Dailyhunt
28ರಿಂದ ಲಾರಿ ಮುಷ್ಕರ : ಲಾರಿ ಮಾಲೀಕರ ಸಂಘದಿಂದ ಸ್ಪಷ್ಟನೆ

28ರಿಂದ ಲಾರಿ ಮುಷ್ಕರ : ಲಾರಿ ಮಾಲೀಕರ ಸಂಘದಿಂದ ಸ್ಪಷ್ಟನೆ

ಬೆಂಗಳೂರು : ಸರ್ಕಾರ ಕೂಡಲೇ ಡೀಸೆಲ್ ಮೇಲಿನ ತೆರಿಗೆ ಇಳಿಸಬೇಕು. ಇಲ್ಲದಿದ್ದರೆ ಇದೇ 28ರಿಂದ ಲಾರಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘ ಹೇಳಿದೆ. ಮಿತಿಮೀರಿದ ತೆರಿಗೆ ವಿದಿಸುತ್ತಿರುವುದರಿಂದ ಲಾರಿ ಉದ್ಯಮ ತೀವ್ರ ಸಂಕಷ್ಟಕ್ಕೀಡಾಗಿದೆ.

ಹೀಗಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಗಿರುವುದರಿಂದ ಇದೇ 23ರಂದು ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಮತ್ತು ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.

ಸರ್ಕಾರ ತಿಂಗಳಾಂತ್ಯದಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು 5 ರಿಂದ 10ರೂ. ಇಳಿಸಬೇಕು. ಇಲ್ಲದಿದ್ದರೆ ನಾವು ಟೋಲ್‍ಗಳಲ್ಲೇ ಗಾಡಿಗಳನ್ನು ನಿಲ್ಲಿಸಿ ಅನಿರ್ದಿಷ್ಟಾವ ಮುಷ್ಕರ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸುಮಾರು ಆರು ಲಕ್ಷ ಲಾರಿಗಳಿದ್ದು, ಡೀಸೆಲ್ ಬೆಲೆ ಏರಿಕೆ ಫೈನಾನ್ಸ್‍ನವರ ಕಿರುಕುಳದಿಂದ ಶೇ.30ರಷ್ಟು ಲಾರಿಗಳ ಓಡಾಟ ಸ್ಥಗಿತಗೊಂಡಿದೆ. ಅವಲಂಬಿತರು ಬೀದಿ ಪಾಲಾಗಿದ್ದಾರೆ.

ಲಾರಿ ಉದ್ಯಮವನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಜನಕ್ಕೆ ಡೀಸೆಲ್ ಬೆಲೆ ಏರಿಕೆಯಿಂದ ತೀವ್ರ ಅನ್ಯಾಯವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬೆಲೆ ಏರಿಕೆಯಿಂದ ಇಂಧನ ಬೆಲೆಯಲ್ಲಿ ಏರುಪೇರಾಗುತ್ತದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಿತಿಮೀರಿದ ತೆರಿಗೆ ವಿಸುತ್ತಿರುವುದು ಎಷ್ಟು ಸಮಂಜಸ.

ಒಂದು ಲಾರಿ ದಿನವೊಂದಕ್ಕೆ 200 ಲೀಟರ್ ಡೀಸೆಲ್ ಖರ್ಚು ಮಾಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 10 ಸಾವಿರ ರೂ. ತೆರಿಗೆ ಕಟ್ಟಬೇಕಾಗುತ್ತದೆ. ಕನಿಷ್ಟ ಡೀಸೆಲ್ ಮೇಲಿನ ತೆರಿಗೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಳಿಕೆ ಮಾಡಬೇಕು. ಈಗಾಗಲೇ ಹಲವಾರು ಬಾರಿ ಮನವಿ ಮಾಡಿದ್ದೇವೆ. ಸಾರಿಗೆ ಸಚಿವರಾದ ಶ್ರೀರಾಮುಲು, ಸಿಎಂ ಸಮಾಲೋಚನೆ ನಡೆಸಿ ಲಾರಿ ಮಾಲೀಕರ ನೆರವಿಗೆ ಬರಬೇಕು ಎಂದು ಮನವಿ ಮಾಡಿದ ಅವರು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ.

ಈ ಬಗ್ಗೆ ಎಲ್ಲ ಸಂಘಟನೆಗಳೊಂದಿಗೆ ಇದೇ 23ರಂದು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು. ಸರ್ಕಾರ ಲಾರಿಗಳವರನ್ನು ಎಟಿಎಂ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ. ಡೀಸೆಲ್ ದರ ಹೆಚ್ಚಳ ಮಾಡುವುದು, ತೆರಿಗೆ, ಟೋಲ್ ಹೆಚ್ಚಳ ಮಾಡುವುದು ಸೇರಿದಂತೆ ಎಲ್ಲ ರೀತಿಯಲ್ಲೂ ಸುಲಿಗೆ ಮಾಡಿದರೆ ಉದ್ಯಮ ನಡೆಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: News Kannada