Dailyhunt Logo
  • Light mode
    Follow system
    Dark mode
    • Play Story
    • App Story
ದೆಹಲಿಯ ಹೋಟೆಲ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ; 21 ಮಂದಿ ಮೃತ್ಯು!

ದೆಹಲಿಯ ಹೋಟೆಲ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ; 21 ಮಂದಿ ಮೃತ್ಯು!

ವದೆಹಲಿ: ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲೊಂದರಲ್ಲಿ ಬುಧವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ವಿದೇಶಿಯರು ಸೇರಿ 21 ಮಂದಿ ಪ್ರಾಣ ಕಳೆದುಕೊಂಡಿದ್ದು, 30ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಘಟನೆ ವೇಳೆ ಪ್ರಾಣ ಉಳಿಸಿಕೊಳ್ಳಲು ಕೆಲವರು ಕಟ್ಟಡದಿಂದ ಕೆಳಗೆ ಹಾರಿದ್ದಾರೆ ಎನ್ನಲಾಗಿದೆ.

ಬುಧವಾರ ಬೆಳಗ್ಗೆ 8.50 ರ ಸುಮಾರಿಗೆ ಹೋಟೆಲ್‌ನ ನೆಲಮಾಳಿಗೆಯಿಂದ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ದೆಹಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಕೆಲವೇ ನಿಮಿಷಗಳಲ್ಲಿ ಎರಡು ವಾಟರ್ ಎಂಜಿನ್‌ಗಳು, ಎರಡು ಬೌಸರ್‌ಗಳು ಮತ್ತು ಒಂದು ತ್ವರಿತ ಪ್ರತಿಕ್ರಿಯೆ ವಾಹನ ಸೇರಿದಂತೆ ಆಧುನಿಕ ರಕ್ಷಣಾ ಘಟಕಗಳು ಸ್ಥಳಕ್ಕೆ ಧಾವಿಸಿದವು. ಸಿಬ್ಬಂದಿಗಳು ಅತ್ಯಂತ ಶ್ರಮವಹಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

ಐದು ಅಂತಸ್ತಿನ ಈ ಹೋಟೆಲ್‌ನಲ್ಲಿ ಸುಮಾರು 25 ಕೊಠಡಿಗಳಿದ್ದು, ಅವಘಡದ ಸಮಯದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಹೋಟೆಲ್‌ನಲ್ಲಿದ್ದರು ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳಾಗಿದ್ದರು ಎಂದು ಹೇಳಲಾಗಿದೆ.

ಅಗ್ನಿಶಾಮಕ ದಳದೊಂದಿಗೆ ಸ್ಥಳೀಯ ನಿವಾಸಿಗಳು ಮತ್ತು ಹೋಟೆಲ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದು, ಹೋಟೆಲ್‌ನಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸುವಲ್ಲಿ ಸಹಾಯ ಮಾಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಗಾಯಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. ‘ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟಿರುವುದು ದುರಂತದ ಸಂಗತಿ.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ಮತ್ತು ಚಿಕಿತ್ಸೆಯನ್ನು ಒದಗಿಸಲು ಅಧಿಕಾರಿಗಳು ಸ್ಥಳದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಪಿಎಂ ಕಚೇರಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada