Dailyhunt Logo
  • Light mode
    Follow system
    Dark mode
    • Play Story
    • App Story
ಓವರ್ ಟೇಕ್ ವಿಚಾರಕ್ಕೆ ಕಿರಿಕ್; ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಕಾರು ತಡೆದು ಹಲ್ಲೆ!

ಓವರ್ ಟೇಕ್ ವಿಚಾರಕ್ಕೆ ಕಿರಿಕ್; ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಕಾರು ತಡೆದು ಹಲ್ಲೆ!

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಟುಂಬವೊಂದರ ಮೇಲೆ ಪುಂಡರ ಗುಂಪೊಂದು ಮನಸ್ಸೋ ಇಚ್ಛೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜುಲೈ 5ರ ರಾತ್ರಿ ನಡೆದಿದೆ.

ಓವರ್ ಟೇಕ್ ಮಾಡುವ ಸಣ್ಣ ವಿಚಾರಕ್ಕೆ ಶುರುವಾದ ಕಿರಿಕ್, ಇಡೀ ಕುಟುಂಬದ ಮೇಲೆ ಹಲ್ಲೆ ಮಾಡುವ ಮಟ್ಟಿಗೆ ಹೋಗಿದ್ದು, ಈ ಭೀಕರ ದೃಶ್ಯ ಹಿಂಬದಿಯ ಕಾರುವೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು ಮೂಲದ ಸಾಗರ್ ಎಂಬುವವರು ತಮ್ಮ ಹೆಂಡತಿ, ಮಕ್ಕಳು ಹಾಗೂ ತಾಯಿಯೊಂದಿಗೆ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಶ್ರೀರಂಗಪಟ್ಟಣದ ಸರ್ವಿಸ್ ರಸ್ತೆಯಲ್ಲಿ ಸಾಗುತ್ತಿದ್ದಾಗ ಓವರ್‌ಟೇಕ್ ಮಾಡುವ ವಿಚಾರದಲ್ಲಿ ಪುಂಡರ ಗುಂಪೊಂದು ಇವರ ಜೊತೆ ಕಿರಿಕ್ ತೆಗೆದಿದೆ.

ಆ ಸಮಯದಲ್ಲಿ ಸಾಗರ್ ಕುಟುಂಬ ಅಲ್ಲಿಂದ ಮುಂದೆ ಸಾಗಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಆ ಪುಂಡರ ಗುಂಪು ಎರಡು ಕಾರುಗಳಲ್ಲಿ ಸಾಗರ್ ಅವರ ಕಾರನ್ನು ಬೆನ್ನಟ್ಟಿಕೊಂಡು ಬಂದಿದೆ. ಮದ್ದೂರಿನ ಎಕ್ಸ್‌ಪ್ರೆಸ್‌ ವೇ ಫ್ಲೈಓವರ್ ತಲುಪುತ್ತಿದ್ದಂತೆ, ಸಿನಿಮಾ ಶೈಲಿಯಲ್ಲಿ ಸಾಗರ್ ಅವರ ಕಾರನ್ನು ಅಡ್ಡಗಟ್ಟಿದೆ. ಕಾರ್ ಅಡ್ಡಗಟ್ಟಿದ ಪುಂಡರು ತಕ್ಷಣ ಸಾಗರ್ ಅವರ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಸಾಗರ್ ಅವರ ತಲೆಗೆ ಜಾಕ್ ರಾಡ್‌ನಿಂದ ಜೋರಾಗಿ ಹೊಡೆದಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಹೆಂಡತಿ ಮತ್ತು ತಾಯಿ ಏನೂ ಮಾಡಬೇಡಿ ಎಂದು ಕೈಮುಗಿದರೂ ಪುಂಡರ ಕ್ರೌರ್ಯ ಕಮ್ಮಿಯಾಗಿಲ್ಲ. ಇನ್ನು ತಂದೆಯನ್ನು ಹೊಡೆಯಬೇಡಿ ಎಂದು ಅಳುತ್ತಾ ಅಡ್ಡಬಂದ 8 ವರ್ಷದ ಮಗುವಿನ ಕೈಯನ್ನು ಪುಂಡರು ಕ್ರೂರವಾಗಿ ತಿರುಚಿದ್ದಾರೆ. ಬಳಿಕ ಘಟನೆ ನಡೆಯುತ್ತಿರುವ ವಿಷಯ ತಿಳಿದ ಮದ್ದೂರು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಪುಂಡರ ಕೈಯಿಂದ ಸಾಗರ್ ಕುಟುಂಬವನ್ನು ರಕ್ಷಿಸಿದ್ದಾರೆ.

ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪುಂಡರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ. ಮಂಡ್ಯ ಬಳಿಯ ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಸರಣಿ ಅಪರಾಧಗಳು ನಡೆಯುತ್ತಿರುವುದು ಸಾರ್ವಜನಿಕರನ್ನು ಇದೀಗ ಬೆಚ್ಚಿಬೀಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada