Wednesday, 28 Oct, 2.37 pm ನ್ಯೂಸ್ ಕನ್ನಡ

ಹೋಂ
ಕೃಷಿಕರಿಗೆ ವರದಾನ ಈ ನಾರಾಯಣ ಬೆಡಿ!

ಬೆಳ್ತಂಗಡಿ: ಕೃಷಿಕರಿಗೆ ವನ್ಯಜೀವಿಗಳಿಂದಾಗುವ ಉಪಟಳ ಹೇಳತೀರದು. ಅದರಲ್ಲೂ ವಾನರ ಕಾಟ ಹಲವಾರು ವರ್ಷಗಳಿಂದ ಇದೆ. ವರ್ಷಕ್ಕೆ ಲಕ್ಷಾಂತರ ರೂ.ಗಳ ಕೃಷಿ ಉತ್ಪನ್ನ ಕಾಡುಪ್ರಾಣಿಗಳ ಪಾಲಾಗುತ್ತಿದ್ದು ಏನೂ ಮಾಡಲಾಗದೆ ಕೈ ಕೈ ಹಿಸುಕಿಕೊಳ್ಳುವಂತಹ ಸ್ಥಿತಿ ರೈತರದ್ದು.

ಮಂಗಗಳ ಕಾಟಕ್ಕೆ ತೋಟೆ, ಕೇಪುಗಳ ಕೋವಿ ಇದ್ದರೂ ಉಪಯೋಗಿಸಲಾಗದಂತ ಸನ್ನಿವೇಶ. ಯಾಕೆಂದರೆ ವನ್ಯಜೀವಿ ರಕ್ಷಣಾ ಕಾಯಿದೆಯಿಂದಾಗಿ ಯಾವುದೇ ಕಾಡುಪ್ರಾಣಿಗಳನ್ನು ಕೊಲ್ಲುವುದು ಅಪರಾಧ. ಆದರೂ ಕೆಲವರು ಮಂಗಗಳಿವೆ ವಿಷ ಇಡುವುದು, ಗುಂಡು-ಕೋವಿಯ ಮೂಲಕ ಸಾಯಿಸುವುದನ್ನು ಆಗ್ಗಾಗ್ಗೆ ಕೇಳುತ್ತಿರುತ್ತೇವೆ. ಮಂಗಗಳನ್ನು ಹಿಡಿದು ದೂರದ ಪ್ರದೇಶಕ್ಕೆ ಸಾಗಿಸುವ ಪ್ರಯತ್ನಕ್ಕೆ ಮಂಗಗಳೇ ಸಹಕಾರ ನೀಡದಿರುವುದು ಇತೀಚಿನ ವಿದ್ಯಮಾನ.

ಇಲ್ಲೊಬ್ಬರು ಮಂಗಗಳನ್ನು ಸಾಯಿಸದೆ ಅವುಗಳು ಕೃಷಿ ಪ್ರದೇಶಕ್ಕೆ ಬರದಂತೆ ಮಾಡಲು ನಕಲಿ ಕೋವಿಯೊಂದನ್ನು ತಯಾರಿಸಿ ಕೃಷಿಕರ ಮನಗೆದ್ದಿದ್ದಾರೆ. ಈ ರೀತಿಯ ಪ್ರಯತ್ನವನ್ನು ಹಲವಾರು ಮಂದಿ ಮಾಡಿದ್ದರೂ ಸುಲ್ಕೇರಿಯ ನಾರಾಯಣ ಪೂಜಾರಿ ಅವರು ಮಾಡಿರುವ ಕೋವಿ ಮಾತ್ರ ಯಶಸ್ವಿಯಾಗಿರುವುದು ಗಮನಾರ್ಹ. ಕೇವಲ 800 ರೂ.ಗಳಿಗೆ ಸಿಗುವ ಇವರ ಕೋವಿ ಈಗ ಭಾರೀ ಬೇಡಿಕೆ ಕಂಡಿದೆ. ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ ಶೃಂಗೇರಿ, ಉಡುಪಿ, ಸುಳ್ಯ, ಪುತ್ತೂರು, ಸುಬ್ರಹ್ಮಣ್ಯ, ಬೆಳ್ಳಾರೆಯಲ್ಲೂ ಬೇಡಿಕೆ ಪಡೆದಿದೆ. ಲಾಕ್‍ಡೌನ್ ಮೊದಲು ಸುಮಾರು 300 ಕೋವಿಗಳನ್ನು ಮಾರಾಟ ಮಾಡಿರುವ ಇವರು ಬಳಿಕ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಕೋವಿಗಳನ್ನು ಗ್ರಾಹಕ ಕೃಷಿಕರಿಗೆ ಒದಗಿಸಿಕೊಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಅಳದಂಗಡಿಯಿಂದ ಸುಮಾರು 4. ಕೀ.ಮೀ ಅಂತರದಲ್ಲಿರುವ ಸುಲ್ಕೇರಿಯಲ್ಲಿ ರಾಜ್ಯ ಹೆದ್ದಾರಿ ಸನಿಹ ಸುವರ್ಣ ಇಂಜಿನಿಯರಿಂಗ್ ವಕ್ರ್ಸ್ ಎಂಬ ಉದ್ಯಮವನ್ನು ನಡೆಸುತ್ತಿರುವ ತರುಣ, ಉತ್ಸಾಹಿ ಯುವಕ ನಾರಾಯಣ ಅವರು, ಮಂಗಗಳನ್ನು ಹೊಡೆದೋಡಿಸುವ ಅನೇಕ ಕೋವಿಗಳನ್ನು ನೋಡಿ, ಅವೆಲ್ಲಾ ವಿಫಲವಾದದ್ದನ್ನು ನೋಡಿದ್ದರು. ಬಳಿಕ ಅವರಿಗೆ ಅದೇ ಮಾದರಿ ಹೊಸ ವಿಧಾನದಲ್ಲಿ ಮಾಡಬೇಕೆಂಬ ಕಲ್ಪನೆ ಮೂಡಿತು. ಅವರ ಯೋಚನೆ ಕಾರ್ಯರೂಪಕ್ಕೆ ಬಂದು ಯಶಸ್ವಿಯೂ ಆಯಿತು. ಗುರು ರಮೇಶ್ ಅವರ ಮಾರ್ಗದರ್ಶನವನ್ನೂ ಪಡೆದರು. ಉತ್ತಮ ಗುಣಮಟ್ಟದ, ದಪ್ಪದ ಎರಡೂವರೆ ಅಡಿಯ ಕಬ್ಬಿಣದ ಕೊಳವೆ (ನಳಿಗೆ)ಗೆ ಒಂದು ತುದಿಯಲ್ಲಿ ತ್ರೆಡ್‍ನ್ನು ಮಾಡಿದ್ದಾರೆ. ಅದನ್ನು ಎಮ್‍ಎಸ್ ಕಪ್ಲಿಂಗ್‍ಗೆ ಜೋಡಿಸಲಾಗುತ್ತದೆ. ಜೋಡಿಸುವ ಮೊದಲು ದೀಪಾವಳಿಯ ಆಟಂಬಾಂಬ್‍ನ್ನು ಅದರೊಳಗೆ ಇಡಲಾಗುತ್ತದೆ. ಅದರ ಬತ್ತಿ ಹೊರಗೆ ಬರಲು ಕಪ್ಲಿಂಗ್‍ನಲ್ಲಿ ಬತ್ತಿಯಷ್ಟೇ ಸಪೂರವಾದ ತೂತನ್ನು ಮಾಡಲಾಗಿರುತ್ತದೆ. ಬಳಿಕ ಇನ್ನೊಂದು ತುದಿಯಲ್ಲಿ ಒಂದು ಮುಷ್ಟಿಯಷ್ಟು ದೊಡ್ಡಕಡ್ಲೆಯಷ್ಟು ಗಾತ್ರದ ಕಲ್ಲುಗಳನ್ನು ಹಾಕಬೇಕಾಗುತ್ತದೆ. ಬಳಿಕ ಸಿಗಾರ್‍ಲೈಟಿನಿಂದ ಬತ್ತಿಗೆ ಬೆಂಕಿಕೊಟ್ಟು ಕ್ಷಣದಲ್ಲೇ ಮಂಗಗಳ ಹಿಂಡಿನಕಡೆಗೆ ಕೋವಿಯನ್ನು ಹಿಡಿಯಬೇಕಾಗುತ್ತದೆ. ಬಾಂಬ್‍ನ ಆರ್ಭಟಕ್ಕೆ ಕಲ್ಲುಗಳೆಲ್ಲಾ ಸುಮಾರು ನೂರರಿಂದ ನೂರೈವತ್ತು ಅಡಿ ಎತ್ತರದ ತನಕ ಸಿಡಿಯುವುದನ್ನು ನೋಡಬಹುದಾಗಿದೆ. ಕೆಲವರು ಅಪಾಯಕಾರಿ ನಕಲಿ ಕೋವಿಗಳನ್ನು 2,500 ದಿಂದ 3000 ರೂ.ಗಳವರೆಗೆ ಮಾರಾಟಮಾಡುತ್ತಿರುವ ಸಂದರ್ಭದಲ್ಲಿ ನಾರಾಯಣರ ಬೆಡಿ ವಿಶ್ವಾಸಾರ್ಹವಾಗಿದೆ. ಖರೀದಿಸಿದವರಿಗೆ ಒಂದಷ್ಟು ಬಾಂಬ್‍ಗಳನ್ನು ಉಚಿತವಾಗಿ ನೀಡುತ್ತಾರೆ.

ನಳಿಗೆಯ ಒಂದು ತುದಿಗೆ ಜಿಐಪೈಪ್‍ನ್ನು ಜೋಡಿಸಿ ಅದಕ್ಕೆ ಟ್ರಿಗ್ಗರ್‍ ನ್ನು ಇಟ್ಟಿದ್ದಾರೆ. ಇದರ ಉಪಯೋಗ ಇಲ್ಲದಿದ್ದರೂ ಕೋವಿಯಂತೆ ಕಾಣಲು ಮಾತ್ರ ರಚಿಸಲಾಗಿದೆ. ನಕಲಿ ಕೋವಿ ಒಟ್ಟು ಮೂರುವರೆ ಅಡಿ ಉದ್ದ ಇದ್ದು ಸುಮಾರು ಒಂದೂವರೆ ಕೆ.ಜಿ.ಯಷ್ಟು ಭಾರವಿದೆ.

" ಕಳೆದ ಒಂದು ವರ್ಷದಿಂದ ಕೋವಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾ ಬಂದಿದ್ದೇನೆ. ಇದುವರೆಗೆ ಯಾರಿಗೂ ಯಾವುದೇ ತರಹದ ಅಪಾಯವಿಲ್ಲ. ಕೋವಿಗೆ ಗ್ಯಾರಂಟಿ ಕೊಡುತ್ತೇನೆ. ಪ್ರಾತ್ಯಕ್ಷಿಕೆ ಮಾಡಿ ಸರಿಯಾಗಿ ವಿವರಿಸಿಯೇ ಗ್ರಾಹಕರಿಗೆ ನೀಡುತ್ತೇನೆ. ಕೋವಿ ಖರೀದಿಸಿದವರು ಮಂಗಳಕಾಟದಿಂದ ಮುಕ್ತಿಯಾಗಿರುವುದನ್ನು ದೂರವಾಣಿ ಮೂಲಕ ವಿವರಿಸುವಾಗ ಖುಷಿಯಾಗುತ್ತದೆ ಎನ್ನುತ್ತಾರೆ ಸುಲ್ಕೇರಿ ಗ್ರಾ.ಪಂ.ನ ನಿಕಟಪೂರ್ವ ಸದಸ್ಯರೂ ಅಗಿರುವ ನಾರಾಯಣ ಪೂಜಾರಿ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Kannada
Top