Dailyhunt Logo
  • Light mode
    Follow system
    Dark mode
    • Play Story
    • App Story
ಫುಟ್‌ಪಾತ್ ತೆರವಿಗೆ ಆಕ್ರೋಶ: ವಿರೋಧಿಸಿ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ಫುಟ್‌ಪಾತ್ ತೆರವಿಗೆ ಆಕ್ರೋಶ: ವಿರೋಧಿಸಿ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

News Next 4 days ago

ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿರುವ ಬೀದಿಬದಿ ವ್ಯಾಪಾರಿಗಳು ಬುಧವಾರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಹಲವು ಭಾಗಗಳಿಂದ ಆಗಮಿಸಿದ್ದ ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ನಗರದ ವಿವಿಧ ವಲಯಗಳಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಅನೇಕ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ವ್ಯಾಪಾರ ಸ್ಥಗಿತಗೊಂಡಿದ್ದು, ಕುಟುಂಬದ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ವ್ಯಾಪಾರಿಗಳು ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರು. ತೆರವುಗೊಳಿಸಲಾದ ವ್ಯಾಪಾರಿಗಳಿಗೆ ಇದೇ ಸ್ಥಳವನ್ನು ಮರುಹಂಚಿಕೆ ಮಾಡಬೇಕು ಅಥವಾ ಸಮೀಪದಲ್ಲಿ ಸೂಕ್ತ ಪರ್ಯಾಯ ಸ್ಥಳ ಒದಗಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ಜಪ್ತಿ ಮಾಡಿರುವ ಸರಕುಗಳನ್ನು ಕೂಡಲೇ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಬೀದಿಬದಿ ವ್ಯಾಪಾರಿಗಳ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ನಗರದ ಎಲ್ಲಾ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಹೊಸ ನಗರ ಪಾಲಿಕೆಗಳಲ್ಲಿ ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸುವುದು ಹಾಗೂ ಫುಟ್‌ಪಾತ್‌ಗಳ ವೈಜ್ಞಾನಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಪ್ರತಿಭಟನಾಕಾರರು ಸಚಿವ ಕೃಷ್ಣ ಬೈರೇಗೌಡ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕುರಿತು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಗೆ ಕರ್ನಾಟಕದ ವಿವಿಧ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳು, ಜಂಟಿ ಹೋರಾಟ ಸಮಿತಿ ಹಾಗೂ ಮಹಿಳಾ ವ್ಯಾಪಾರಿಗಳ ಸಂಘಟನೆಗಳು ಬೆಂಬಲ ಸೂಚಿಸಿ ಭಾಗವಹಿಸಿದ್ದವು.

Dailyhunt
Disclaimer: This content has not been generated, created or edited by Dailyhunt. Publisher: News Next