Dailyhunt Logo
  • Light mode
    Follow system
    Dark mode
    • Play Story
    • App Story
ಆರೋಗ್ಯಕರ ದೇಹಕ್ಕೆ ದ್ರಾಕ್ಷಿ : ಪ್ರತಿದಿನ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ?

ಆರೋಗ್ಯಕರ ದೇಹಕ್ಕೆ ದ್ರಾಕ್ಷಿ : ಪ್ರತಿದಿನ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ?

News Next 3 days ago

ಣ್ಣುಗಳ ರಾಣಿ ಎಂದು ಕರೆಯಲ್ಪಡುವ ದ್ರಾಕ್ಷಿ ಸಿಹಿಯಾದ, ಸ್ವಲ್ಪ ಹುಳಿಯಿಂದ ಕೂಡಿದ ರುಚಿಯಾದ ಹಣ್ಣು. ಪ್ರಪಂಚದಾದ್ಯಂತ ಹಸಿರು, ಕೆಂಪು, ನೀಲಿ, ನೇರಳೆ, ಕಪ್ಪು ಮುಂತಾದ ಬಣ್ಣಗಳಲ್ಲಿ ಸಿಗುವ ಚಿಕ್ಕ ಹಣ್ಣು. ಗೊಂಚಲುಗಳಾಗಿ ಬೆಳೆಯುವ ಈ ಹಣ್ಣನ್ನು ಹೆಚ್ಚಾಗಿ ವೈನ್‌ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ದ್ರಾಕ್ಷಾರಸ ಪ್ರಾಚೀನ ಕಾಲದಿಂದಲೂ ಜನಪ್ರಿಯ ಪಾನೀಯವಾಗಿ ಗುರುತಿಸಿಕೊಂಡಿದೆ. ಋತುಮಾನಗಳಲ್ಲಿ ತಾಜಾ ಹಣ್ಣುಗಳಾಗಿ ದೊರೆತರೆ ಉಳಿದ ಸಮಯದಲ್ಲಿ ಒಣ ಹಣ್ಣುಗಳಾಗಿ ಸದಾ ಲಭ್ಯವಿರುತ್ತದೆ. ಹಾಗಾಗಿ ದ್ರಾಕ್ಷಿ ಒಂದಲ್ಲ ಒಂದು ರೂಪದಲ್ಲಿ ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣು. ಅಗಾಧ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳಿಂದ ಕೂಡಿದ ದ್ರಾಕ್ಷಿ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಹೃದಯ ಆರೋಗ್ಯ ಕಾಪಾಡುವುದರಿಂದ ಹಿಡಿದು ಕ್ಯಾನ್ಸರ್‌ ಅಪಾಯವನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನಗಳು ತಿಳಿಸಿವೆ. ಕೇವಲ ದ್ರಾಕ್ಷಿ ಹಣ್ಣಷ್ಟೇ ಅಲ್ಲ ಅದರ ಚಿಕ್ಕ ಬೀಜಗಳು ಸಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ವರ್ಷವಿಡೀ ಸಿಗುವ ದ್ರಾಕ್ಷಿ ಹಣ್ಣಿನಿಂದ ಏನೆಲ್ಲಾ ಪ್ರಯೋಜನವಿದೆ ಎಂದು ನೋಡೋಣ.

ಹೃದಯದ ಆರೋಗ್ಯಕ್ಕೆ ದ್ರಾಕ್ಷಿ

ದ್ರಾಕ್ಷಿ ಹಣ್ಣು ಕ್ಯಾರೊಟಿನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಅನೇಕ ರೀತಿಯ ಫೈಟೊನ್ಯೂಟ್ರಿಯೆಂಟ್‌ಗಳನ್ನು ಹೊಂದಿದೆ. ಅವು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿವೆ. ಇವು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ದೇಹದ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ದ್ರಾಕ್ಷಿಯಲ್ಲಿ ಕಂಡುಬರುವ ಪಾಲಿಫಿನಾಲ್ ರೆಸ್ವೆರಾಟ್ರೋಲ್ ರಕ್ತನಾಳಗಳನ್ನು ಹಿಗ್ಗಿಸಲು, ರಕ್ತ ಪರಿಚಲನೆ ಸುಧಾರಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. 100 ಗ್ರಾಂ ದ್ರಾಕ್ಷಿಯಲ್ಲಿ ಸುಮಾರು 191 ಮಿಲಿಗ್ರಾಂ ಪೊಟ್ಯಾಸಿಯಮ್ ಇರುತ್ತದೆ. ಹೆಚ್ಚು ಪೊಟ್ಯಾಸಿಯಮ್ ಸೇವಿಸುವುದರಿಂದ ಮತ್ತು ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದರಿಂದ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ದೇಹದಲ್ಲಿ ಹೆಚ್ಚುವರಿ ಸೋಡಿಯಂನ ಪರಿಣಾಮಗಳನ್ನು ಕಡಿಮೆ ಮಾಡಲು ಪೊಟ್ಯಾಸಿಯಮ್ ಸಹ ಉಪಯುಕ್ತವಾಗಿದೆ. ಉಪ್ಪು ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರವು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಚರ್ಮದ ಆರೋಗ್ಯದಲ್ಲಿ ದ್ರಾಕ್ಷಿ ಹಣ್ಣಿನ ಪಾತ್ರ

ದ್ರಾಕ್ಷಿಯಲ್ಲಿರುವ ರೆಸ್ವೆರಾಟ್ರೊಲ್ ಚರ್ಮದ ಆರೋಗ್ಯಕ್ಕೂ ಒಳ್ಳೆಯದು ಎಂದು ಸಂಶೋಧನೆ ತೋರಿಸುತ್ತದೆ. ಇದು ವಯಸ್ಸಾದ ಚಿಹ್ನೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಜೊತೆಗೆ ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಮೊಡವೆ, ಎಕ್ನಿಯಂತಹ ಕೆಲವು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಆಂತರಿಕವಾಗಿ ಬಲಗೊಳಿಸುತ್ತವೆ.

ಕಣ್ಣು ಮತ್ತು ಮಿದುಳಿನ ಆರೋಗ್ಯಕ್ಕೆ ದ್ರಾಕ್ಷಿ

ದ್ರಾಕ್ಷಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣಿನ ರೆಟಿನಾವನ್ನು ರಕ್ಷಿಸುವ ಪ್ರೋಟೀನ್‌ಗಳ ಮಟ್ಟವು ಹೆಚ್ಚಾಗುತ್ತದೆ ಮತ್ತು ಕಣ್ಣಿನ ಉರಿಯೂತಕ್ಕೆ ಸಂಬಂಧಿಸಿದ ಪ್ರೋಟೋನ್‌ಗಳ ಮಟ್ಟವನ್ನು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ಕಣ್ಣಿನ ಕಾರ್ಯವನ್ನು ಸುಧಾರಿಸುವ ಜೊತೆಗೆ ಮಿದುಳಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ರೆಸ್ವೆರಾಟ್ರೊಲ್ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಮತ್ತು ಆಲೋಚನಾ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಲ್ಝೈಮರ್‌ನಂತಹ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ರೂಪುಗೊಳ್ಳುವ ಪ್ಲೇಕ್‌ಗಳು ಮತ್ತು ಸ್ವತಂತ್ರ ರಾಡಿಕಲ್‌ಗಳ ಪರಿಣಾಮಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಸಂಧೀವಾತ ನಿವಾರಣೆ

ಪ್ರತಿದಿನ ದ್ರಾಕ್ಷಿಯನ್ನು ತಿನ್ನುವುದರಿಂದ ಮೊಣಕಾಲು ನೋವು, ವಿಶೇಷವಾಗಿ ಅಸ್ಥಿಸಂಧಿವಾತದಿಂದ ಉಂಟಾಗುವ ನೋವು ಕಡಿಮೆಯಾಗುತ್ತದೆ. ದ್ರಾಕ್ಷಿಯಲ್ಲಿರುವ ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳು ಕೀಲುಗಳ ನಮ್ಯತೆ ಮತ್ತು ಚಲನಶೀಲತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದ್ರಾಕ್ಷಿಯಲ್ಲಿರುವ ಕೆಲವು ಕಿಣ್ವಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಇದು ಅಪಧಮನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ಹೃದಯದ ಕಾರ್ಯವನ್ನು ಸುಧಾರಿಸಲು ಮತ್ತು ದೇಹದ ಜೀವಕೋಶಗಳನ್ನು ದುರಸ್ತಿ ಮಾಡುವ ಕೆಲಸಕ್ಕೆ ಸಹಾಯ ಮಾಡುತ್ತದೆ.

ದಿನಕ್ಕೆ ಎಷ್ಟು ದ್ರಾಕ್ಷಿ ತಿನ್ನಬೇಕು?

ದ್ರಾಕ್ಷಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಬಿ12, ವಿಟಮಿನ್ ಸಿ, ವಿಟಮಿನ್ ಡಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಅನೇಕ ಪೋಷಕಾಂಶಗಳಿವೆ. ಆದರೂ ಇದರಲ್ಲಿ ನೈಸರ್ಗಿಕ ಸಕ್ಕರೆಯೂ ಇದೆ. ಆದ್ದರಿಂದ ಅತಿಯಾಗಿ ದ್ರಾಕ್ಷಿಯನ್ನು ತಿನ್ನಬಾರದು. ದಿನವೊಂದಕ್ಕೆ 10 ರಿಂದ 15 ದ್ರಾಕ್ಷಿ ಹಣ್ಣುಗಳನ್ನು ತಿನ್ನಬಹುದು. ದ್ರಾಕ್ಷಿಯನ್ನು ನೇರವಾಗಿ ತಿನ್ನಬಹುದು. ಅಷ್ಟೇ ಅಲ್ಲದೇ ಸಲಾಡ್‌ಗೆ ಸೇರಿಸಿಕೊಳ್ಳಬಹುದು. ಒಣ ದ್ರಾಕ್ಷಿಯನ್ನು ಸಿಹಿತಿಂಡಿಗಳು, ಟಾರ್ಟ್‌, ಪನ್ನಾ ಕೋಟಾ, ಕೇಕ್‌, ಮೊಸರನ್ನ ಮುಂತಾದವುಗಳಲ್ಲಿ ಸೇರಿಸಿ ತಿನ್ನಬಹುದು.

Watch on YouTube

Dailyhunt
Disclaimer: This content has not been generated, created or edited by Dailyhunt. Publisher: News Next