ದೇಶ
ಮುಂದುವರಿದ ಕೊರೊನಾ ಅಟ್ಟಹಾಸ.. ಹೊಸ ಗೈಡ್ಲೈನ್ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ದೇಶದಲ್ಲಿ ಕೊರೊನಾ ಕಡಿಮೆಯಾಗ್ತಿದೆ ಎಂದುಕೊಳ್ಳುತ್ತಿರುವಾಗಲೇ ಪಾಸಿಟಿವ್ ಕೇಸ್ಗಳು ಹನುಮಂತನ ಬಾಲದಂತೆ ಹೆಚ್ಚಾಗ್ತಿದೆ. ಅದರಲ್ಲೂ ಕೆಲವು ರಾಜ್ಯಗಳಲ್ಲಿ ಅಪಾಯದ ಮಟ್ಟ ಮೀರಿ ಕೇಸ್ಗಳು ಜಾಸ್ತಿಯಾಗ್ತಿವೆ. ಇದು ಸರ್ಕಾರಕ್ಕೆ ಬಹುದೊಡ್ಡ ಚಾಲೆಂಜ್ ಆಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆಯಾ ರಾಜ್ಯಗಳಿಗೆ ಕೋವಿಡ್ ನಿಯಂತ್ರಣ ಮಾಡೋಕೆ ಕೆಲವು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.
ಗುಜರಾತ್, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಇನ್ನೂ ಕೆಲವು ರಾಜ್ಯಗಳಲ್ಲಿ ಕೋವಿಡ್ ಅಟ್ಟಹಾಸ ಹೆಚ್ಚಾಗಿದೆ. ಕೊರೊನಾದ ಎರಡನೇ ಅಲೆ ಶುರುವಾಗಿದ್ದು, ಅಲ್ಲಿನ ಸರ್ಕಾರಗಳು ಕೊರೊನಾವನ್ನ ತಡಗಟ್ಟೋಕೆ ಸರ್ಕಸ್ ಮಾಡ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಕೋವಿಡ್ ಹೆಚ್ಚಿರೋ ರಾಜ್ಯಗಳಲ್ಲಿ ಕೆಲವು ಮಾರ್ಗಸೂಚಿಗಳನ್ನ ಅನುಸರಿಸುವಂತೆ ಆದೇಶ ಹೊರಡಿಸಿದೆ.
ಪರಿಸ್ಥಿತಿಗೆ ತಕ್ಕ ಹಾಗೆ ನೈಟ್ ಕರ್ಫ್ಯೂ
ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ ಹೆಚ್ಚಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಳೀಯ ನಿರ್ಬಂಧ ಹೇರುವಂತೆ ಸೂಚಿಸಿದೆ. ಅಂದ್ರೆ ಸದ್ಯ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೋಡಿಕೊಂಡು ರಾತ್ರಿ ಕರ್ಫ್ಯೂ ವಿಧಿಸಬಹುದು. ಆದ್ರೆ ಯಾವುದೇ ರೀತಿಯ ಲಾಕ್ಡೌನ್ ಅಥವಾ ಕಂಟೇನ್ಮೆಂಟ್ ಜೋನ್ ಮಾಡುವಂತಿಲ್ಲ. ಒಂದು ವೇಳೆ ಲಾಕ್ಡೌನ್ ಮಾಡುವುದಿದ್ದರೂ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿಯೋ ನಿರ್ಧಾರ ತೆಗೆದುಕೊಳ್ಳಬೇಕು.
ಕಚೇರಿ ಸಮಯ ಹಾಗೂ ಉದ್ಯೋಗಿಗಳ ಬದಲಾವಣೆ
ಯಾವ ಪ್ರದೇಶದಲ್ಲಿ ಒಂದು ವಾರಕ್ಕಿಂತ ಇನ್ನೊಂದು ವಾರದಲ್ಲಿ ಪತ್ತೆಯಾಗುವ ಕೋವಿಡ್ ಕೇಸ್ ಹೆಚ್ಚಿರುತ್ತೋ ಅಂತಹ ಕಡೆಗಳಲ್ಲಿ ಕಚೇರಿ ಸಮಯವನ್ನ ಬದಲಾವಣೆ ಮಾಡಬಹುದು. ಅಂದ್ರೆ ಎರಡು ಮೂರು ಶಿಫ್ಟ್ಗಳಾಗಿ ಮಾಡಿ ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳಬಹುದು. ಜೊತೆಗೆ ಉದ್ಯೋಗಿಗಳು ಹೆಚ್ಚಿದ್ದ ಕಚೇರಿಗಳಲ್ಲಿ ಕಡಿಮೆ ಸಮಯ ಕೆಲಸ ಮಾಡುವಂತೆ ಸೂಚನೆ ಕೊಡಬಹುದು.
ಪೊಲೀಸರು, ಪಾಲಿಕೆ ಅಧಿಕಾರಿಗಳು ಮಾರ್ಗಸೂಚಿಯ ಮೇಲೆ ನಿಗಾವಹಿಸಬೇಕು
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರೋ ಈ ಮಾರ್ಗಸೂಚಿಯನ್ನ ಜನ ಪಾಲನೆ ಮಾಡ್ತಿದ್ದಾರೋ ಇಲ್ಲವೋ ಎಂದು ಸ್ಥಳೀಯ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ನಿಗಾವಹಿಸಬೇಕು. ಒಂದು ವೇಳೆ ಜನ ಕೋವಿಡ್ ನಿಯಮಗಳನ್ನ ಪಾಲನೆ ಮಾಡದಿದ್ದಲ್ಲಿ ಅಧಿಕಾರಿಗಳೇ ನೇರ ಹೊಣೆಯಾಗ್ತಾರೆ.
ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರೋ ಮಾರ್ಗಸೂಚಿ ಅನ್ವಯ, ರಾಜ್ಯ ಸರ್ಕಾರವು, ಜನ ನಿಯಮ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾರಾದ್ರೂ ಕೋವಿಡ್ ಸುರಕ್ಷಾ ಕ್ರಮಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಮಾಡದೇ ಇದ್ರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.
ರಾಜ್ಯ ಹಾಗೂ ಹೊರ ರಾಜ್ಯ ಪ್ರವಾಸಕ್ಕೆ ಯಾವುದೇ ನಿರ್ಬಂಧವಿಲ್ಲ
ರಾಜ್ಯದ ಒಳಗೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಟ್ರಾವೆಲ್ ಮಾಡೋರು, ಅಥವಾ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರವಾಸ ಮಾಡೋರಿಗೆ ಯಾವುದೇ ರೀತಿಯ ನಿರ್ಬಂಧಗಳು ಇಲ್ಲ. ಅದು ವ್ಯಕ್ತಿಯಾಗಿದ್ರೂ ಸರಿ, ಅಥವಾ ವಸ್ತುಗಳ ಸಾಗಾಟವಾಗಿದ್ರೂ ಓಕೆ. ಇನ್ನೂ ಈ ನಿಯಮ ಬೇರೆ ದೇಶದಲ್ಲಿ ಭೂ ಖರೀದಿ ಮಾಡೋಕೆ ಹೋಗುವವರಿಗೂ ಅನ್ವಯಿಸುತ್ತದೆ. ಇಂತವ್ರಿಗಾಗಿ ಯಾವುದೇ ರೀತಿಯ ಪರ್ಮಿಶನ್ ಲೆಟರ್ ಕೊಡೋದಿಲ್ಲ. ಬದಲಿಗೆ ಇ- ಪರ್ಮಿಟ್ ಇದ್ದರೇ ಸಾಕು.
ಕಣ್ಗಾವಲು, ನಿಯಂತ್ರಣ ಮತ್ತು ಎಚ್ಚರಿಕೆ
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರೋ ನಿಯಮಗಳ ಪೈಕಿ ಇದು ಹೊಸ ಬಗೆಯ ನಿಯಮವಾಗಿದ್ದು, ಕೋವಿಡ್ ಹೆಚ್ಚಿರುವ ಪ್ರದೇಶಗಳಲ್ಲಿ ಕಣ್ಗಾವಲು ಟೀಮ್ಗಳಿದ್ದು, ಮನೆ ಮನೆಗೆ ಹೋಗಿ ಕೋವಿಡ್ ರೋಗಿಗಳನ್ನ ಪತ್ತೆ ಹಚ್ಚಬೇಕು. ಜೊತೆಗೆ ಪತ್ತೆ ಹಚ್ಚಿದ ಸೋಂಕಿತರಿಗೆ ಆಸ್ಪತ್ರೆ ಅಥವಾ ಮನೆಯಲ್ಲಿಯೇ ಚಿಕಿತ್ಸಾ ವ್ಯವಸ್ಥೆ ಮಾಡಿಸಬೇಕು.
ವೈದ್ಯಕೀಯ ತುರ್ತುಸ್ಥಿತಿ ಹೊರತುಪಡಿಸಿ ಜನ ಅನಾವಶ್ಯಕ ಓಡಾಡುವಂತಿಲ್ಲ
ಸಚಿವಾಲಯ ಸೂಚಿಸಿರೋ ಕೋವಿಡ್-19 ನಿಯಮದನ್ವಯ, ಕಂಟೈನ್ಮೆಂಟ್ ಜೋನ್ಗಳಲ್ಲಿ ಸೂಚಿಸಿರೋ ಎಲ್ಲಾ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಫಾಲೋ ಮಾಡಬೇಕು. ಕೋವಿಡ್ ಕೇಸ್ ಹೆಚ್ಚಿರೋ ಪ್ರದೇಶಗಳಲ್ಲಿ ಜನ ಅನಾವಶ್ಯಕವಾಗಿ ಓಡಾಡುವಂತಿಲ್ಲ. ಮೆಡಿಕಲ್ ಎಮರ್ಜೆನ್ಸಿ, ಸರಕು ಸೇವೆಯನ್ನ ಹೊರತುಪಡಿಸಿ ಬೇರ್ಯಾವ ಸೇವೆಗಳು ಸಿಗೋದಿಲ್ಲ. ಸ್ಥಳೀಯ ಸರ್ಕಾರ ಈ ನಿಯಮವನ್ನ ಪಾಲಿಸಲೇಬೇಕು.
ಕಂಟೈನ್ಮೆಂಟ್ ಜೋನ್ನ ವ್ಯಾಪಾರಿಗಳಿಗೆ ಮಾರುಕಟ್ಟೆ ಪ್ರವೇಶ ನಿಷಿದ್ಧ
ಕಂಟೈನ್ಮೆಂಟ್ನಲ್ಲಿ ಯಾರಾದ್ರೂ ವ್ಯಾಪಾರಿಗಳಿದ್ದು ಅಂತಹವರ ಅಂಗಡಿ ಮಾರುಕಟ್ಟೆಗಳಲ್ಲಿ ಇತ್ತಂದ್ರೆ, ಅವ್ರಿಗೆ ಮಾರುಕಟ್ಟೆ ಪ್ರವೇಶ ನಿಷಿದ್ಧವಾಗಿರುತ್ತದೆ. ವ್ಯಾಪಾರಿಗಳಷ್ಟೇ ಅಲ್ಲದೇ ಕೆಲಸಗಾರರಿಗೂ ಕೂಡ ಮಾರುಕಟ್ಟೆಗೆ ನೋ ಎಂಟ್ರಿ.
ಈ ಎಲ್ಲಾ ನಿಯಮಗಳ ಜೊತೆ ಪ್ರತಿಯೊಬ್ಬರು ಮಾಸ್ಕ್ ಧರಿಸಲೇಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಲೇಬೇಕು. ಜೊತೆಗೆ ಪಬ್ಲಿಕ್ ಪ್ಲೇಸ್ಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಇನ್ನೂ ಈ ಎಲ್ಲಾ ನಿಯಮಗಳನ್ನ ಜನ ಪಾಲನೆ ಮಾಡ್ತಿದ್ದಾರಾ ಇಲ್ಲವಾ ಎಂದು ನೋಡಿಕೊಳ್ಳುವ ಕೆಲಸ ಸ್ಥಳೀಯ ಅಧಿಕಾರಿಗಳಿಗೆ ಸೇರಿದ್ದು. ಇನ್ನೂ ಈ ನಿಯಮ ಇಂದಿನಿಂದಲೇ ಕಾರ್ಯರೂಪಕ್ಕೆ ಬರಲಿದ್ದು, ಡಿಸೆಂಬರ್ 31ರವರೆಗೂ ಇರಲಿದೆ.