Dailyhunt Logo
  • Light mode
    Follow system
    Dark mode
    • Play Story
    • App Story
ಜೈಲಿನಿಂದ ತವರಿನವರೆಗೆ, ನಂಜನಗೂಡು ಕರುಣಾಲಯದ ಮಾನವೀಯತೆ.!

ಜೈಲಿನಿಂದ ತವರಿನವರೆಗೆ, ನಂಜನಗೂಡು ಕರುಣಾಲಯದ ಮಾನವೀಯತೆ.!

ನಂಜನಗೂಡು : ಮಾನಸಿಕ ಅಸ್ವಸ್ಥತೆಯಿಂದಾಗಿ ಕುಟುಂಬದಿಂದ ದೂರವಾಗಿ, ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ಬಿಹಾರ ರಾಜ್ಯದ ವ್ಯಕ್ತಿಯೋರ್ವ ಸುಮಾರು ಎರಡೂವರೆ ವರ್ಷಗಳ ನಿರಂತರ ಚಿಕಿತ್ಸೆ ಮತ್ತು ಮಾನವೀಯ ಕಾಳಜಿಯ ಆರೈಕೆಯಿಂದಾಗಿ ಗುಣಮುಖರಾಗಿ ಬಳಿಕ ತನ್ನ ಕುಟುಂಬದ ಸದಸ್ಯರ ಮಡಿಲಿಗೆ ಮರಳಿರುವ ಹೃದಯಸ್ಪರ್ಶಿ ಘಟನೆ ನಂಜನಗೂಡಿನ ಕರುಣಾಲಯ ಅನಾಥರ ಆಶ್ರಯ ಧಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯ ಕೊತ್ತನೂರು ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾನೆ ಹಾಗೂ ಕಳ್ಳತನದ ಉದ್ದೇಶದಿಂದ ಅರಣ್ಯಕ್ಕೆ ಬಂದಿದ್ದಾನೆ ಎಂಬ ಆರೋಪದಲ್ಲಿ ಬಂಧಿಯಾಗಿ ಜೈಲು ಸೇರಿದ್ದ ಶಂಕರ್‌ಲಾಲ್ ಅಲಿಯಾಸ್ ಮುನೇಶ್ವರ (52) ಅವರನ್ನು 2024ರ ಜನವರಿ 18 ರಂದು ತಾಲೂಕಿನ ಸಿಂಧುವಳ್ಳಿಯಲ್ಲಿರುವ ಕರುಣಾಲಯ ಮಾನಸಿಕ ಅಸ್ವಸ್ಥರ ಉಚಿತ ಆಶ್ರಯ ತಾಣಕ್ಕೆ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆಗಾಗಿ ದಾಖಲಿಸಲಾಗಿತ್ತು.

ಈ ವೇಳೆ ಮುನೇಶ್ವರ ಮಾನಸಿಕ ರೋಗದಿಂದ ಬಳಲುತ್ತಿದ್ದು ಆತನ ಯಾವುದೇ ಹಿನ್ನಲೆಯ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಇನ್ನು ಕರುಣಾಲಯ ಆಸ್ಪತ್ರೆಯಲ್ಲಿ ಪ್ರೀತಿ ಮತ್ತು ಮಾನವೀಯ ಕಾಳಜಿಯೊಂದಿಗೆ ದೊರೆತ ನಿರಂತರ ಆರೈಕೆ, ಸಮಾಲೋಚನೆ ಮತ್ತು ಔಷಧೋಪಚಾರದಿಂದ ಚೇತರಿಸಿಕೊಂಡಿದ್ದಲ್ಲದೆ ಆತನ ಮೇಲಿದ್ದ ಮೊಕದ್ದಮೆಯಿಂದಲೂ ಬಿಡುಗಡೆಗೊಂಡು ಕ್ರಮೇಣ ಆರೋಗ್ಯದಲ್ಲಿ ಸುಧಾರಣೆಯಾಗಿದ್ದಾನೆ.

ಇನ್ನು ಭೋಜಪುರಿ ಮಾತೃ ಭಾಷೆಯ ಮುನೇಶ್ವರ ಇದೇ ವರ್ಷದ ಜನವರಿಯಿಂದಲೂ ತನ್ನ ಊರು ಹಾಗೂ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ನೀಡುತ್ತಿದ್ದರೂ ಭಾಷಾ ಸಂವಹನದ ಕೊರತೆಯಿಂದಾಗಿ ಆತನ ಕುಟುಂಬದ ಸದಸ್ಯರನ್ನು ಹುಡುಕಲು ಸಾಧ್ಯವಾಗಿರಲಿಲ್ಲ ಹೀಗಾಗಿ ಆತನೊಂದಿಗೆ ಸಂವಹನ ನಡೆಸಿರುವ ವಿಡಿಯೋ ದೃಶ್ಯಾವಳಿಗಳನ್ನು ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಎನ್‌ಜಿಒ ಸಂಸ್ಥೆಗಳ ಜೊತೆ ಹಂಚಿಕೊಳ್ಳಲಾಯಿತು.

ಕೆಲ ದಿನಗಳ ಬಳಿಕ ಆತ ಬಿಹಾರ ರಾಜ್ಯದ ಚಂಪಾರಣ್ ಜಿಲ್ಲೆಯ ನರ್ಕಟಿಯಾಗಂಜ್ ಬಳಿ ಇರುವ ಬೆಲ್ವಾ ಎಂಬ ಹಳ್ಳಿಯೊಂದರ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ ಅನಂತರ ಕರುಣಾಲಯ ಸಂಸ್ಥೆಯವರಿಗೆ ಸೇರಿದ ಬಿಹಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ಸಂಸ್ಥೆ ಸಹಕಾರ ಪಡೆದುಕೊಂಡು ಮುನೇಶ್ವರ ಅವರ ಕುಟುಂಬದವರನ್ನು ಸಂಪರ್ಕಿಸಿ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿ ಕುಟುಂಬದ ಸದಸ್ಯರ ಇರುವಿಕೆಯನ್ನು ಖಚಿತ ಪಡಿಸಿಕೊಳ್ಳಲಾಗಿದೆ.

ಈ ವೇಳೆ ಕುಟುಂಬದ ಸದಸ್ಯರು ಮುನೇಶ್ವರ ಅವಿವಾಹಿತನಾಗಿದ್ದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 8 ವರ್ಷದ ಹಿಂದೆ ಏಕಾಏಕಿ ಕಾಣೆಯಾಗಿದ್ದು, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಸುಧೀರ್ಘ ಅವಧಿಯ ಬಳಿಕ ಕುಟುಂಬದ ಸದಸ್ಯ ಸಿಕ್ಕಿರುವುದರಿಂದ ಆತನ ಬಂಧುಗಳು ಅತೀವ ಸಂತಸಗೊಂಡಿದ್ದರು ಇನ್ನು ಮುನೇಶ್ವರ ಸಹಾ ತನ್ನ ಕುಟುಂಬದ ಸದಸ್ಯರನ್ನು ಕೂಡಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದರು.

ಇನ್ನು ಮುನೇಶ್ವರ ಅವರ ಕುಟುಂಬದವರು ಅವರನ್ನು ಮರಳಿ ತಮ್ಮೊಂದಿಗೆ ಕರೆದುಕೊಂಡು ಹೋಗಲು ಸಿದ್ಧರಾಗಿದ್ದರೂ, ಭಾಷಾ ಸಂವಹನದ ಕೊರತೆ ಹಾಗೂ ದೂರದ ಕಾರಣದಿಂದಾಗಿ ಮೈಸೂರಿಗೆ ಬರಲು ಪರದಾಡುತ್ತಿದ್ದರು ಹೀಗಾಗಿ ಮುನೇಶ್ವರ ಕುಟುಂಬದ ಮನವಿಯನ್ನು ಗೌರವಿಸಿ, ಕರುಣಾಲಯದ ಸ್ಪಂದನಾ ಸಂಸ್ಥೆಯ ಸಿಸ್ಟರ್ ಮೇಬಲ್ ಮತ್ತು ಸಿಬ್ಬಂದಿ ಪವನ್ ನೇತೃತ್ವದ ತಂಡ ಮುನೇಶ್ವರ ಅವರನ್ನು ರೈಲಿನಲ್ಲಿ ಕರೊದೊಯ್ದಿದ್ದಲ್ಲದೆ ಶನಿವಾರ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

8 ವರ್ಷಗಳ ಬಳಿಕ ಮನೆಗೆ ಆಗಮಿಸಿದ ಮುನೇಶ್ವರ ಅವರನ್ನು ಕುಟುಂಬದ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ ಇತ್ತ ತಮ್ಮವರನ್ನು ಕಂಡ ಸಂತಸ ಮುನೇಶ್ವರ ಅವರದ್ದಾಗಿತ್ತು ಒಟ್ಟಾರೆ ಕರುಣಾಲಯ ಸಂಸ್ಥೆಯ ಪ್ರಯತ್ನ ಸಾರ್ಥಕತೆ ಕಂಡುಕೊಂಡಿತ್ತು.

Dailyhunt
Disclaimer: This content has not been generated, created or edited by Dailyhunt. Publisher: News Kannada