Monday, 26 Apr, 2.49 pm Oneindia

ಪ್ರಮುಖ ಸುದ್ದಿ
ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಿದ ಮಹಿಳೆಯರು!

ಮಂಗಳೂರು, ಏಪ್ರಿಲ್ 26; ಕೋವಿಡ್ ಎಂಬ ಮಾರಕ ವೈರಸ್ ಇಡೀ ಮನುಜ ಕುಲವನ್ನು ಭೀಕರವಾಗಿ ಕಾಡುತ್ತಿದೆ. ಕಣ್ಣಿಗೆ ಕಾಣದ ವೈರಸ್‌ನಿಂದ ಮನುಷ್ಯ, ಮನುಷ್ಯ ನಡುವೆ ದೈಹಿಕ ಅಂತರ ಜೊತೆಗೆ ಮಾನಸಿಕವಾಗಿಯೂ ಅಂತರವಿರುವಂತೆ ಮಾಡಿದೆ.

ಕೊರೊನಾ ಎಂಬ ಹೆಮ್ಮಾರಿ ಜನರನ್ನು ಭಯಭೀತಿಗೊಳಿಸಿದರೂ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಮಹಿಳಾ ತಂಡ ಕೊರೊನಾ ಆತಂಕದ ನಡುವೆಯೂ ಸಾಮಾಜಿಕ ಬದ್ಧತೆ ಮೆರೆದಿದೆ. ನ್ಯಾಷನಲ್ ವಿಮೆನ್ ಫ್ರಂಟ್ ಸಂಘಟನೆಯ ಮಹಿಳಾ ತಂಡ ಕೊರೊನಾದಿಂದ ಮೃತಪಟ್ಟ ಮುಸ್ಲಿಂ ಮಹಿಳೆಯರ ಅಂತಿಮ ವಿಧಿ ವಿಧಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ.

ಕೊರೊನಾ ಹೆಸರಿನಲ್ಲಿ 420 ಕೆಲಸ ಮಾಡಿದ ಅಪೋಲೊ ಆಸ್ಪತ್ರೆ ವಿರುದ್ಧ ಎಫ್‌ಐಆರ್ !

ಕೋವಿಡ್‌ನಿಂದ ಮೃತಪಟ್ಟ ಮಹಿಳೆಯರ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ಮಾಡುವ ಕಾರ್ಯದಲ್ಲಿ ಈ ಸಂಘಟನೆ ತೊಡಗಿದೆ. ಕೊರೊನಾದಿಂದ ಮೃತಪಟ್ಟವರ ಶವದ ಸಮೀಪಕ್ಕೆ ಬರಲು ಮನೆಯವರೇ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಈ ಮಹಿಳೆಯರ ತಂಡವೇ ಅಂತಿಮ ಕಾರ್ಯವನ್ನು ಮಾಡುತ್ತದೆ.

ಮಂಗಳೂರು; ಗಿಡವಾಗುವ ಪರಿಸರ ಸ್ನೇಹಿ ಮಾಸ್ಕ್ ತಯಾರಿ

ಕೋವಿಡ್ ಒಂದನೇ ಅಲೆಯ ಸಂದರ್ಭದಲ್ಲೂ ಈ ತಂಡ ಕೋವಿಡ್ ಮತ್ತು ಕೋವಿಡ್ ಅಲ್ಲದೆ ಮೃತಪಟ್ಟ 200ಕ್ಕೂ ಅಧಿಕ ಮುಸ್ಲಿಂ ಮಹಿಳೆಯರ ಅಂತಿಮ ವಿಧಿ ವಿಧಾನವನ್ನು ಮುಸ್ಲಿಂ ಸಂಪ್ರದಾಯದಂತೆ ಮಾಡಿತ್ತು.

ಮಂಗಳೂರು; ಜಾತ್ರೆ ಮಾಡಿದ ದೇವಾಲಯದ ವಿರುದ್ಧ ಪ್ರಕರಣ

ಈ ಬಾರಿಯೂ ಆ ಸೇವೆಯನ್ನು ಸಂಘಟನೆ ಮುಂದುವರಿಸುತ್ತಿದೆ. ಮೃತಪಟ್ಟ ಕೋವಿಡ್ ರೋಗಿಗಳ ಅಂತಿಮ ವಿಧಿ ವಿಧಾನವನ್ನೂ ಈ ತಂಡ ಮಾಡುತ್ತಿದ್ದು, ಬಜ್ಪೆ, ಬಂಟ್ವಾಳ, ಉಪ್ಪಿನಂಗಡಿ, ಮಂಗಳೂರು ಪರಿಸರದ ಕೋವಿಡ್ ಮೃತರ ಅಂತ್ಯಕ್ರಿಯೆಗಳನ್ನು ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ‌ ವಿವಿಧ ತಾಲೂಕುಗಳಲ್ಲಿ ಈ ತಂಡಗಳಿದ್ದು, ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಕೊರೊನಾ ರೋಗಿ ಮೃತಪಟ್ಟ ಸಂದರ್ಭದಲ್ಲಿ ಸರ್ಕಾರದ ನಿಯಮದ ಪ್ರಕಾರ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನಡೆಸುತ್ತಾರೆ.

"ಪುರುಷ ಮೃತಪಟ್ಟರೆ ಪುರಷರೇ ಅಂತ್ಯಕ್ರಿಯೆ ಗಳನ್ನು ಮಾಡುತ್ತಾರೆ. ಆದರೆ ಮುಸ್ಲಿಂ ಸಂಪ್ರದಾಯದ ಪ್ರಕಾರ ಮುಸ್ಲಿಂ ಮಹಿಳೆ ಮೃತಪಟ್ಟರೆ ಮಹಿಳೆಯರೇ ಶವದ ಸ್ನಾನ ಇನ್ನಿತರ ಕ್ರಿಯೆಗಳನ್ನು ಮಾಡಬೇಕು. ಆದರೆ ಕೊರೊನಾ ಕಾರಣದಿಂದ ಮಹಿಳೆಯರು ಈ ಕ್ರಿಯೆ ಮಾಡಲು ಮುಂದೆ ಬರಲು ಒಪ್ಪಲಿಲ್ಲ. ಹೀಗಾಗಿ ಸಂಘಟನೆಯಿಂದಲೇ ಮಹಿಳಾ ತಂಡವನ್ನು ರಚಿಸಲಾಗಿದೆ" ಎಂದು ನ್ಯಾಷನಲ್ ವಿಮೆನ್ ಫ್ರಂಟ್ ಸಂಘಟನೆಯ ರಾಜ್ಯ ಸದಸ್ಯೆ ಫಾತಿಮಾ ಹೇಳಿದ್ದಾರೆ.

source: oneindia.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: OneIndia Kannada
Top