ಉಡುಪಿ: ನಗರದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿದ್ದರೂ ಆರೋಗ್ಯ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಪ್ರತ್ಯಕ್ಷ ನಿದರ್ಶನ ನಗರದ ಹೃದಯಭಾಗ ಪಿಪಿಸಿ ಕಾಲೇಜಿನ ಪಕ್ಕದಲ್ಲೇ ಬಾಯ್ಬಿಟ್ಟಿರುವ ಬೃಹತ್ ಸೊಳ್ಳೆ ಉತ್ಪತ್ತಿ ತಾಣ.
ಹೌದು, ಉಡುಪಿಯ ಉದ್ಯಮಿ ಕಲ್ಸಂಕದಲ್ಲಿರುವ ಜಯಲಕ್ಷ್ಮೀ ಸ್ಟೋರ್ಸ್ ನ ಮಾಲಕ ಅನಂತ ರೈ ಕಾಮತ್ ಅವರ ಕಟ್ಟಡ ಕಾಮಗಾರಿ ಹಲವು ಕಾರಣಗಳಿಂದ ಪೂರ್ಣವಾಗದೆ ಸ್ಥಗಿತಗೊಂಡಿದೆ.
ಕೇವಲ ಪಿಲ್ಲರ್ ಹಾಕಿ ಕಾಮಗಾರಿ ಸ್ಥಗಿತಗೊಂಡ ಕಾರಣ ಸ್ಥಳದಲ್ಲಿ ನೀರು ತುಂಬಿ ಡೆಂಗ್ಯು ಪ್ರಕರಣ ಮತ್ತಷ್ಟು ಹೆಚ್ಚಾಗುವ ಆತಂಕ ನಿರ್ಮಾಣವಾಗಿದೆ.
ಕಳೆದ ಹಲವು ವರ್ಷಗಳಿಂದ ಈ ಸ್ಥಳದಲ್ಲಿ ನೀರು ತುಂಬಿದ್ದು ನೀರು ಖಾಲಿ ಮಾಡುವ ಗೋಜಿಗೆ ಜಾಗದ ಮಾಲೀಕ ಅನಂತ ರೈ ಹೋಗಿಲ್ಲ. ಈ ಸ್ಥಳದ ಅಕ್ಕಪಕ್ಕದಲ್ಲಿ ನೂರಾರು ಮನೆಗಳು, ಅಂಗಡಿ ಮುಗ್ಗಟ್ಟು, ಮುಖ್ಯವಾಗಿ ಸಾವಿರಾರು ವಿದ್ಯಾರ್ಥಿಗಳು ಕಲಿಯುವ ಪ್ರತಿಷ್ಟಿತ ಪಿಪಿಸಿ ಕಾಲೇಜು ಇರೋದ್ರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಈ ಬಗ್ಗೆ ಪತ್ರಕರ್ತರು ಡಿಎಚ್ ಓ ಡಾ. ಬಸವರಾಜ ಜಿ.ಹುಬ್ಬಳ್ಳಿ ಅವರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಕೇವಲ ಫಾಗಿಂಗ್ ಮಾಡಿ ಸುಮ್ಮನಾಗುತ್ತಿರುವ ಆರೋಗ್ಯ ಇಲಾಖೆ ಇಂತಹ ಹಲವು ಅಪೂರ್ಣ ಕಾಮಗಾರಿ ಸ್ಥಳದಲ್ಲಿ ನಿಂತ ನೀರನ್ನ ತೆರವು ಮಾಡಿಸುವ ಕಡೆ ಗಮನ ಹರಿಸಬೇಕಿದೆ.

