Dailyhunt Logo
  • Light mode
    Follow system
    Dark mode
    • Play Story
    • App Story
ದುಬೈಗೆ ತೆರಳುವ ಮುನ್ನವೇ ಮಾದಕ ಜಾಲದಲ್ಲಿ ಸಿಕ್ಕಿಬಿದ್ದ ಯುವಕ!

ದುಬೈಗೆ ತೆರಳುವ ಮುನ್ನವೇ ಮಾದಕ ಜಾಲದಲ್ಲಿ ಸಿಕ್ಕಿಬಿದ್ದ ಯುವಕ!

ಬೆಳ್ತಂಗಡಿ: ದುಬೈ ಉದ್ಯೋಗಕ್ಕಾಗಿ ತೆರಳಲು ಸಿದ್ಧತೆ ನಡೆಸಿದ್ದ ಯುವಕನೊಬ್ಬ ಗಾಂಜಾ ಹಾಗೂ ಎಂಡಿಎಂಎ ಮಾದಕ ವಸ್ತುಗಳ ಮಾರಾಟ ಯತ್ನದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸರಿಗೆ ಸಿಕ್ಕಿ ಬಿದ್ದು ನ್ಯಾಯಾಂಗ ಬಂಧನಕ್ಕೊಳಗಾದ ಘಟನೆ ನಡೆದಿದೆ.

ಜು. 29ರಂದು ರಾತ್ರಿ ಸುಮಾರು 8 ಗಂಟೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ್ ಎಂ. ನೇತೃತ್ವದ ತಂಡ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದ ಖಾಸಗಿ ಕಟ್ಟಡದ ಮುಂಭಾಗದಲ್ಲಿ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಾಹನವನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸಾರ್ (21) ಎಂದು ಗುರುತಿಸಲಾಗಿದೆ.

ಮತ್ತಷ್ಟು ವಿಚಾರಣೆಯಲ್ಲಿ, ಕುವೆಟ್ಟು ಗ್ರಾಮದ ಆಲಾದಿಕೊಟ್ಟಿಗೆ ನಿವಾಸಿ ಹಮ್ಜತ್ ಕರಾರ್ (31) ಎಂಬಾತನಿಗೆ 20 ಸಾವಿರ ರೂ. ಮುಂಗಡ ನೀಡಿ ಗಾಂಜಾ ಖರೀದಿಸಿದ್ದು, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ. ಹಮ್ಜತ್ ಕರಾರ್ ಕಾರಿನಲ್ಲಿ ಬಂದು 500 ಗ್ರಾಂ ಗಾಂಜಾವನ್ನು ನೀಡಿದ್ದು, ಪೊಲೀಸರು ಬರುತ್ತಿರುವುದನ್ನು ಗಮನಿಸಿ ಕಾರನ್ನು ಬಿಟ್ಟು ಪರಾರಿಯಾಗಿರುವುದಾಗಿ ಆತ ಹೇಳಿದ್ದಾನೆ.

ಪೊಲೀಸರು ಕಾರನ್ನು ಪರಿಶೀಲಿಸಿದಾಗ ಅದರೊಳಗೆ 7.60 ಲಕ್ಷ ರೂ.ಮೌಲ್ಯದ 76 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಅಲ್ಲದೆ ಆರೋಪಿ ತ್ವಲಹ್ ಬಳಿ 1,498 ರೂ. ಮೌಲ್ಯದ 20 ಗ್ರಾಂ ಗಾಂಜಾ, 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳು ಪತ್ತೆಯಾಗಿವೆ. ಒಟ್ಟು 15,41,698 ರೂ.ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಮ್ಜತ್ ಕರಾರ್ ಮತ್ತು ತ್ವಲಹ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತ ತ್ವಲಹ್ ನನ್ನು ಜು. 30ರಂದು ಮಂಗಳೂರು ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜು. 30ರ ಸಂಜೆ ದುಬೈಗೆ ಉದ್ಯೋಗಕ್ಕಾಗಿ ತೆರಳಲು ಸಿದ್ಧತೆ ನಡೆಸಿದ್ದ ತ್ವಲಹ್ ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದ ಪರಿಣಾಮ ವಿಮಾನ ಏರುವ ಬದಲು ಜೈಲು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ. ಕಾರ್ಯಾಚರಣೆಯನ್ನು ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಹಾಗೂ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಆನಂದ್ ಎಂ. ಮತ್ತು ಸಿಕಂದರ್ ಪಾಷ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸತೀಶ್ ನಾಯ್ಕ್, ಪ್ರಕಾಶ್ ಪೂಜಾರಿ, ಶ್ರೀನಿವಾಸ್, ಹನುಮಂತ, ನಂದ, ಜಗದೀಶ್ ಅತ್ತಾಜೆ, ಪ್ರಮೋದ್, ದುಂಡಪ್ಪ ಪೂಜಾರಿ, ಚಾಲಕ ಸತೀಶ್ ಹಾಗೂ ಸೋಕೋ ತಂಡದ ಕಾವ್ಯಶ್ರೀ ಮತ್ತು ಅರ್ಪಿತಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: News Kannada