅವರಿಗೆ ಸಂಕಷ್ಟ ತಂದೊಡ್ಡಿದೆ. ಶಿವಶಂಕರ್ ತನಿಖಾಧಿಕಾರಿಗಳ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಅನ್ನೋದನ್ನೇ ವಿಪಕ್ಷಗಳು ಬಲವಾಗಿ ಹಿಡಿದುಕೊಂಡು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿವೆ. ಕೇರಳದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಿಎಂ ವಿಜಯನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ. ಇದರ ಮುಂದುವರಿದ ಭಾಗವಾಗಿ ಕಾಂಗ್ರೆಸ್​ ಕಾರ್ಯಕರ್ತರು ಮುಖ್ಯಮಂತ್ರಿ ನಿವಾಸದೆದರು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಒಂದು ಹೆಚ್ಚೆ ಮುಂದು ಹೋಗಿರುವ ಬಿಜೆಪಿ, ಪಿಣರಾಯಿ ವಿಜಯ್ ಅವರನ್ನೇ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದೆ.

ಇಬ್ಬರು ಸಚಿವರೂ ಭಾಗಿ..?
ಅಕ್ರಮ ಚಿನ್ನ ಸಾಗಾಟ ಕೇಸ್​ನಲ್ಲಿ ಸರ್ಕಾರ ಇಬ್ಬರು ಸಚಿವರು, ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ. ಹೀಗಾಗಿ ಸಿಎಂ ಪಿಣರಾಯಿ ವಿಜಯನ್ ಅವರನ್ನ ಅಧಿಕಾರಿಗಳು ಪ್ರಶ್ನೆ ಮಾಡಬೇಕು. ವಿಜಯನ್​​ ಅವರೇ ಶಿವಶಂಕರ್​ಗೆ ಸ್ವಪ್ನಾ ಸುರೇಶ್ ಅವರನ್ನ ಪರಿಚಯ ಮಾಡಿಕೊಟ್ಟಿದ್ದರು ಅಂತಾ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.

ವಿಪಕ್ಷಗಳಿಗೆ ಚುನಾವಣಾ ಅಸ್ತ್ರ
ಅಧಿಕಾರಿಗಳನ್ನ, ಸರ್ಕಾರವನ್ನ ವಿರೋಧಿಸಲು ವಿಪಕ್ಷಗಳು ಪ್ರಕರಣವನ್ನ ಬಳಕೆ ಮಾಡಿಕೊಳ್ತಿದೆ. ಇದರಲ್ಲಿ ನನ್ನ ದೂಷಿಸಲು ಏನೂ ಇಲ್ಲ. ಬಂಧಿತ ಶಿವಶಂಕರ್ ಕಾನೂನು ಎದುರಿಸಲಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುತ್ತದೆ ಅಂತಾ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಒಟ್ಟಾರೆ ಕೇರಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯವ ಕನಸು ಕಾಣುತ್ತಿರುವ ಸಿಪಿಐ-ಎಂಗೆ ಗೋಲ್ಡ್​ ಸ್ಮಗ್ಲಿಂಗ್ ಕೇಸ್ ಮುಳುವಾಗುವ ಲಕ್ಷಣಗಳು ದಟ್ಟವಾಗ್ತಿದೆ. ಇದೇ ಪ್ರಕರಣವನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತೆ ಸರ್ಕಾರ ರಚನೆ ಮಾಡುವ ಭರವಸೆಯನ್ನ ವ್ಯಕ್ತಪಿಸುತ್ತಿದೆ. ಅಲ್ಲದೇ ಬಿಜೆಪಿ ಕೂಡ ರಾಜ್ಯದ ಚುನಾವಣಾ ರಾಜಕೀಯದಲ್ಲಿ ಈ ಬಗ್ಗೆ ತನ್ನ ದನಿ ಗಟ್ಟಿಗೊಳಿಸಿಕೊಳ್ಳುತ್ತಿದೆ.

ವಿಶೇಷ ಬರಹ: ಗಣೇಶ್ ಕೆರೆಕುಳಿ, ಡಿಜಿಟಲ್ ಮೀಡಿಯಾ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News First Live
Top