ಕೊಪ್ಪಳ: ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.
ಗಂಗಾವತಿಯ ಪ್ರಶಾಂತನಗರದ ಮನೆಯಲ್ಲಿ ಪತಿ, ಪತ್ನಿ ಹಾಗೂ ಮಗ ನೇಣಿಗೆ ಶರಣಾಗಿದ್ದಾರೆ. ಮೃತರನ್ನು ಪ್ರಕಾಶ್ ರಾಯ್ಕರ್ (54), ಪ್ರಭಾ(46) ಹಾಗೂ ಶಶಾಂಕ್ (21) ಎಂದು ಗುರುತಿಸಲಾಗಿದೆ.
ಪ್ರಕಾಶ್ ರಾಯ್ಕರ್ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದರು. ಸಾಲಬಾಧೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಗಂಗಾವತಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಈ ಕುರಿತು ಎಸ್ಪಿ ಡಾ.ರಾಮ್ ಅರಸಿದ್ದಿ ಮಾತನಾಡಿ, ಆತ್ಮಹತ್ಯೆಗೆ ಸಾಲ ಬಾಧೆಯೇ ಪ್ರಮುಖ ಕಾರಣ. ಮಾನ್ವಿ ಬ್ಯಾಂಕ್ ಮನೆ ಸೀಜ್ ಮಾಡಿತ್ತು. ಸೀಜ್ ಆದ ಮನೆಯಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಮನೆ ಸೀಜ್ ಆಗಿತ್ತು. ಮನೆಯ ಹಿಂಬದಿಯಿಂದ ಮನೆ ಪ್ರವೇಶ ಮಾಡಿ ಮೂವರು ನೇಣಿಗೆ ಶರಣಾಗಿದ್ದಾರೆ ಎಂದರು.
ಪ್ರಕಾಶ್ ರಾಯ್ಕರ್ ಮಾನ್ವಿ ಪಟ್ಟಣ ಬ್ಯಾಂಕ್‌ನಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲದ ಹಿನ್ನೆಲೆಯಲ್ಲಿ ಮಾರಿದ್ದ ಮನೆಯಲ್ಲಿಯೇ ಪ್ರಕಾಶ್ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಮಾರಿದ್ದ ಮನೆಯ ಹಿಂದಿನ ಬಾಗಿಲು ಒಡೆದು ಒಳಗಡೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ ಸಾಲದ ಹಿನ್ನೆಲೆಯಲ್ಲಿ ನಾಗರಾಜ ಎಂಬವರಿಗೆ ಪ್ರಕಾಶ್ ಮನೆ ಮಾರಿದ್ದರು. ಕಳೆದ ಫೆಬ್ರವರಿವರೆಗೂ ಪ್ರಕಾಶ್ ರಾಯ್ಕರ್ ಕುಟುಂಬ ಮಾರಿದ್ದ ಮನೆಯಲ್ಲಿಯೇ ಇದ್ದರು.
ಮನೆ ಖರೀದಿಸಿದ್ದ ನಾಗರಾಜ ಸಹ ಮಾನ್ವಿ ಬ್ಯಾಂಕ್‌ನಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸದ ಹಿನ್ನೆಲೆಯಲ್ಲಿ ಮನೆಯನ್ನು ಮಾನ್ವಿ ಪಟ್ಟಣ ಬ್ಯಾಂಕ್‌ನವರು ನಾಗರಾಜ್ ಮನೆ ಸೀಜ್ ಮಾಡಿದ್ದರು. ಪ್ರಕಾಶ್ ರಾಯ್ಕರ್ ಅವರದ್ದು ಕೋಟಿಗಟ್ಟಲೆ ಸಾಲ ಇದೆ ಎನ್ನಲಾಗಿದೆ.
ಪ್ರಕಾಶ್ ಅನೇಕ ಕಡೆ ಪ್ರಾರ್ಪಟಿ ಖರೀದಿ ಮಾಡಿ ಅವುಗಳನ್ನು ಮಾರಾಟ ಮಾಡಿದ್ದಾರೆ. ಪ್ರಕಾಶ್ ರಿಯಲ್ ಎಸ್ಟೇಟ್ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಗೊತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ಪ್ರಕಾಶ್ ರಾಯ್ಕರ್ ಸಹೋದರ ದೂರು ನೀಡುತ್ತಾರೆ. ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದು ಎಸ್ಪಿ ತಿಳಿಸಿದ್ದಾರೆ.

