Dailyhunt Logo
  • Light mode
    Follow system
    Dark mode
    • Play Story
    • App Story
ಪರಿಸರ ಸ್ನೇಹಿ ಗಣಪತಿಗೆ ಆದ್ಯತೆ - ಆದರೆ ಮೂರ್ತಿ ತಯಾರಕರಿಗೆ ವ್ಯಾಪಾರ ಮಂದಗತಿ

ಪರಿಸರ ಸ್ನೇಹಿ ಗಣಪತಿಗೆ ಆದ್ಯತೆ - ಆದರೆ ಮೂರ್ತಿ ತಯಾರಕರಿಗೆ ವ್ಯಾಪಾರ ಮಂದಗತಿ

ನಂಜನಗೂಡು: ಗೌರಿ-ಗಣೇಶ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ, ನಂಜನಗೂಡಿನಲ್ಲಿ ಗಣೇಶ ಮೂರ್ತಿಗಳ ಖರೀದಿ ಭರಾಟೆ ಜೋರಾಗಿದೆ. ನಗರದ ವಿವಿಧೆಡೆ ಮೂರ್ತಿಗಳ ಮಾರಾಟ ನಡೆಯುತ್ತಿದ್ದು, ಭಕ್ತರು ತಮ್ಮ ಇಷ್ಟದ ಗಣಪತಿ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ.

ಇದರ ನಡುವೆ ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯಲ್ಲಿರುವ ಕಲಾವಿದ ಶಿವಕುಮಾರ್ ಕುಟುಂಬ ತಲೆತಲಾಂತರಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿಯೂ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ವಿಶೇಷವಾಗಿ ತಯಾರಿಸಿದೆ.

ಶಿವಕುಮಾರ್ ಕುಟುಂಬದವರು ತಾತ-ಮುತ್ತಾತನ ಕಾಲದಿಂದಲೂ ಗಣೇಶ ಮೂರ್ತಿಗಳನ್ನು ತಯಾರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವರ್ಷಪೂರ್ತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗುವ ಕುಟುಂಬ, ಹಬ್ಬದ ಸಮಯದಲ್ಲಿ ತಮ್ಮ ಶ್ರಮಕ್ಕೆ ತಕ್ಕ ವ್ಯಾಪಾರ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿರುತ್ತದೆ.

ಈ ಬಾರಿ ಭಕ್ತರ ಗಮನ ಸೆಳೆಯುವಂತೆ ಶಿವನ ರೂಪದ ಗಣೇಶ, ಗಜರೂಪದ ಕಿವಿಗಳನ್ನು ಹೊಂದಿರುವ ಗಣೇಶ ಹಾಗೂ ಮುದ್ದಾದ ಪುಟ್ಟ ಪಾಪುವಿನೊಂದಿಗೆ ಇರುವ ಗಣೇಶ ಸೇರಿದಂತೆ ಹಲವು ವಿಶೇಷ ವಿನ್ಯಾಸದ ಮೂರ್ತಿಗಳನ್ನು ತಯಾರಿಸಲಾಗಿದೆ.

ಆದರೆ, ವಿಶೇಷ ವಿನ್ಯಾಸ ಹಾಗೂ ಪರಿಸರ ಸ್ನೇಹಿ ಮೂರ್ತಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಈ ಬಾರಿ ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬುದು ಮೂರ್ತಿ ತಯಾರಕರ ಬೇಸರವಾಗಿದೆ.

"ಒಂದು ವರ್ಷಗಳ ಕಾಲ ಶ್ರಮಪಟ್ಟು ಗಣೇಶನ ಮೂರ್ತಿಗಳನ್ನು ತಯಾರಿಸುತ್ತೇವೆ. ಈ ಬಾರಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಜನರು ನಿರೀಕ್ಷಿತ ಪ್ರಮಾಣದಲ್ಲಿ ಮೂರ್ತಿಗಳನ್ನು ಖರೀದಿಸುತ್ತಿಲ್ಲ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವ್ಯಾಪಾರ ತುಂಬಾ ಕಡಿಮೆಯಾಗಿದೆ" ಎಂದು ಮೂರ್ತಿ ತಯಾರಕರಾದ ಯೋಗೇಶ್ ಹಾಗೂ ಸಂಗೀತ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಂಜನಗೂಡಿನಲ್ಲಿ ತಯಾರಾಗುವ ಗಣೇಶ ಮೂರ್ತಿಗಳಿಗೆ ಸ್ಥಳೀಯವಾಗಿ ಮಾತ್ರವಲ್ಲದೆ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರಿನ ಭಾಗಗಳಿಂದಲೂ ಬೇಡಿಕೆ ಇದೆ. ಹೀಗಾಗಿ ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಹಬ್ಬದ ಸಂಭ್ರಮದ ನಡುವೆ, ಕಲಾವಿದರ ಒಂದು ವರ್ಷದ ಶ್ರಮಕ್ಕೆ ಸೂಕ್ತ ಬೆಲೆ ಹಾಗೂ ಪ್ರೋತ್ಸಾಹ ದೊರೆಯಬೇಕು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಿಗೆ ಜನರು ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಮೂರ್ತಿ ತಯಾರಕರ ಆಶಯವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada