Dailyhunt Logo
  • Light mode
    Follow system
    Dark mode
    • Play Story
    • App Story
ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಿಡ್ನಿ ಘಟಕದ ಅಧ್ಯಕ್ಷರಾಗಿ ಸುರೇಶ್ ಪೂಂಜ ನೇಮಕ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಿಡ್ನಿ ಘಟಕದ ಅಧ್ಯಕ್ಷರಾಗಿ ಸುರೇಶ್ ಪೂಂಜ ನೇಮಕ

ಟೀಲ್: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಆಸ್ಟ್ರೇಲಿಯಾದ ಸಿಡ್ನಿ ಘಟಕದ ಅಧ್ಯಕ್ಷರಾಗಿ ಖ್ಯಾತ ಸಮಾಜಸೇವಕ ಹಾಗೂ ತುಳು ಭಾಷೆ-ಸಂಸ್ಕೃತಿಯ ಅಭಿಮಾನಿ ಶ್ರೀ ಸುರೇಶ್ ಪೂಂಜ ಅವರನ್ನು ನೇಮಕ ಮಾಡಲಾಗಿದೆ.

ಕಾಸರಗೋಡು ತಾಲೂಕಿನ ಕೊಡಿಬೈಲು ಮೂಲದವರಾದ ಸುರೇಶ್ ಪೂಂಜ ಅವರು 1993ರಲ್ಲಿ ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಿ, ಮಧ್ಯಪ್ರಾಚ್ಯದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ 2001ರಿಂದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಅವರು ವಾಹನೋದ್ಯಮ (Automotive Industry) ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿಜೀವನದ ಜೊತೆಗೆ ಸಮಾಜಸೇವೆ, ತುಳು ಭಾಷೆ, ಸಂಸ್ಕೃತಿ ಮತ್ತು ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಸುರೇಶ್ ಪೂಂಜ ಅವರು ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಭಗವದ್ಗೀತೆಯ ನಿಷ್ಠಾವಂತ ಅನುಯಾಯಿಯಾಗಿದ್ದು, ಅದರ ಶಾಶ್ವತ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ರಕ್ತದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಅವರು, ಅಗತ್ಯವಿರುವವರಿಗೆ ಸಹಾಯಹಸ್ತ ಚಾಚುವ ಮೂಲಕ ಸಮುದಾಯದಲ್ಲಿ ಗೌರವ ಗಳಿಸಿದ್ದಾರೆ.

ಅವರ ಸಮಾಜಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಚಲ ಬದ್ಧತೆಯನ್ನು ಪರಿಗಣಿಸಿ, ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅವರು ಶ್ರೀ ಸುರೇಶ್ ಪೂಂಜ ಅವರನ್ನು ಆಸ್ಟ್ರೇಲಿಯಾದ ಸಿಡ್ನಿ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.

2028ರ ಶತಮಾನೋತ್ಸವದ ಅಂಗವಾಗಿ ಆಸ್ಟ್ರೇಲಿಯಾದಲ್ಲಿ ತುಳುವ ಮಹಾಸಭೆಯ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಚಾರ, ಯುವಜನರನ್ನು ಸಂಘಟಿಸುವುದು ಹಾಗೂ ಸಿಡ್ನಿ ಮತ್ತು ಆಸ್ಟ್ರೇಲಿಯಾದ ಇತರ ಭಾಗಗಳಲ್ಲಿ ತುಳುವ ಮಹಾಸಭೆಯ ಘಟಕಗಳನ್ನು ವಿಸ್ತರಿಸುವ ಜವಾಬ್ದಾರಿಯನ್ನು ಅವರು ವಹಿಸಲಿದ್ದಾರೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ನ ಗೌರವಾಧ್ಯಕ್ಷ ಶ್ರೀ ಶ್ರೀಹರಿನಾರಾಯಣ ದಾಸ ಅಸ್ರಣ್ಣ, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ಶ್ರೀ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಕರ್ನಾಟಕ ರಾಜ್ಯ ಅಧ್ಯಕ್ಷ ಶ್ರೀ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಅವರು ಹರ್ಷದಿಂದ ಸ್ವಾಗತಿಸಿ, ಶ್ರೀ ಸುರೇಶ್ ಪೂಂಜ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಘಟಕವು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ ಹಾಗೂ ವಿಶ್ವದ ತುಳುವರನ್ನು ಒಗ್ಗೂಡಿಸುವ ಕಾರ್ಯಕ್ಕೆ ಹೊಸ ಚೈತನ್ಯ ದೊರಕಲಿ ಎಂದು ಶುಭ ಹಾರೈಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: News Kannada