Dailyhunt Logo
  • Light mode
    Follow system
    Dark mode
    • Play Story
    • App Story
ರಾಜ್ಯ ರಾಜಕೀಯಕ್ಕೆ ಎಚ್.ಡಿ. ಕುಮಾರಸ್ವಾಮಿ ಮರು ಎಂಟ್ರಿ ಮುನ್ಸೂಚನೆ

ರಾಜ್ಯ ರಾಜಕೀಯಕ್ಕೆ ಎಚ್.ಡಿ. ಕುಮಾರಸ್ವಾಮಿ ಮರು ಎಂಟ್ರಿ ಮುನ್ಸೂಚನೆ

News Next 12 hrs ago

ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಕರ್ನಾಟಕದ ರಾಜಕಾರಣದಲ್ಲಿ ಸಕ್ರಿಯರಾಗುವ ಸ್ಪಷ್ಟ ಮುನ್ಸೂಚನೆಗಳು ಸಿಗುತ್ತಿವೆ. ವಿಧಾನಸಭೆ ಚುನಾವಣೆಗೆ ಇನ್ನೂ ಕಾಲಾವಕಾಶ ಬಾಕಿ ಇದ್ದರೂ, ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವವನ್ನು ಗಟ್ಟಿಗೊಳಿಸಲು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಎಚ್‌ಡಿಕೆ ಅವರ ಅನಿವಾರ್ಯತೆ ಪಕ್ಷಕ್ಕೆ ಎದುರಾಗಿದೆ.

ಇದೇ ಕಾರಣಕ್ಕೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿದ್ದರೂ, ಅವರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.

ಈ ಹೋರಾಟದ ಭಾಗವಾಗಿ ಕುಮಾರಸ್ವಾಮಿ ಅವರು ನೇರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ರಾಜಕೀಯ ದಾಳಿ ಆರಂಭಿಸಿದ್ದಾರೆ. ಮುಂಚೆ ಕೇವಲ ಸಣ್ಣಪುಟ್ಟ ಹೇಳಿಕೆಗಳಿಗಷ್ಟೇ ಸೀಮಿತವಾಗಿದ್ದ ಟೀಕೆಗಳು, ಈಗ ನಿರಂತರ ದಾಖಲೆಗಳ ಬಿಡುಗಡೆಯ ಸ್ವರೂಪ ಪಡೆದುಕೊಂಡಿವೆ. ಮುಖ್ಯವಾಗಿ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯಲ್ಲಿ ಬಿಎಂಐಸಿಎಪಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಅಕ್ರಮವಾಗಿ ಜಮೀನು ಲೂಟಿ ಮಾಡಲು ಮುಖಂಡತ್ವ ವಹಿಸಿದ್ದರು ಎಂದು ಎಚ್‌ಡಿಕೆ ಗಂಭೀರ ಆರೋಪ ಮಾಡಿದ್ದಾರೆ. ಇದು ದೇಶದಲ್ಲೇ ದೊಡ್ಡ ಸಂಚಲನ ಮೂಡಿಸಿದ್ದ 2ಜಿ ಹಗರಣಕ್ಕಿಂತಲೂ ದೊಡ್ಡ ಪ್ರಮಾಣದ ಅಕ್ರಮ ಎಂದು ಅವರು ಬಣ್ಣಿಸಿದ್ದಾರೆ.

ಇದರ ಜೊತೆಗೆ ಡಿಕೆಶಿ ಅವರ ಆಸ್ತಿ ಗಳಿಕೆಯ ಕುರಿತಾಗಿಯೂ ಕುಮಾರಸ್ವಾಮಿ ತೀಕ್ಷ್ಣ ಪ್ರಶ್ನೆಗಳನ್ನು ಎತ್ತಿದ್ದಾರೆ. 2003 ರ ಅವಧಿಯಲ್ಲಿ ಕೇವಲ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ಡಿ.ಕೆ. ಶಿವಕುಮಾರ್ ಅವರ ಆಸ್ತಿಯು, 2023 ರ ವೇಳೆಗೆ ಬರೋಬ್ಬರಿ 1413 ಕೋಟಿ ರೂಪಾಯಿಗಳಿಗೆ ಏರಿಕೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಈ ಅಭೂತಪೂರ್ವ ಆಸ್ತಿ ಬೆಳವಣಿಗೆಯ ಹಿಂದೆ ಅಕ್ರಮ ಭೂ ವ್ಯವಹಾರಗಳ ಕೈವಾಡವಿದೆ ಎಂದು ದೂರಿದ್ದಾರೆ.

ಈ ರಾಜಕೀಯ ಜಿದ್ದಾಜಿದ್ದಿನ ಹಿಂದೆ ದೊಡ್ಡ ತಂತ್ರಗಾರಿಕೆಯಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಸನ್ನದ್ಧವಾಗುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರದ ಪ್ರಭಾವಿ ನಾಯಕರಾಗಿರುವ ಡಿ.ಕೆ. ಶಿವಕುಮಾರ್ ಈ ಮೈತ್ರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಹೀಗಾಗಿ ಡಿಕೆಶಿ ಅವರ ಜನಪ್ರಿಯತೆಯನ್ನು ತಗ್ಗಿಸಲು ಹಾಗೂ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಕುಮಾರಸ್ವಾಮಿ ಅವರು ನೈಸ್ ಮತ್ತು ಬಿಡದಿ ಜಮೀನು ವ್ಯವಹಾರದ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಸಮೀಕರಣವನ್ನು ಬದಲಾಯಿಸುವ ಮುನ್ಸೂಚನೆ ನೀಡಿವೆ.

Watch on YouTube

Dailyhunt
Disclaimer: This content has not been generated, created or edited by Dailyhunt. Publisher: News Next