ಬೆಂಗಳೂರು: 'ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 24 ಜನರ ಕುಟುಂಬಗಳಿಗೆ ಪರಿಹಾರ ಹೆಚ್ಚಿಸುವ ಸಂಬಂಧ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು' ಎಂದು ಹೈಕೋರ್ಟ್ ತಿಳಿಸಿದೆ.
'ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಬೇಕು ಎಂದು ವಿಚಾರಣೆ ವೇಳೆ ವಕೀಲರು ಮನವಿ ಮಾಡಿದಾಗ, ಈ ಬಗ್ಗೆ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುವುದು' ಎಂದು ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿತು.
ದುರಂತದ ಬಗ್ಗೆ ವರದಿ ಸಲ್ಲಿಸಿರುವ ಕಾನೂನು ಸೇವೆಗಳ ಪ್ರಾಧಿಕಾರದ ಮೂವರು ಸದಸ್ಯರ ಸಮಿತಿ, 'ಮೇ 2ರಿಂದ ಮೇ 10ರ ನಡುವೆ ಆಮ್ಲಜನಕ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದಾರೆ' ಎಂದು ಶಂಕಿಸಿದೆ.

