ಹೈದರಾಬಾದ್: ರಾಜಮೌಳಿ-ಪ್ರಭಾಸ್ ಕಾಂಬಿನೇಷನ್‌ನಲ್ಲಿ 2005 ರಲ್ಲಿ ತೆರೆಗೆ ಬಂದ ಮೊದಲ ಸಿನಿಮಾ 'ಛತ್ರಪತಿ' ಭಾರಿ ಹಿಟ್ ಆಗಿತ್ತು. ಹಲವು ದಾಖಲೆಗಳನ್ನು ಬರೆದ ಈ ಸಿನಿಮಾದ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ.
'ಛತ್ರಪತಿ' ಸಿನಿಮಾವನ್ನು ಕನ್ನಡದಲ್ಲಿಯೂ ರೀಮೇಕ್ ಮಾಡಲಾಯಿತಾದರೂ ಸಿನಿಮಾ ಇನ್ನಿಲ್ಲದಂತೆ ಸೋತಿತು. ಇದೀಗ 16 ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ರೀಮೇಕ್ ಆಗುತ್ತಿದೆ. ಹಿಂದಿ ಭಾಷೆಗೆ. ವಿಶೇಷವೆಂದರೆ ತೆಲುಗು ನಿರ್ದೇಶಕ, ನಾಯಕರೇ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದಾರೆ.
ತೆಲುಗಿನ ಖ್ಯಾತ ನಿರ್ದೇಶಕ ವಿವಿ ವಿನಾಯಕ್, 'ಛತ್ರಪತಿ' ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದು, ಬೆಲ್ಲಂಕೊಂಡ ಶ್ರೀನಿವಾಸ್ ನಾಯಕರಾಗಿ ನಟಿಸುತ್ತಿದ್ದಾರೆ. ಆ ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಮುನ್ನೇ 3 ಕೋಟಿ ನಷ್ಟ ಅನುಭವಿಸಿದೆ.
ಸಿನಿಮಾದ ಚಿತ್ರೀಕರಣಕ್ಕೆಂದು ಹೈದರಾಬಾದ್ ಬಳಿ ಸಿನಿಮಾಕ್ಕಾಗಿ ದೊಡ್ಡ ಹಳ್ಳಿಯ ಸೆಟ್ ಹಾಕಲಾಗಿತ್ತು. ಆದರೆ ಕೊರೊನಾ ಬಂದ ಕಾರಣ ಚಿತ್ರೀಕರಣ ಸ್ಥಗಿತವಾಗಿ ಸೆಟ್ ಹಾಗೆಯೇ ಇತ್ತು. ಆದರೆ ಇತ್ತೀಚೆಗೆ ತೆಲಂಗಾಣ, ಆಂಧ್ರಗಳಲ್ಲಿ ಭಾರಿ ಮಳೆ ಬಂದು 3 ಕೋಟಿ ಖರ್ಚು ಮಾಡಿ ಹಾಕಲಾಗಿದ್ದ ಸೆಟ್ ಹಾಳಾಗಿದೆ.
ರಾಮ್ ಚರಣ್ ತೇಜ ನಟಿಸಿದ್ದ 'ರಂಗಸ್ಥಳಂ' ಸಿನಿಮಾದ ಸೆಟ್ ಹಾಕಿದ್ದ ಜಾಗದಲ್ಲಿಯೇ ಹಿಂದಿ 'ಛತ್ರಪತಿ'ಗಾಗಿ ಸೆಟ್ ಹಾಕಲಾಗಿತ್ತು. ಆದರೆ ಈಗ ಸೆಟ್ ಸಂಪೂರ್ಣ ಹಾಳಾಗಿದ್ದು ಸಿನಿಮಾಕ್ಕಾಗಿ ಮತ್ತೆ ಹಾಕಬೇಕಿದೆ. ಸಿನಿಮಾ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಇದಕ್ಕೆ ತಯಾರಾಗಿದ್ದಾರೆ.
ನಿರ್ಮಾಪಕ ಬೆಲ್ಲಂಕೊಂಡ ಸುರೇಶ್, ತಮ್ಮ ಮಗ ಬೆಲ್ಲಂಕೊಂಡ ಶ್ರೀನಿವಾಸ್ ಅನ್ನು ಬಾಲಿವುಡ್‌ನಲ್ಲಿ ಲಾಂಚ್ ಮಾಡಲೆಂದೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬೆಲ್ಲಂಕೊಂಡ ಶ್ರೀನಿವಾಸ್ ಈಗಾಗಲೇ ತೆಲುಗಿನಲ್ಲಿ ಎಂಟು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ.

