Dailyhunt Logo
  • Light mode
    Follow system
    Dark mode
    • Play Story
    • App Story
ಸಿನಿಮಾ, ವೆಬ್‌ಸಿರೀಸ್‌ಗಳ ಪೈರಸಿ ತಡೆಯುವ ಉದ್ದೇಶದಿಂದ ಟೆಲಿಗ್ರಾಂಗೆ ನೋಟಿಸ್ ನೀಡಿದ ಕೇಂದ್ರ!

ಸಿನಿಮಾ, ವೆಬ್‌ಸಿರೀಸ್‌ಗಳ ಪೈರಸಿ ತಡೆಯುವ ಉದ್ದೇಶದಿಂದ ಟೆಲಿಗ್ರಾಂಗೆ ನೋಟಿಸ್ ನೀಡಿದ ಕೇಂದ್ರ!

ವದೆಹಲಿ: ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಪೈರಸಿ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಟೆಲಿಗ್ರಾಂಗೆ ನೋಟಿಸ್ ನೀಡಿದೆ. ಕಾನೂನುಬಾಹಿರ ಸಿನಿಮಾ, ಒಟಿಟಿ ಕಂಟೆಂಟ್ ವಿರುದ್ಧ ಕ್ರಮ ಕೈಗೊಂಡು, ಆ ವರದಿಯನ್ನು 15 ದಿನದೊಳಗೆ ಸಲ್ಲಿಸುವಂತೆ ತಿಳಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ನೋಟಿಸ್ ನೀಡಿದ್ದು, ಟೆಲಿಗ್ರಾಂನಲ್ಲಿ ಹರಿದಾಡುತ್ತಿರುವ ಪೈರೇಟೆಡ್ ಚಲನಚಿತ್ರಗಳು ಮತ್ತು ಒಟಿಟಿ ಕಂಟೆಂಟ್‌ಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಟೆಲಿಗ್ರಾಂನ ವಿವಿಧ ಚಾನೆಲ್‌ಗಳು ಮತ್ತು ಗುಂಪುಗಳ ಮೂಲಕ ಹೊಸ ಚಲನಚಿತ್ರಗಳು, ಒಟಿಟಿ ವೇದಿಕೆಗಳ ವಿಷಯಗಳು ಹಾಗೂ ಇತರೆ ಆಡಿಯೋ-ವಿಜುವಲ್ ಕೃತಿಗಳು ಅನಧಿಕೃತವಾಗಿ ಹಂಚಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಕೇಂದ್ರವು 3,000ಕ್ಕೂ ಹೆಚ್ಚು ಟೆಲಿಗ್ರಾಮ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಇದೀಗ ಸರ್ಕಾರವು ಕೇವಲ ಪ್ರತ್ಯೇಕ ಪೈರಸಿ ಲಿಂಕ್‌ಗಳು ಅಥವಾ ಚಾನೆಲ್‌ಗಳನ್ನು ತೆಗೆದುಹಾಕುವ ಕ್ರಮಕ್ಕೆ ಸೀಮಿತವಾಗದೇ, ಸಂಪೂರ್ಣ ವೇದಿಕೆಯ ಜವಾಬ್ದಾರಿಯತ್ತ ಗಮನ ಹರಿಸಿದೆ. ಪೈರಸಿ ತಡೆಗೆ ಟೆಲಿಗ್ರಾಂ ಯಾವ ಕ್ರಮಗಳನ್ನು ಕೈಗೊಂಡಿದೆ? ಮುಂದಿನ ದಿನಗಳಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಯಾವ ವ್ಯವಸ್ಥೆ ರೂಪಿಸಲಿದೆ ಎಂಬುದನ್ನು 15 ದಿನಗಳೊಳಗೆ ವಿವರಿಸಬೇಕಾಗಿದೆ.

ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂ ಮೂಲಕ ಪೈರಸಿ ಪ್ರತಿಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಒಟಿಟಿ ಸಂಸ್ಥೆಗಳು ಮತ್ತು ಚಿತ್ರರಂಗದ ಪ್ರತಿನಿಧಿಗಳಿಳು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಸರ್ಕಾರ ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ.

ನಿಗದಿತ ಅವಧಿಯಲ್ಲಿ ಟೆಲಿಗ್ರಾಂ ಸಮರ್ಪಕ ಉತ್ತರ ನೀಡದಿದ್ದರೆ ಅಥವಾ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಮುಂದಿನ ಕ್ರಮಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: News Kannada